ಬೆಂಗಳೂರು, ಡಿ.16 ಮಾಜಿ ಸೈನಿಕರ
ಕಲ್ಯಾಣ ಮತ್ತು ತರಬೇತಿ ಸಂಸ್ಥೆ ಹಾಗೂ ಸಮುದಾಯ ಭವನ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಹುತಾತ್ಮ ಯೋಧರ ಕುಟುಂಬಗಳ ಜೊತೆ ನಾವಿದ್ದೇವೆ. ನಿಮ್ಮ ಸುಃಖ ದುಃಖಗಳಲ್ಲಿ ನಾವು ಸಮಾನ ಭಾಗಿಗಳಾಗುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ಭರವಸೆ ನೀಡಿದ್ದಾರೆ.ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ವಿಜಯ ದಿವಸ್ ಅಂಗವಾಗಿ
ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನಮ್ಮ ಯೋಧರಿಗೆ ನೀಡುತ್ತಿದ್ದ 75 ಲಕ್ಷ
ಅನುದಾನವನ್ನು 1 ಕೋಟಿ ರೂ.ಗೆ ವಿಸ್ತರಿಸಲಾಗಿದೆ. ಎಂವೈಸಿಆರ್ ಚಕ್ರ ಪದಕ ಪಡೆದ ಯೋಧರಿಗೆ ನೀಡುತ್ತಿದ್ದ 12 ಲಕ್ಷ ರೂ. ಹಣವನ್ನು
50 ಲಕ್ಷ ರೂಗೆ ಹೆಚ್ಚಿಸಲು, ವೀರಚಕ್ರ ಪಡೆದವರಿಗೆ
25 ಲಕ್ಷ, ಸೇನಾ ಪದಕ ಪಡೆದವರಿಗೆ 15 ಲಕ್ಷ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.ಭಾರತೀಯ ಯೋಧರ ತ್ಯಾಗದ
ಬಲಿದಾನದ ಪ್ರತೀಕವಾದ ವಿಜಯ ದಿವಸ್‌ನ ಈ ಸಮಾರಂಭದಲ್ಲಿ ಅತ್ಯಂತ ಹೆಮ್ಮೆಯಿಂದ ಪಾಲ್ಗೊಂಡಿದ್ದೇನೆ.
ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಜೀವವನ್ನು ತ್ಯಾಗಮಾಡಿದ ಭಾರತೀಯ ಯೋಧರ ಶೌರ್ಯ ಹಾಗೂ ತ್ಯಾಗಕ್ಕೆ
ನಾವು ಸದಾ ಕೃತಜ್ಞರಾಗಿರುತ್ತೇವೆ.1971ರಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ಯೋಧರ ವಿಜಯವನ್ನು ಸ್ಮರಿಸುವುದೇ
ವಿಜಯ ದಿವಸದ ಉದ್ದೇಶ. ಭಾರತೀಯ ಸೇನೆ, ವಾಯು ಪಡೆ ಮತ್ತು ನೌಕಾ ಪಡೆ ನಮ್ಮ ಗಡಿಗಳನ್ನು ಕಾಯುತ್ತಾ
ನಮ್ಮನ್ನು ಸಂರಕ್ಷಿಸುವ ನಮ್ಮಲ್ಲಿ ಸುರಕ್ಷತಾ ಭಾವವನ್ನು ಮೂಡಿಸುತ್ತಿದೆ. ಭಾರತದ ಸಶಸ್ತ್ರ ಪಡೆಗಳು
ನಮ್ಮಪ್ರಜಾಪ್ರಭುತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ಶಕ್ತಿಯ ಆಧಾರ ಸ್ತಂಭವಾಗಿವೆ ಎಂದು
ಬಣ್ಣಿಸಿದರು. ಸೇನಾಪಡೆಗಳಿಂದ ದೇಶದ ಗಡಿಗಳಲ್ಲಿ ಶಾಂತಿ, ಪೊಲೀಸ್ ವ್ಯವಸ್ಥೆಯಿಂದ ದೇಶದ ಆಂತರಿಕ ಶಾಂತಿ
ಸಾಧ್ಯವಾಗಿದೆ.1999ರಲ್ಲಿ ಪಾಕಿಸ್ತಾನದೊಂದಿಗೆ ಸೆಣಸಿ
ಕಾರ್ಗಿಲ್ ಅನ್ನು ಮತ್ತೆ ಪಶಪಡಿಸಿಕೊಂಡ ನಮ್ಮ ಸೈನಿಕರ ಶೌರ್ಯವನ್ನು ಕೂಡ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.
ಪ್ರವಾಹ, ಭೂಕಂಪ, ಸುನಾಮಿಯಂತಹ ವಿಪತ್ತಿನ ಸಮಯದಲ್ಲೂ ದೇಶದ ನಾಗರಿಕರ ರಕ್ಷಣೆಗೆ ಧಾವಿಸುವ ಸಶಸ್ತ್ರ
ಪಡೆಗಳ ಭಕ್ತಿ, ಸಮರ್ಪಣೆ ಹಾಗೂ ಬದ್ಧತೆ ಅನುಕರಣೀಯವಾದುದು ಎಂದು ಯಡಿಯೂರಪ್ಪ ಹೇಳಿದರು.ಭಾರತೀಯ ಸೈನ್ಯದಲ್ಲಿ
ಕರ್ನಾಟಕದ ಪರಂಪರೆ ಅತ್ಯಂತ ಉಜ್ವಲವಾದುದು. ಇಬ್ಬರು ಜನರಲ್‌ಗಳನ್ನು, ಒಬ್ಬರು ಫೀಲ್ಡ್ ಮಾರ್ಷಲ್‌ರನ್ನು
ಅಸಂಖ್ಯ ಸೇನಾಧಿಕಾರಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಹಮ್ಮೆ ನಮಗಿದೆ. ಕರ್ನಾಟಕ ತಮ್ಮ ಶೌರ್ಯವಂತ
ಪುತ್ರರನ್ನು ಎಂದೂ ಮರೆಯುವುದಿಲ್ಲ. ವಿವಿಧ ಸೈನಿಕರ ಕುಟುಂಬದವರ ಯೋಗಕ್ಷೇಮ ಮತ್ತು ರಕ್ಷಣೆಗೆಂದೇ
ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದ್ದೇವೆ. ಹುತಾತ್ಮ ಯೋಧರ ಮತ್ತು ಮಾಜಿ ಸೈನಿಕರ ಮತ್ತು ಅವರ ಕುಟುಂಬದವರ
ನೆರವಿಗೆ ಸರ್ಕಾರ ಬದ್ಧವಾಗಿದೆ. ಮಾಜಿ ಸೈನಿಕರ ಕಲ್ಯಾಣ
ಮತ್ತು ತರಬೇತಿ ಸಂಸ್ಥೆ ಹಾಗೂ ಸಮುದಾಯ ಭವನ ಸ್ಥಾಪಿಸಲು ಸರ್ಕಾರ ಕೈಗೊಂಡಿದೆ. ಹುತಾತ್ಮ ಯೋಧರ ಕುಟುಂಬಗಳ
ಜೊತೆ ನಾವಿದ್ದೇವೆ. ನಿಮ್ಮ ಸುಃಖ ದುಃಖಗಳಲ್ಲಿ ನಾವು ಸಮಾನ ಭಾಗಿಗಳಾಗುತ್ತೇವೆ. ದೇಶಕ್ಕಾಗಿ ಪ್ರಾಣ
ತ್ಯಾಗ ಮಾಡಿದ ಧೀರರ ಪರಂಪರೆಯನ್ನು ಮುಂದುವರಿಸುವ ಪಣ ತೊಡೋಣ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗೃಹ
ಸಚಿವ ಬಸವರಾಜ ಬೊಮ್ಮಾಯಿ, ಸಂಸದ ರಾಜೀವ್ ಚಂದ್ರಶೇಖರ್, ಮುಖ್ಯಕಾರ್ಯದರ್ಶಿ ಎಂ.ವಿಜಯ ಭಾಸ್ಕರ್, ಸೈನಿಕ
ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.