ವಿಶ್ವ ಜೈವಿಕ ಇಂಧನ ದಿನಾಚರಣೆ-ಜಿಲ್ಲಾ ಮಟ್ಟದ ಕಾಯರ್ಾಗಾರ ಜೈವಿಕ ಇಂಧನ ಉತ್ಪಾದನೆ-ಬಳಕೆಯ ಜಾಗೃತಿ ಅವಶ್ಯಕ : ಶಾಸಕ ಯತ್ನಾಳ

ವಿಜಯಪುರ: ನ.05-  ಜೈವಿಕ ಇಂಧನ ಉತ್ಪಾದನೆಗೆ ಬೇಕಾದ ಕಚ್ಚಾ ಸಂಪನ್ಮೂಲಗಳು ಜಿಲ್ಲೆಯಲ್ಲಿ ಹೇರಳವಾಗಿದ್ದು, ಅವುಗಳನ್ನು ಬಳಸಿಕೊಂಡು ಜೈವಿಕ ಇಂಧನ ಉತ್ಪಾದನೆಗೆ ಮತ್ತು ಬಳಕೆಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು. 

ಕನರ್ಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಅಕ್ಕಮಹಾದೇವಿ ಮಹಿಳಾ ವಿವಿ ಹಾಗೂ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಹಾಗೂ ಜೈವಿಕ ಇಂಧನ ಜಿಲ್ಲಾ ಮಟ್ಟದ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಬೇವಿನ ಮರಗಳು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅವುಗಳ ಬೀಜಗಳನ್ನು ಕ್ರಮಬದ್ಧವಾಗಿ ಸಂಸ್ಕರಿಸಿ ಅದರಿಂದ ಜೈವಿಕ ಇಂಧನ ಉತ್ಪಾದನೆ ಮಾಡಬಹುದು. ಈ ಕುರಿತು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ, ರೈತರಿಗೆ ತರಬೇತಿ ನೀಡಬೇಕು. ಇದರಿಂದ ಮಹಿಳೆಯರು ಸ್ವಾವಲಂಬಿಯಾಗಲು ಸಹಾಯವಾಗುತ್ತದೆ. ಬೇವಿನ ಹಿಂಡಿಯನ್ನು ಬೆಳೆಗಳಿಗೆ ಕೀಟನಾಶಕವಾಗಿ ಬಳಸಬಹುದು, ಈ ಕುರಿತಂತೆ ಹೆಚ್ಚಿನ ಜಾಗೃತಿಯ ಅವಶ್ಯಕತೆ ಇದೆ ಎಂದು ಹೇಳಿದರು. 

ಹೆಚ್ಚಿನ ರೀತಿಯಲ್ಲಿ ಜೈವಿಕ ಇಂಧನ ಬಳಸಿದ್ದಲ್ಲಿ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸಿದಂತಾಗುತ್ತದೆ. ಪೃಥ್ವಿಯ ಉಳಿವಿಗೆ ನಮ್ಮಿಂದ ಸಾಧ್ಯವಾದಷ್ಟು ಸೇವೆ ಸಲ್ಲಿಸುವ ಅವಕಾಶವಾಗುತ್ತದೆ. ಜೈವಿಕನ ಇಂಧನ ಬಳಕೆಯಿಂದ ರಾಷ್ಟ್ರದ ಆಥರ್ಿಕ ಪ್ರಗತಿಗೂ ಪೂರಕವಾಗಲಿದೆ. ಮುಂದಿನ ದಿನಗಳಲ್ಲಿ ಕಿರುತೈಲ ಉತ್ಪಾದನಾ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೊರ ಸುರಳಕರ ಅವರು ಮಾತನಾಡಿ, ಜೈವಿಕ ಇಂಧನ ಉತ್ಪಾದನೆಗೆ ಪೂರಕವಾದ ಸಸಿಗಳು, ಮರಗಳನ್ನು ಬೆಳೆಯುವ ಪ್ರದೇಶವನ್ನು ಆಧರಿಸಿ ಬೇಡಿಕೆ ಅನುಸಾರ ಜೈವಿಕ ಇಂಧನ ಉತ್ಪಾದನೆ ಮಾಡಬೇಕು. ಮಧ್ಯಮ ಪ್ರಮಾಣದ ಖಾದ್ಯ ತಯಾರಕರು, ಸಿಹಿ ತಿಂಡಿ ತಯಾರಕರು ಮಾತ್ರ ಜೈವಿಕ ಇಂಧನ ಬಳಕೆ ಮಾಡುತ್ತಾರೆ, ಜೈವಿಕ ಇಂಧನ ಬಳಕೆ ವ್ಯಾಪ್ತಿ ವಿಸ್ತರಿಸುವ ನಿಟ್ಟಿನಲ್ಲಿ ಖಾಸಗಿ ಇಂಧನ ಉತ್ಪಾದನಾ ಘಟಕಗಳಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಾಗಲಕೋಟೆಯ ಇಂಜಿನೀಯರಿಂಗ್ ವಿದ್ಯಾಥರ್ಿಯೋರ್ವ ತನ್ನ ಪದವಿ ಮುಗಿಸಿದ ನಂತರ ಜೈವಿಕ ಇಂಧನ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದು, 10 ಸಾವಿರ ಲೀಟರ್ ಇಂಧನವನ್ನು ಉತ್ಪಾದಿಸುತ್ತಿರುವ ಕುರಿತು ಉಲ್ಲೇಖಿಸಿದ ಅವರು, ಆ ವಿದ್ಯಾಥರ್ಿ ಇಂದನ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಓಡಿಸ್ಸಾದಿಂದ ಆಮದು ಮಾಡಿಕೊಳ್ಳುತ್ತಿದ್ದು, ಕಚ್ಚಾ ವಸ್ತುಗಳು ನಮ್ಮ ಜಿಲ್ಲೆಯಲ್ಲಿಯೇ ದೊರೆಯುವುದರಿಂದ ಕಚ್ಚಾ ಸಾಮಗ್ರಿಗಳನ್ನು ಪೂರೈಸಿ ಆಥರ್ಿಕ ಲಾಭ ಪಡೆಯಬಹುದಾಗಿದೆ ಎಂದು ಹೇಳಿದರು. 

ಇಂಜಿನೀಯರಿಂಗ್ ವಿದ್ಯಾಥರ್ಿ ಗಳು ಇಂಧನ ಉತ್ಪಾದನೆಯನ್ನು ಉದ್ಯಮವಾಗಿ ಆರಂಭಿಸಿದರೆ ಖಾಸಗಿ ಕಂಪನಿಗಳಲ್ಲಿ ದೊರೆಯುವ ಸಂಬಳಕ್ಕಿಂತ ಹೆಚ್ಚಿನ ಆದಾಯ ಗಳಿಸಬಹುದಾಗಿದೆ ಎಂದು ಅವರು ಸಲಹೆ ನೀಡಿದರು. 

ಕನರ್ಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿಯ ವ್ಯವಸ್ಥಾಪಕರಾದ ಜಿ.ಎನ್.ದಯಾನಂದ ಅವರು ಮಾತನಾಡಿ, ಜೈವಿಕ ಇಂಧನ ಉತ್ಪಾದನೆಗೆ ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ರೂಪಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಸಂಶೋಧನೆ ಕೆಂದ್ರಗಳನ್ನು ಸ್ಥಾಪಿಸಿ, ಜೈವಿಕ ಇಂಧನ ಜಾಗೃತಿಯಲ್ಲಿ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು. 

ರಾಜ್ಯದಲ್ಲಿ ಹಾಸನ, ಧಾರವಾಡ, ತಿಂತಣಿ (ಯಾದಿಗಿರಿ ಜಿಲ್ಲೆ) ಯಲ್ಲಿ ಜೈವಿಕ ಉದ್ಯಾನವನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿಯನ್ನು ವಿಜಯಪುರದಲ್ಲಿ ಸ್ಥಾಪಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಕೇಂದ್ರಗಳು, ತೈಲ ಉತ್ಪನ್ನ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವು ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಇಕ್ರಾಫ್ಟ್ ಸಂಸ್ಥೆ ವತಿಯಿಂದ 3 ಮಹಿಳಾ ಸ್ವಸಹಾಯ ಗುಂಪಿನ ಮಹಿಳೆಯರಿಗೆ 3 ಕಿರು ತೈಲ ಉತ್ಪಾದನಾ ಯಂತ್ರಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಜೈವಿಕ ಇಂಧನಕ್ಕೆ ಪೂರಕವಾದ ಸಸಿಗಳನ್ನು, ಮರಗಳನ್ನು ತಮಗೆ ಲಭ್ಯವಿರುವ ಸ್ಥಳಾವಕಾಶದಲ್ಲೆ ಬೆಳೆದು ಸಾಧನೆ ಮಾಡಿದ ರೈತರಿಗೆ ಸನ್ಮಾನಿಸಲಾಯಿತು. 

 ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಬೇವಿನ ಬೀಜ ಜಿಲ್ಲೆಯಲ್ಲಿ ಹೇರಳವಾಗಿ ದೊರೆಯುವ ಕಚ್ಚಾ ಸಂಪನ್ಮೂಲವಾಗಿದೆ. ಇದರಿಂದ ಇಂಧನ ಉತ್ಪಾದನೆ ಮಾಡುವ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು. 

ಎಲ್.ಜಿ.ನಾಗ್ ಸ್ವಾಗತಿಸಿದರು. ಗ್ರಾಮೀಣ ಅಭಿವೃದ್ದಿ ಸಂಸ್ಥೆ ಡಾ.ಬಾಬು ಸಜ್ಜನ ನಿರೂಪಿಸಿದರು. ಶ್ರೀಮತಿ ಮಂಜುಳಾ ಹಿಪ್ಪರಗಿ ನಾಡಗೀತೆ ನಡೆಸಿಕೊಟ್ಟರು. ರಾಜು ಹಜೂರಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿಯ ರಾಜ್ಯ ಸಂಯೋಜಕ ಜೆ.ವಿಜಯರಾಘವ, ಬಾಗಲಕೋಟೆಯ ಬಸವೇಶ್ವರ ಇಂಜಿನೀಯರಿಂಗ್ ಮಹಾವಿದ್ಯಾಲಯದ ಉಪನ್ಯಾಸಕಿ ಭಾರತಿ ಮೇಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ಚವ್ಹಾಣ, ಸಿಕ್ಯಾಬ್ ಇಂಜಿನೀಯರಿಂಗ್ ಕಾಲೇಜಿನ ಸೈಯ್ಯದ ಅಕ್ಬರ್ ಅಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜಿ.ಕ್ಯಾತನ್ ಸೇರಿದಂತೆ ಸಿಕ್ಯಾಬ್ ಕಾಲೇಜ್ ವಿದ್ಯಾಥರ್ಿಗಳು, ಜಿಲ್ಲೆಯ ರೈತರು, ಸ್ವಸಹಾಯ ಗುಂಪುಗಳ ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಇದಕ್ಕೂ ಮೊದಲು ನಗರದ ಜಲನಗರದಿಂದ ಜೈವಿಕ ಇಂಧನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಉಪ ಕಾರ್ಯದಶರ್ಿ ಕುಂಬಾರ ಚಾಲನೆ ನೀಡಿದರು.