ವಿಶ್ವ ಕ್ಯಾನ್ಸರ್ ದಿನಾಚರಣೆ: ಜಾಥಾ ಕಾರ್ಯಕ್ರಮಕ್ಕೆ ಚಾಲನೆ

World Cancer Day: Launch of Jatha Programme

ವಿಜಯಪುರ ಫೆ.04: ಜೀವಕ್ಕೆ ಆಪತ್ತು ತರುವ ಹಲವು ಕಾಯಿಲೆಗಳ ಮೂಲ ಜೀವನಶೈಲಿ. ಅಂತಹ ಕಾಯಿಲೆಗಳಲ್ಲಿ ಕ್ಯಾನ್ಸರ್ ಪ್ರಮುಖವಾದದ್ದು. ಇದನ್ನು ಹಲವು ಸಂಶೋಧನೆಗಳು ಸಾಬೀತುಪಡಿಸಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾಽಽ ಸಂಪತ್ತ ಗುಣಾರಿ ಹೇಳಿದರು.  

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಾರ್ಯಾಲಯ ಜಿಲ್ಲಾ ಸಮೀಕ್ಷಾ ಘಟಕ ವಿಜಯಪುರ ಇವರ ಸಂಯುಕ್ತಾಶ್ರಯಲ್ಲಿ ಮಂಗಳವಾರ ಬೆಳಿಗ್ಗೆ ಸರಕಾರಿ ನರ್ಸಿಂಗ ಕಾಲೇಜು ಆವರಣದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾಽಽ ಸಂಪತ್ತ ಗುಣಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾಽಽ ಶಿವಾನಂದ ಮಾಸ್ತಿಹೊಳಿ ರವರು ಜಂಟಿಯಾಗಿ ಚಾಲನೆ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಮಾನ್ಯವಾಗಿ ಕ್ಯಾನ್ಸರ ಉಂಟು ಮಾಡುವ ಜೀವನಶೈಲಿಗಳಲ್ಲಿ ದುಶ್ಚಟವಾದ ಧೂಮಪಾನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದೆ. ಧೂಮಪಾನ ಮಾಡುವವರಿಗೆ ಕ್ಯಾನ್ಸರ ಬರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ ಎಂದು ಅವರು ತಿಳಿಸಿದರು.  

ಅಧಿಕ ತೂಕ ಮತ್ತು ಬೊಜ್ಜು ಸಹ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ದೈಹಿಕ ಚಟುವಟಿಕೆಯ ಕೊರತೆ ಕ್ಯಾನ್ಸರ್ ಅಪಾಯವನ್ನು ನಿಮ್ಮ ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು ಎಂದು ಅವರು ಹೇಳಿದರು. 

ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾಽಽ ಶಿವಾನಂದ ಮಾಸ್ತಿಹೊಳಿ ರವರು ಮಾತನಾಡಿ ದೈಹಿಕ ಚಟುವಟಿಕೆಗಳು ಬಹುತೇಕ ರೋಗಗಳನ್ನು ನಿಯಂತ್ರಿಸುತ್ತದೆ. ಹೀಗಾಗಿ ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಯೋಗ, ನಡಿಗೆ, ಓಟ ಮತ್ತು ಈಜು ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ದಿನನಿತ್ಯ ಆರೋಗ್ಯಕರ ಆಹಾರ ಸೇವಿಸುವುದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು. 

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾಽಽ ಅಪ್ಪಾಸಾಹೇಬ ಇನಾಮದಾರ ರವರು ಮಾತನಾಡಿ ದುಶ್ಚಟದಿಂದ ದೂರ ಇರಿ. ನಿಯಮಿತವಾಗಿ ವೈದ್ಯರಿಗೆ ಭೇಟಿ ನೀಡಿ ಮತ್ತು ಕ್ಯಾನ್ಸರ್ ತಪಾಸಣೆಗಳನ್ನು ಮಾಡಿಸಿ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಿದಲ್ಲಿ ಚಿಕಿತ್ಸೆ ಸುಲಭವಾಗಿದ್ದು, ಅನಗತ್ಯ ಭಯ ಬೇಡ. ಕ್ಯಾನ್ಸರ್‌ನಿಂದ ಗೆದ್ದವರು ಸಾಕಷ್ಟು ಜನ ನಮ್ಮ ಮಧ್ಯದಲ್ಲಿ ಇದ್ದಾರೆ ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಸರಕಾರಿ ನರ್ಸಿಂಗ ಕಾಲೇಜ ಪ್ರಾಂಶುಪಾಲರು, ಜಿಲ್ಲಾ ಮೇಲ್ವಿಚಾರಣಾಧಿಕಾರಿಗಳಾದ ಮೋತಿಲಾಲ ಲಮಾಣಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇಖಾ ದಶವಂತ, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ (ಎನ್‌.ಸಿ.ಡಿ ಘಟಕ) ಡಾಽಽ ಪ್ರೀಯದರ್ಶನಿ ಪಾಟೀಲ,  ನರ್ಸಿಂಗ ಕಾಲೇಜಿನ ಭೋದಕ ಸಿಬ್ಬಂದಿ ವರ್ಗದವರು, ಐ.ಇ.ಸಿ ವಿಭಾಗದ ಗಣಕಯಂತ್ರ ಸಹಾಯಕರಾದ ಶ್ರೀ ಕುಮಾರ ರಾಠೋಡ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ನರ್ಸಿಂಗ ಕಾಲೇಜಿನ ವಿದ್ಯಾರ್ಥಿ/ವಿದಾರ್ಥಿನಿಯರು ಉಪಸ್ಥಿತರಿದ್ದರು.  (ಫೋಟೋ ಲಗತ್ತಿಸಲಾಗಿದೆ ಎ1,ಎ2)