ಕೆ.ವಿ.ಕೆಯಲ್ಲಿ ವಿಶ್ವ ಮಣ್ಣು ದಿನಾಚರಣೆ
World Soil Day celebrated at KVK
ಗದಗ 06: ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನಕೇಂದ್ರ, ಹುಲಕೋಟಿ ಹಾಗೂ ಕೃಷಿ ಇಲಾಖೆ, ಗದಗ ಸಹಭಾಗಿತ್ವದಲ್ಲಿ “ವಿಶ್ವಮಣ್ಣು ದಿನಾಚರಣೆ” ಕಾರ್ಯಕ್ರಮವನ್ನು ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು. ಪ್ರಸ್ತುತ ವರ್ಷ “ಆರೋಗ್ಯಕರ ನಗರಗಳಿಗೆ ಆರೋಗ್ಯಕರ ಮಣ್ಣು” ಎಂಬ ಧ್ಯೇಯೋದ್ದೇಶದೊಂದಿಗೆ ವಿಶ್ವಮಣ್ಣು ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ. ಹೊಳಬಸಪ್ಪ ತೆಗ್ಗಿ, ಜಂಟಿ ಆಯುಕ್ತರು (ತರಬೇತಿ ವಿಭಾಗ), ಪಶು ಸಂಗಫೊನಾ ಉತ್ಕೃಷ್ಠತೆ ಕೇಂದ್ರ, ಬೆಂಗಳೂರು ಇವರು ಕೃಷಿಗೆ ಮಣ್ಣು ಅತ್ಯಂತ ಮಹತ್ವಪೂರ್ಣ ನೈಸರ್ಗಿಕ ಸಂಪನ್ಮೂಲವಾಗಿದ್ದು, ಮುಂದಿನ ಪೀಳಿಗೆಗೆ ನಾವು ಆರೋಗ್ಯಕರ ಮಣ್ಣನ್ನೇ ಆಸ್ತಿಯಾಗಿ ಉಳಿಸಬೇಕು ಎಂದು ಕರೆ ನೀಡಿದರು.
ಮಣ್ಣಿನಲ್ಲಿನ ಸಾವಯವ ಇಂಗಾಲ ದಿನಂಪ್ರತಿ ಕ್ಷೀಣಿಸುತ್ತಿದ್ದು, ನಾವು ಮಣ್ಣಿಗೆ ಸೇರಿಸುವ ಗೊಬ್ಬರವನ್ನು ಮಣ್ಣಿನ ಪರೀಕ್ಷೆಗೆ ಅನುಗುಣವಾಗಿ ಶಿಫಾರಸ್ಸಿನ ಪ್ರಕಾರ ಸೇರಿಸಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾದ ಶ್ರೀಮತಿ ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಗದಗ ಇವರು ಮಾತನಾಡಿ ಎಲ್ಲ ರೈತರು ಮಣ್ಣಿನ ಸವಕಳಿಯನ್ನು ತಡೆದು ಫಲವತ್ತಾದ ಮಣ್ಣನ್ನು ಹೊಂದಿ ಉತ್ತಮವಾದ ಇಳುವರಿಯನ್ನು ಪಡೆಯಬೇಕೆಂದು ತಿಳಿಸಿದರು. ಡಾ. ಜಗದೀಶ ಮಟ್ಟಿ, ಪಶು ವೈದ್ಯಾಧಿಕಾರಿಗಳು, ಪಶು ಸಂಗೋಪನಾ ಇಲಾಖೆ, ಗದಗ ಇವರು ಮಾತನಾಡಿ ಸಕಲ ಜೀವರಾಶಿಗಳಿಗೆ ಆಹಾರವನ್ನು ಸದೃಢವಾದ ಮಣ್ಣಿನಿಂದ ಬೆಳೆಯುವದರಿಂದ ಜಾನುವಾರುಗಳಿಗೆ ಉತ್ತಮವಾದ ಆಹಾರವನ್ನು ನೀಡಿ ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೇಷ್ಠ ಕೃಷಿಕ ಮಹಿಳಾ ಪ್ರಶಸ್ತಿ ವಿಜೇತರಾದ ಸುಧಾ ಬೇವಿನಮರದ, ಸಾಽಽ ಅಸುಂಡಿ ಇವರು ತಮ್ಮ ಕ್ಷೇತ್ರದಲ್ಲಿ ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಬಂದ ಅನುಭವಗಳನ್ನು ಹಂಚಿಕೊಂಡರು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಎನ್.ಎಚ್.ಭಂಡಿ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿಶ್ವ ಮಣ್ಣು ದಿನಾಚರಣೆಯ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಕೈಗೊಳ್ಳಬೇಕಾದ ಕೃಷಿ ಪದ್ಧತಿಗಳ ಕುರಿತು ಚರ್ಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಡಾ. ಸುಧಾ ವ್ಹಿ. ಮಂಕಣಿ ಇವರು ರೈತರು ಯತೇಚ್ಛವಾಗಿ ರಸಗೊಬ್ಬರಗಳನ್ನು ಬಳಸುತ್ತಿದ್ದಾರೆ, ಇದರಿಂದ ಮಣ್ಣಿನ ರಚನೆ ಹಾಗೂ ಆರೋಗ್ಯ ಕೆಡುವುದಲ್ಲದೇ, ದೀರ್ಘಕಾಲೀನವಾಗಿ ಇಳುವರಿಯಲ್ಲಿಯೂ ವ್ಯತ್ಯಾಸವಾಗುತ್ತದೆ. ಆದ್ದರಿಂದ ಪ್ರತಿ ವರ್ಷ ರೈತರು ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರೈತರಿಗೆ ಮಣ್ಣು ಆರೋಗ್ಯ ಪತ್ರಗಳನ್ನು ವಿತರಿಸಲಾಯಿತು. ಇದಕ್ಕೆ ಡಾ. ಪ್ರವೀಣ ಕರಿಕಟ್ಟಿ ಸಹಾಯ ಮಾಡಿದರು. ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, ಕೃಷಿ ಇಲಾಖೆಯ ಸಿಬ್ಬಂದಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಡಾ. ಮಂಜುಪ್ರಕಾಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಡಾ.ವಿನಾಯಕ ನಿರಂಜನ್ ಸ್ವಾಗತಿಸಿದರು, ಹೇಮಾವತಿ ಹಿರೇಗೌಡರ ವಂದಿಸಿದರು. ಒಟ್ಟು 125 ಕ್ಕೂ ಹೆಚ್ಚು ರೈತರು, ಗ್ರಾಮೀಣ ಯುವಕರು ಹಾಗೂ ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 