ಲೋಕದರ್ಶನ ವರದಿ
ಕೊಪ್ಪಳ 23: ಕೊಪ್ಪಳದ ಕಿನ್ನಾಳ್ ಮಾರ್ಗದಿಂದ ಕುಷ್ಟಗಿಗೆ ಹೋಗುವ ರಸ್ತೆಯಲ್ಲಿ ಸಮೂಹ ಆಫೀಸ್ ಹತ್ತಿರ ಬ್ರಿಡ್ಜ್ನ ಸಿಮೆಂಟ್ ಸಂಪೂರ್ಣ ಕಿತ್ತುಹೋಗಿ ಕೇವಲ ಸರಳು ಕಾಣುತ್ತಿವೆ. ಯಾವ ಸಂದರ್ಭದಲ್ಲಿ ಅನಾಹುತ ಸಂಭವಿಸುವುದೋ ಎಂಬ ಭೀತಿ ಈ ಮಾರ್ಗದಲ್ಲಿ ಸಂಚರಿಸುವ ಸವಾರರನ್ನು ಕಾಡುತ್ತಿದೆ.
ಕಾಮಗಾರಿ ಕಳಪೆಯಾಗಿರುವುದರಿಂದ ಬ್ರಿಡ್ಜ್ ಮೇಲಿನ ಕಾಂಕ್ರೀಟ್ ಕಿತ್ತುಹೋಗಿ ಸರಳುಗಳು ತೆರೆದುಕೊಂಡಿವೆ. ಆಕಸ್ಮಾತ್ ಓವರ್ ಲೋಡ್ ವಾಹನಗಳೇನಾದರೂ ಈ ಸರಳುಗಳ ಮೇಳೆ ಸಂಚರಿಸಿದರೆ ಕುಸಿಯುವ ಭೀತಿ ಇದೆ. ಸುಮಾರು ಒಂದೂವರೆ ಮೀಟರ್ ಉದ್ದ ಹಾಗೂ ಒಂದು ಮೀಟರ್ ಅಗಲದ ಸಿಮೆಂಟ್ ಕಿತ್ತುಹೋಗಿ ಸರಳು ಕಾಣುತ್ತಿವೆ. ಅಕಸ್ಮಾತ್ ಈ ಸರಳುಗಳಿಗೆ ಹಾನಿಯಾದರೆ ವಾಹನಗಳು ಬ್ರಡ್ಜ್ ಒಳಗೆ ಸಿಲುಕಿಕೊಳ್ಳುವ ಅಪಾಯ ಇದೆ.
ದ್ವಿಚಕ್ರವಾಹನ ಸವಾರರಿಗಂತೂ ಈ ರಸ್ತೆ ಯಮ ಸ್ವರೂಪಿಯಾಗಿದೆ. ರಸ್ತೆ ಗೊತ್ತಿಲ್ಲದ ಬೇರೆ ಊರನವರು ರಾತ್ರಿ ವೇಳೆ ಈ ಮಾರ್ಗವಾಗಿ ಬಂದರೆ ಅಪಘಾತ ಆಗುವುದು ಖಚಿತ ಎಂಬಂತಿದೆ. ಇದೇ ರೀತಿ ಹಲವು ಬಾರಿ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಸಂಭವಿಸಿದೆ. ಅಲ್ಲದೆ ವಾಹನಗಳ ಚಕ್ರಗಳು ಪಂಕ್ಚರ್ ಆಗಿ ಚಾಲಕರು ಪರದಾಡುವ ಅನಿವಾರ್ಯತೆ ಎದುರಾಗಿದೆ.
ಭಾರಿ ಅನಾಹುತ ಸಂಭವಿಸುವುದಕ್ಕೂ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಹಾಗೂ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಐಡಿವೈಓ ಜಿಲ್ಲಾ ಸಮಿತಿ ಹಾಗೂ ಸಂಘಟನಕಾರ ರಾಯಣ್ಣ ಗಡ್ಡಿ ಆಗ್ರಹಿಸಿದ್ದಾರೆ.