ವಾಷಿಂಗ್ಟನ್ ಡಿಸಿ, ಮೇ5,ಕೊವಿಡ್-19 ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಬಾಧಿತರಾಗಿರುವ ಬಡವರು ಮತ್ತು ದುರ್ಬಲ ವರ್ಗದ ಕುಟುಂಬಗಳಿಗೆ ಸಾಮಾಜಿಕ ನೆರವು ಒದಗಿಸಿಕೊಡುವ ಭಾರತದ ಕೊವಿಡ್-19 ಸಾಮಾಜಿಕ ರಕ್ಷಣಾ ಸ್ಪಂದನಾ ಕಾರ್ಯಕ್ರಮಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಒಂದು ಶತಕೋಟಿ ಡಾಲರ್ ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕರು ಒಪ್ಪಿಗೆ ನೀಡಿದ್ದಾರೆ. ಇದರೊಂದಿಗೆ ತುರ್ತು ಕೊವಿಡ್-19 ಸ್ಪಂದನೆಗೆ ಭಾರತಕ್ಕೆ ವಿಶ್ವಬ್ಯಾಂಕ್ ಎರಡು ಶತಕೋಟಿ ಡಾಲರ್ ಒದಗಿಸಿದಂತಾಗಿದೆ. ಭಾರತದ ಆರೋಗ್ಯ ವಲಯಕ್ಕೆಕಳೆದ ತಿಂಗಳು ಒಂದು ಶತಕೋಟಿ ಡಾಲರ್ ನ ತುರ್ತು ನೆರವನ್ನು ಪ್ರಕಟಿಸಲಾಗಿತ್ತು.
ಎಂದು ವಿಶ್ವಬ್ಯಾಂಕ್‍ನ ಪ್ರಕಟಣೆ ಗುರುವಾರ ತಿಳಿಸಿದೆ. ಹೊಸದಾಗಿ ಘೋಷಿಸಿರುವ ನೆರವು ಎರಡು ಕಂತಿನಲ್ಲಿರುತ್ತದೆ. 2020ರ ಸಾಲಿಗೆ 750 ದಶಲಕ್ಷ ಡಾಲರ್, 2021ನೇ ಸಾಲಿನಲ್ಲಿ 250 ದಶಲಕ್ಷ ಡಾಲರ್ ಬಿಡುಗಡೆ ಮಾಡಲಾಗುತ್ತದೆ. ಮೊದಲ ಹಂತದ ಕಾರ್ಯಾಚರಣೆಯನ್ನು ದೇಶವ್ಯಾಪಿ ಪ್ರಧಾನಮಂತ್ರಿ ಗರೀಬ್ ಯೋಜನೆ ಮೂಲಕ ಅನುಷ್ಠಾನಗೊಳಿಸಲಾಗತ್ತದೆ. ಇದರಿಂದ ನಗದು ವರ್ಗಾವಣೆ ಮತ್ತು ಆಹಾರ ಪೂರೈಕೆ ಕಾರ್ಯಗಳು ಚುರುಕು ಪಡೆಯಲು ನೆರವಾಗಲಿದೆ. ಅಲ್ಲದೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಿಂದ ಹೊರಗಿರುವ ಕಾರ್ಯಕರ್ತರಿಗೆ, ವಲಸಿಗರಿಗೆ, ಕೊವಿಡ್-19 ಪರಿಹಾರ ಕಾರ್ಯಗಳಲ್ಲಿ ತೊಡಗಿರುವವರಿಗೆ ಸಾಮಾಜಿಕ ರಕ್ಷಣೆ ಒದಗಿಸುವ ಉದ್ದೇಶ ಹೊಂದಿದೆ. ಎರಡನೇ ಹಂತದಲ್ಲಿ ರಾಜ್ಯ ಸರ್ಕಾರಗಳ ಮೂಲಕ ಒದಗಿಸುವ ಹೆಚ್ಚುವರಿ ನಗದು ಮತ್ತು ಇತರ ಸೌಲಭ್ಯಗಳ ಸಾಮಾಜಿಕ ಭದ್ರತಾ ಪ್ಯಾಕೇಜ್ ಯೋಜನೆಯನ್ನು ಈ ಕಾರ್ಯಕ್ರಮ ಬಲಗೊಳಿಸಲಿದೆ ಎಂದು ವಿಶ್ವಬ್ಯಾಂಕ್‍ನ ಪ್ರಕಟಣೆ ತಿಳಿಸಿದೆ.