ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

ಧಾರವಾಡ 9:  ಇತ್ತಿಚಿನ ದಿನಗಳಲ್ಲಿ ಹದಿಹರೆಯದವರು ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಸ್ವಾಸ್ಥ್ಯ ಸಮಾಜ ರೂಪಿಸುವಲ್ಲಿ ಮಾರಕವಾಗಿ ಪರಿಣಮಿಸಿದೆ. ತಂದೆ-ತಾಯಿಗಳು ಈ ವಿಚಾರವಾಗಿ ಮಕ್ಕಳ ಮೇಲೆ ಸ್ವಲ್ಪ ಕಾಳಜಿವಹಿಸುವ ಅಗತ್ಯವಿದೆ ಎಂದು ಜೆ.ಎಸ್‌.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್‌) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ-2024 ನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆತ್ಮಹತ್ಯೆ ತಡೆಗಟ್ಟುವ ವಿಶೇಷ ಅತಿಥಿ ಉಪನ್ಯಾಸವನ್ನು ಆಯೋಜಿಸಿದ್ದು, ಪ್ರೋ. ಡಾ. ಸಿ.ಆರ್ ಚಂದ್ರಶೇಖರ ಅವರು ಸತತ 50 ವರ್ಷಗಳ ಕಾಲ ಮನೋವಿಜ್ಞಾನ ವೈದ್ಯರಾಗಿ ಸೇವಾನುಭವ ಹೊಂದಿದ, 1 ಲಕ್ಷಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಿ, 30 ಸಾವಿರಕ್ಕೂ ಹೆಚ್ಚು ಉಪನ್ಯಾಸ ಕೈಗೊಂಡು 20 ಸಾವಿರಕ್ಕೂ ಹೆಚ್ಚು ಆಪ್ತ ಸಮಾಲೋಚನೆ ನಡೆಸುವ ಮೂಲಕ ಸಮಾಜಕ್ಕೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಅವರ ಈ ಉಪನ್ಯಾಸ ಕಾರ್ಯಕ್ರಮ ವಿದ್ಯಾರ್ಥಿಗಳ ಮನಸ್ಸನ್ನು ಹಗುರಾಗಿಸಿ ಅವರಿಗೆ ಓದು ಹಾಗೂ ಭವಿಷ್ಯದ ಜೀವನಕ್ಕೆ ಉತ್ಸಾಹ ತುಂಬಲಿದೆ ಎಂದು ಹೇಳಿದರು. 

ವಿಶೇಷ್ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಬೆಂಗಳೂರಿನ ನಿಮ್ಹಾನ್ಸ ಆಸ್ಪತ್ರೆಯ ಮನೋವೈದ್ಯರು, ನಿವೃತ್ತ ಪ್ರಾಧ್ಯಾಪಕರು ಆದ ಪ್ರೋ. ಡಾ. ಸಿ.ಆರ್ ಚಂದ್ರಶೇಖರ್ ಮಾತನಾಡಿ ಆತ್ಮಹತ್ಯೆಗಳು ಜರುಗುತ್ತಿರುವುದು ವಿಷಾದನೀಯ ಸಂಗತಿ. ಶೇಕಡಾ 100 ರಲ್ಲಿ 35ಅ ಹದಿ ಹರೆಯದವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ನಮ್ಮ ಮೆದುಳಿನ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ಮೆದುಳು ಮಾನವನ ದೇಹವನ್ನು ನಿಯಂತ್ರಿಸುವ ಏಕೈಕ ಅಂಗ. ಸರಿ, ತಪ್ಪು-ಒಳ್ಳೆಯದು ಕೆಟ್ಟದ್ದು ಎಲ್ಲವೂ ಮೆದುಳಿನಿಂದ ರವಾನೆಯಾಗುತ್ತದೆ. ನಾವು ನಮ್ಮ ಮೆದುಳಿನಲ್ಲಿ ಸಕಾರಾತ್ಮಕ ಭಾವನೆಗಳನ್ನು ಇಟ್ಟುಕೊಳ್ಳಬೇಕೆ ಹೊರತು ನಕಾರಾತ್ಮಕ ಭಾವನೆಗಳನ್ನು ಇಟ್ಟುಕೊಳ್ಳಬಾರದು. ಏಕೆಂದರೇ ಈ ನಕಾರಾತ್ನಕ ಭಾವನೆಗಳೆ ಮುಂದೊಂದು ದಿನ ಆತ್ಮಹತ್ಯಗೆ ಎಡೆ ಮಾಡಿಕೊಡುತ್ತವೆ. ಆತ್ಮಹತ್ಯೆಯಿಂದ ದೂರವಿರಬೇಕೆಂದರೇ ದೈಹಿಕವಾಗಿ, ಮಾನಸಿಕವಾಗಿ ನಾವು ಸಧೃಡರಾಗಿರಬೇಕು. ದುಃಖ, ಭಯ, ಕ್ರೋಧ, ಅಸೂಯೆಯನ್ನು ನಮ್ಮಿಂದ ದೂರವಿಡಬೇಕು. ಅವಮಾನ ಎಂಬುದು ಜೀವನದಲ್ಲಿ ಸಾಮಾನ್ಯ ಅದನ್ನು ಮೆಟ್ಟಿ ನಿಲ್ಲುವ ಕ್ಷಮತೆಯನ್ನು ಬೆಳೆಸಿಕೊಳ್ಳಬೇಕು. ಭಾವನೆಗಳ ಭಾವೋದ್ವೇಕಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಬಾರದು ಮತ್ತು ನಮ್ಮ ಭಾವನೆಗಳು ಇತರರನ್ನು ಭಾವೋದ್ವೆಗಕ್ಕೆ ಒಳಗಾಗಿಸಿ ತೊಂದರೆ ನೀಡುವಂತೆ ಇರಬಾರದು. ಬಾಲ್ಯದ ಕೆಟ್ಟ ಅನುಭವಗಳು ಸೋಲು-ನಿರಾಸೆ, ಅನಾರೋಗ್ಯ, ದ್ವೇಷ, ಶತೃತ್ವ, ದುಃಖ, ಕ್ರೌರ್ಯ, ಆತಂಕಗಳು ಸಹ ಆತ್ಮಹತ್ಯೆಗೆ ಕಾರಣವಾಗಬಲ್ಲವು. ಆಧುನಿಕತೆಯಲ್ಲಿ ಮೊಬೈಲ್ ಕೂಡ ಮಾದಕ ವಸ್ತುಗಳಿಗಿಂತ ಮಾರಕವಾಗಿ ಪರಿಣಮಿಸಿ ಆತ್ಮಹತ್ಯೆಗೆ ಕಾರಣವಾಗುತ್ತಿದೆ. ಬೆಲೆ ಬಾಳುವ ವಸ್ತುವಿನ ವ್ಯಾಮೋಹ, ಸ್ಥಾನಮಾನ, ಮಾನ್ಯತೆ, ನಷ್ಟ, ಹಣಕಾಸಿನ ಮುಗ್ಗಟ್ಟು, ನಿರಾಸೆಗಳು ಕೌಟುಂಬಿಕ ಕಲಹಗಳು, ನಿರುದ್ಯೋಗ, ಬಡತನ ಸಾಮಾಜಿಕ ಕಾರಣಗಳು ಸಹ ಆತ್ಮಹತ್ಯೆಗೆ ಪುಷ್ಠಿ ನೀಡುತ್ತಿವೆ. ಇಂತಹ ಆತ್ಮಹತ್ಯೆ ಪಿಡುಗಿನಿಂದ ಹೊರಬರುವ ಮಾರ್ಗವೆಂದರೆ ಅದು ಸಕಾರಾತ್ಮಕ ಚಿಂತನೆ. ಸಕಾರಾತ್ಮಕ ಭಾವನೆಗಳಾದ ಪ್ರೀತಿ, ಸ್ನೇಹ, ಸಂತೋಷ, ದಯೆ, ಧೈರ್ಯ, ಶಾಂತತೆ, ತಾಳ್ಮೆಯನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಿ, ಜೀವನದಲ್ಲಿ ಆದ ಕೆಟ್ಟ ಅನುಭವಗಳನ್ನು ಮರೆತುಬಿಡಿ ಮುಂದಿನ ಜಯಕ್ಕಾಗಿ ಹಂಬಲಿಸಿ. ಸರಿಯಾದ ಆಹಾರ ಕ್ರಮವನ್ನು ನಿಮ್ಮದಾಗಿಕೊಂಡು ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ. ಖಿನ್ನತೆಗೆ ಒಳಗಾದವರ ನಡತೆಯಲ್ಲಾಗುವ ಬದಲಾವಣೆ, ಜಿಂಜರಿಕೆ, ದುಃಖ, ಕೆಲಸದಲ್ಲಿನ ನಿರಾಸಕ್ತಿ, ಊಟವನ್ನು ಮಾಡದೇ ಇರುವುದು, ಕಡಿಮೆ ನಿದ್ರೆಯಂತಹ ಅಂಶಗಳನ್ನು ಗಮನಿಸಿ, ಅವರನ್ನು ಖಿನ್ನತೆಯಿಂದ ಹೊರತರಲು ಪ್ರಯತ್ನಿಸಿಬೇಕು ಆಗ ಅವರನ್ನು ಆತ್ಮಹತ್ಯೆಗೆ ಶರಣಾಗುವದನ್ನು ತಪ್ಪಿಸಬಹುದು. ಮನಸ್ಸಿನಲ್ಲಿರುವ ಸಮಸ್ಯೆಗಳನ್ನು ಆಪ್ತರಲ್ಲಿ, ತಂದೆ-ತಾಯಿಯ ಬಳಿ, ಮನೋವೈದ್ಯರ ಬಳಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಿ, ಓಷದೋಪಚಾರಕ್ಕೆ ಮೊರೆ ಹೋಗಿ, ಅಳುವದರ ಮೂಲಕ ಭಾವನೆಗಳ ಒತ್ತಡವನ್ನು ನಿಯಂತ್ರಿಸಬಹುದು. ಮಾನಸಿಕ ಒತ್ತಡದಿಂದ ಹೊರಬರಲು, ಸದಾ ಸಂತೋಷದಿಂದ ಇರಲು ಪ್ರಯತ್ನಿಸಿ, ಆಟವಾಡಿ, ಸ್ನೇಹಿತರೊಂದಿಗೆ ಬೆರೆಯಿರಿ. ಸಂಗೀತವನ್ನು ಆಸ್ವಾದಿಸಿ. ಕೆಟ್ಟ ಆಲೋಚನೆಗಳಿಗೆ ಕಿವಿಗೊಡದೆ ಉತ್ಸಾಹ ಭರಿತ ಜೀವನ ನಿಮ್ಮದಾಗಿಸಿಕೊಳ್ಳಿ. ಸೋಲನ್ನು ಜಯದ ಮಟ್ಟಿಲನ್ನಾಗಿಸಬೇಕೆ ಹೊರತು ಜೀವನವನ್ನು ಕೊನೆಗೊಳಿಸುವದಲ್ಲ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಪ್ರೋ. ಡಾ. ಸಿ. ಆರ್ ಚಂದ್ರಶೇಖರ್ ಅವರನ್ನು ಸುಧಿರ್ಘ ಹಾಗೂ ಸಮಾಜ ಸೇವೆಯ ಗೌರವಾರ್ಥವಾಗಿ ಜನತಾ ಶಿಕ್ಷಣ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಡಿಮ್ಹಾನ್ಸ್‌ ನ ನಿರ್ದೇಶಕರಾದ ಅರುಣಕುಮಾರ, ಅಶೋಕ ಕೋರಿ ಇತರರು ಉಪಸ್ಥಿತರಿದ್ದರು. ಮಹಾವೀರ ಉಪಾದ್ಯೆ ಸ್ವಾಗತಿಸಿದರು. ಮಹಾಂತ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.