ಕುಸ್ತಿ: ಭಜರಂಗ್ ಪೂನಿಯಾ-ರವಿಕುಮಾರ್ ದಹಿಯಾಗೆ ಚಿನ್ನದ ಪದಕ

ರೋಮ್, ಜ 19 :      ಭಾರತದ ಹಿರಿಯ ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ರವಿಕುಮಾರ್ ದಹಿಯಾ ಅವರು ಇಲ್ಲಿ ನಡೆಯುತ್ತಿರುವ ರೋಮ್ ಶ್ರೇಯಾಂಕದ ಸರಣಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.   

ಫೈನಲ್ ಹಣಾಹಣಿಯಲ್ಲಿ ಭಜರಂಗ್ ಪೂನಿಯಾ ಅವರು ಅಮೆರಿಕದ ಜೋರ್ಡನ್ ಒಲಿವರ್ ವಿರುದ್ಧ 4-3 ಅಂತರದಲ್ಲಿ ಗೆದ್ದು ಸ್ವರ್ಣ ಪದಕ ತನ್ನದಾಗಿಸಿಕೊಂಡರು. 61 ಕೆ.ಜಿ ಮತ್ತೊಂದು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ರವಿಕುಮಾರ್ ದಹಿಯಾ ಅವರು 6-0 ಅಂತರದಲ್ಲಿ ಕಜಕಸ್ತಾನದ ನುರ್ಬೊಲತ್ ಅಬ್ದುಲಿಯೆವ್ ವಿರುದ್ಧ ಗೆದ್ದು ಬಂಗಾರ ಗೆದ್ದರು.   

ಭಾರತದ ಜಿತೇಂದರ್ (74 ಕೆ.ಜಿ) ಹಾಗೂ ದೀಪಕ್ ಪೂನಿಯಾ (86 ಕೆ.ಜಿ) ಅವರು ಇದಕ್ಕೂ ಮುನ್ನ ಸೋಲು ಅನುಭವಿಸಿದ್ದರು. ಕಿರಿಯರ ವಿಶ್ವ ಚಾಂಪಿಯನ್ ಹಾಗೂ ಕಳೆದ ವರ್ಷ ಹಿರಿಯರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ವಿಜೇತ  ದೀಪಕ್ ಮೊದಲನೇ ಸುತ್ತಿನ ಪಂದ್ಯದಲ್ಲಿಯೇ 1-11 ಅಂತರದಲ್ಲಿ ಆ್ಯಡ್ರಿಯನ್ ರಾಮೋಸ್ ಎದುರು ಪರಾಭವಗೊಂಡರು.    

ಜಿತೇಂದರ್ ಅವರು ಉಕ್ರೈನ್ ಡೆನ್ಯಾಸ್ ಪ್ಯಾವ್ಲೊವ್ ವಿರುದ್ಧ ಮೊದಲನೇ ಸುತ್ತಿನಲ್ಲಿ 10-1 ಅಂತರದಲ್ಲಿ ಜಯ ಸಾಧಿಸಿದ್ದರು. ಆದರೆ, ಎರಡನೇ ಸುತ್ತಿನಲ್ಲಿ ಟರ್ಕಿಯ ಸೊನೆರ್ ಡೆರ್ಮಿಟಸ್ ವಿರುದ್ಧ 0-4 ಅಂತರದಲ್ಲಿ ಸೋಲು ಅನುಭವಿಸಿದ್ದರು.  

ಭಜರಂಗ್ ಹಾಗೂ ರವಿಕುಮಾರ್ ದಹಿಯಾ ಅವರು ದೇಶಕ್ಕೆ ಪದಕ ಗೆದ್ದ ವಿನೇಶ್ ಪೊಗಟ್, ಅಶು ಮಲಿಕ್ ಹಾಗೂ ಸಜನ್ ಭನ್ವಾಲ್, ಗುರುಪ್ರೀತ್ ಸಿಂಗ್ ಹಾಗೂ ಸುನೀಲ್ ಕುಮಾರ್  ಅವರ ಪಟ್ಟಿಗೆ ಸೇರ್ಪಡೆಯಾದರು.