ಚಾಮರಾಜನಗರ, ಕರ್ನಾಟಕ, ನ 6: ಜಿಲ್ಲೆಯ ಸುಪ್ರಸಿದ್ದ ಪ್ರವಾಸಿ ಸ್ಥಳ ಭರಚುಕ್ಕಿ ಜಲಪಾತ ಪ್ರದೇಶದ ಬಳಿ ರಾಜ್ಯ ಸರ್ಕಾರ ಅಂದಾಜು 100 ಕೋಟಿರೂಪಾಯಿ ವೆಚ್ಚದಲ್ಲಿ ವಿಶ್ವದರ್ಜೆಯ ಜೈವಿಕ ವೈವಿಧ್ಯ ಉದ್ಯಾನವನ ನಿರ್ಮಿಸಲು ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿಯೂ ಆಗಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಭರಚುಕ್ಕಿ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು, ಜೈವಿಕ ವೈವಿದ್ಯ ಉದ್ಯಾನವನ ನಿರ್ಮಾಣ ಕಾರ್ಯ ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. 150 ಎಕರೆ ಪ್ರದೇಶದಲ್ಲಿ ಮೈದಳೆಯಲಿರುವ ಉದ್ಯಾನವನ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯ ಕೇಂದ್ರಗಳಲ್ಲಿ ಒಂದಾಗಲಿದೆ ಎಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದರು. ಜೈವಿಕ ವೈವಿದ್ಯ ಉದ್ಯಾನವನದಲ್ಲಿ ತಲೆ ಎತ್ತಲಿರುವ ಬಿದುರು ವನ ಹಾಗೂ ಆರ್ಕಿಡ್ ವನ ಗಳಿಗೆ ಅಗತ್ಯವಾಗಿರುವ ಇಂಧನ ಪೂರೈಸಲು ಸೋಲಾರ್ ಪಾರ್ಕ್ ಸ್ಥಾಪಿಸಲಾಗುವುದು. ಜೊತೆಗೆ ಸುಮಾರು 2000 ಮಂದಿ ಕುಳಿತು ವೀಕ್ಷಿಸಬಹುದಾದ ಆಡಿಟೋರಿಯಂ ಕೂಡ ನಿರ್ಮಿಸಲಾಗುವುದು ಎಂದು ಸುರೇಶ್ ಕುಮಾರ್ ವಿವರಿಸಿದರು ಪ್ರವಾಸಿಗಳನ್ನು ಸ್ವಾಗತಿಸಲು ದೃಶ್ಯ ಮತ್ತು ಬೆಳಕಿನ ವ್ಯವಸ್ಥೆ ಅಳವಡಿಸಲಾಗುವುದು. ಪ್ರವಾಸಿಗರ ಅನುಕೂಲಕ್ಕಾಗಿ ಫುಡ್ ಕೋರ್ಟ್ ಮತ್ತಿತರ ಮೂಲ ಸೌಕರ್ಯಗಳನ್ನು ನಿರ್ಮಿಸಲಾಗುವುದು. ಯೋಜನೆ 2020ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.