ನವದೆಹಲಿ, ಜ.18- ರೋಮ್ ಶ್ರೇಯಾಂಕಿತ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ ಪೋಗಾಟ್ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಶನಿವಾರ ನಡೆದ 53 ಕೆ.ಜಿ ವಿಭಾಗದ ಮಹಿಳಾ ಫೈನಲ್ ಪಂದ್ಯದಲ್ಲಿ ವಿನೇಶ, ಈಕ್ವೆಡಾರ್‌ನ ಲೂಯಿಸಾ ಎಲಿಜಬೆತ್ ವಾಲ್ವರ್ಡೆ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಇದರೊಂದಿಗೆ ವಿನೇಶ 2020 ರ ಮೊದಲ ಚಿನ್ನದ ಪದಕವನ್ನೂ ಗೆದ್ದಿದ್ದಾರೆ. ಸೆಮಿಫೈನಲ್‌ನಲ್ಲಿ ಚೀನಾದ ಕಿಯಾನ್ಯು ಪಾಂಗ್ ಅವರನ್ನು 4-2 ರಿಂದ ಸೋಲಿಸಿದ್ದ ವಿನೇಶ ಫೈನಲ್ ತಲುಪಿದ್ದರು. ಈ ಪಂದ್ಯದಲ್ಲಿ ಭಾರತೀಯ ಕುಸ್ತಿಪಟುಗಳು ಈವರೆಗೆ ಎರಡು ಬೆಳ್ಳಿ ಗೆದ್ದಿದ್ದಾರೆ. ಸುನೀಲ್ ಕುಮಾರ್ ಮತ್ತು ಅನ್ಶು ಮಲಿಕ್ (57 ಕೆಜಿ) ಭಾರತದ ಪರ ಬೆಳ್ಳಿ ಸಾಧನೆ ಮಾಡಿದ್ದಾರೆ.
ವಿನೇಶ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಕ್ರಿಸ್ಟಿನಾ ಬೆರೆಜಾ ಅವರನ್ನು 10–0 ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ 15–5ರಿಂದ ಚೀನಾದ ಲನುವಾನ್ ಲುವೊ ಅವರನ್ನು ಸೋಲಿಸಿದರು. ಬೆರೆಜಾ ವಿರುದ್ಧದ 'ಡಬಲ್ ಲೆಗ್' ನಲ್ಲೂ ವಿನೇಶ ಜಯಗಳಿಸಿದರು.
ಲುವೋ ಪ್ರಬಲ ಎದುರಾಳಿಯಾಗಿದ್ದು, ಮೊದಲ ಅವಧಿಯ ನಂತರ 5–2ರಲ್ಲಿ ಮುನ್ನಡೆ ಸಾಧಿಸಿದರು ಆದರೆ ಎರಡನೇ ಅವಧಿಯಲ್ಲಿ ವಿನೇಶ ಕೆಲವು ಬುದ್ಧಿವಂತ ತಂತ್ರ ಬಳಿಸಿ ಅಂಕಗಳನ್ನು ಗಳಿಸಿದರು.