ಲೋಕದರ್ಶನ ವರದಿ
ಯಡೂರ ದಿ 24: ಉತ್ತರ ಕರ್ನಾಟಕದ ದಕ್ಷಿಣ ಕಾಶೀ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶ್ರೀ ಕ್ಷೇತ್ರ ಯಡೂರ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವದಲ್ಲಿ ಬಂಡಿಗಣಿ ದಾನೇಶ್ವರ ಶ್ರೀಗಳ ದಾಸೋಹ ಕಾರ್ಯ ಶ್ಲಾಘನೀಯವಾದದು. ಎಂದು ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದರು.
ಅವರು ಇಂದು ಯಡೂರ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ದಾಸೋಹ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಶ್ರೀ ದಾನೇಶ್ವರ ಶ್ರೀಗಳ ಜೊತೆಗೂಡಿ ಜಾತ್ರೆಗೆ ಬಂದಂತಹ ಭಕ್ತರಿಗೆ ಪ್ರಸಾದ ವಿತರಿಸಿ ಹರ್ಷ ವ್ಯಕ್ತಪಡಿಸಿ, ನಂತರ ದಾಸೋಹ ಸೇವೆಯನ್ನು ಕುರಿತು ಮಾತನಾಡಿ ಸುಮಾರು 2010 ರಿಂದ ಶ್ರೀ ದಾನೇಶ್ವರರು ಬೃಹತ್ ಪ್ರಮಾಣದಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಪ್ರತಿ ದಿನ ಲಕ್ಷಾಂತರ ಜನರಿಗೆ ಪಂಚ-ಪಕ್ವಾನ ಭೋಜನವನ್ನು ಮಾಡಿ ಜನರ ಮನಸ್ಸು ತೃಪ್ತಿಪಡಿಸುತ್ತಿದ್ದಾರೆ. ಅಷ್ಟೆ ಅಲ್ಲದೆ ವರ್ಷದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ, ಅಲ್ಲದೆ ದೇಶದ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ಸುಮಾರು 200 ಕ್ಕೂ ಕ್ಷೇತ್ರಗಳಲ್ಲಿ ಅನ್ನದಾಸೋಹ ಸೇವೆಯನ್ನು ಕಳೆದ 45 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಜಾತ್ರೆಯ ಎಲ್ಲಾ ಮಹತ್ವದ ಆಕರ್ಷಣೆಯ ಕಾರ್ಯಗಳಲ್ಲಿ ದಾನೇಶ್ವರರು ಮಾಡುವ ದಾಸೋಹ ಕಾರ್ಯ ಅಭೂತಪೂರ್ವ ಕಾರ್ಯವಾಗಿದೆ. ಎಲ್ಲ ದಾನಗಳಲ್ಲಿ ಅನ್ನ ದಾನವೇ ಶ್ರೇಷ್ಠ ದಾನವಾಗಿದೆ. ಈ ಅನ್ನ ಸವಿದವನ ಮನ ಶಾಂತವಾಗಿರುತ್ತದೆ. ಹಸಿದ ಹೊಟ್ಟೆಗೆ ಅನ್ನ ನೀಡಲು ಬಂಡಿಗಣಿ ಮಠ ಆದ್ಯತೆ ನೀಡುತ್ತಿದೆ. ಉಳ್ಳವರ ಮನೆಯಲ್ಲಿ ಸಿಗದೆ ಇರುವ ತಿಂಡಿ, ತಿನಿಸುಗಳು ದಾನೇಶ್ವರರ ದಾಸೋಹದಲ್ಲಿ ಬಂದ ಎಲ್ಲ ಭಕ್ತರಿಗೂ ತೃಪ್ತಿದಾಯಕವಾಗಿ ಬಡಿಸುತ್ತಾರೆ ಹಾಗೂ ಕಲಿಯುಗದ ದಾಸೋಹದ ಬಸವಣ್ಣ ಆಗಿದ್ದಾರೆ ಎಂದು ಹೇಳಿದರು.
ಅಲ್ಲದೆ ಬಂಡಿಗಣಿ ಶ್ರೀಗಳು ಮಾಡುತ್ತಿರುವ ದಾಸೋಹ ಹಾಗೂ ಧಾರ್ಮಿಕ ಕಾರ್ಯಗಳ ಶ್ರೀಗಳ ಸಂಕಲ್ಪದಂತೆ ಅವರ ಭಕ್ತ ಸಮೂಹವು ಸ್ವ ಪ್ರೇರಣೆಯಿಂದ ಭಕ್ತಿಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಬಂಡಿಗಣಿಯ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ "ದಾಸೋಹ ರತ್ನ" ದಾನೇಶ್ವರ ಶ್ರೀಗಳು ಮಾತನಾಡಿ 1970 ರಿಂದ ದಾಸೋಹವು ಸರ್ವ ದೇವಾಲಯಗಳ ಸಹಾಯದಿಂದ ಮೊದಲು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ, ಈಗ ಬೃಹತ್ ಪ್ರಮಾಣದ ದಾಸೋಹ ನಡೆಯುತ್ತಿದೆ. ಈ ದಾಸೋಹ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಕ್ಕು ನನಗೆ ಉನ್ನುವದಕ್ಕಿಂತ ಉನಿಸುವುದು ಲೇಸು ಎಂಬ ತತ್ವದ ಹಾಗೇ ದಾಸೋಹ ಸೇವೆಯನ್ನು ನಡೆಸಿಕೊಂಡು ಬರುತಿದ್ದೇವೆ ಎಂದರು, ಈ ಕಾರ್ಯವನ್ನು ಯಾರದೇ ಸಹಾಯ, ಸಹಕಾರವಿಲ್ಲದೆ ನಮ್ಮ ಮಠದ ಫಲವತ್ತಾದ ಭೂಮಿಯಲ್ಲಿ ಬಂದ ಆದಾಯ ಹಾಗೂ ಹೈನುಗಾರಿಕೆ, ಅನೇಕ ಸ್ವತಃ ಕಾರ್ಯಗಳನ್ನು ಮಾಡಿ ಬರುವ ಆದಾಯದಿಂದ ದಾಸೋಹಕ್ಕೆ ಬಳಸಲಾಗುತ್ತಿದೆ, ನಾವು ಸೇವೆ ನಿಷ್ಕಾಮ ಸೇವೆಯಾಗಿರಬೇಕೆಂದು ಹೇಳಿದರು, ಅಲ್ಲದೆ ಜಾತಿ ಬೇದವನ್ನು ಅಳಿದು ಧರ್ಮವನ್ನು ತಿಳಿದು, ಸೂಕ್ಷ್ಮದಲ್ಲಿ ಸೂಕ್ಷ್ಮ ತಿಳಿದು ಎಲ್ಲಾ ಜೀವಿಗಳು ಜೀವಾತ್ಮರಾಗಲ್ಲೆನ್ನುವ ಆಶೆ ನನ್ನದಾಗಿದೆ. ಆದರ್ಶ ಅಧಿಕಾರಿಗಳಿಂದ ಸಮರ್ಥ ಗುರುಗಳಿಂದ ಪತಿರ್ವತಾ ಸ್ತ್ರೀಯರಿಂದ ದೇಶ ಕಲ್ಯಾಣ ಹಾಗೂ ಜಗತ್ತಿನ ಉದ್ದಾರವಾಗುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.
ಸಹಸ್ರಾರರು ಮುತೈದಯರಿಗೆ ಉಡಿತುಂಬಿ ಸರ್ವರಿಗೂ ತಾಂಬೂಲ ನೀಡಿ ಸಂತೈಸಲಾಯಿತು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತಸಮೂಹ ಉಪಸ್ಥಿತರಿದ್ದರು.