ಲೋಕದರ್ಶನ ವರದಿ
ರಾಯಬಾಗ 19: ಪಾಲಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ನೀಡುವುದರ ಮೂಲಕ ರಾಷ್ಟ್ರವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಮಾಡಲು ಕೈಜೋಡಿಸಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ರವಿವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗಳಿಗೆ ತೆರಳಿ ಮಕ್ಕಳಿಗೆ ಪೋಲಿಯೋ ಹನಿ ನೀಡಿ, ತಾಲೂಕನಲ್ಲಿ ಯಾವುದೇ ಮಗು ಪೋಲಿಯೋ ಹನಿಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕೆಂದರು.
ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಾಟೀಲ ಮಾತನಾಡಿ, ಕೇಂದ್ರ ಸರಕಾರ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಒಂದೇ ಸುತ್ತಿನಲ್ಲಿ ಏರ್ಪಡಿಸಿರುವ ಹಿನ್ನಲೆಯಲ್ಲಿ 5 ವರ್ಷದೊಳಿಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡುವ ಉದ್ದೇಶದಿಂದ ತಾಲೂಕಿನಲ್ಲಿ ಒಟ್ಟು 58622 ಮಕ್ಕಳನ್ನು ಗುರುತಿಸಿ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಒಟ್ಟು 207 ಪೋಲಿಯೋ ಕೇಂದ್ರಗಳನ್ನು, 9 ಮೊಬೈಲ್ ತಂಡ ಹಾಗೂ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಅನೇಕ ಕಡೆಗಳಲ್ಲಿ ಟ್ರಾನಸಿಟ್ ಭೂತಳನ್ನು ಸ್ಥಾಪಿಸಲಾಗಿದೆ. ಲಸಿಕೆ ನೀಡಲು 828 ಕಾರ್ಯಕರ್ತರನ್ನು ಹಾಗೂ 47 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ ಚಂದ್ರಕಾಂತ ಭಜಂತ್ರಿ, ಮುಖ್ಯವೈದ್ಯಾಧಿಕಾರಿ ಡಾ.ಆರ್.ಎಚ್.ರಂಗನ್ನವರ, ಆರೋಗ್ಯ ಇಲಾಖೆ ನೋಡಲ ಅಧಿಕಾರಿ ಶಿವಲೀಲಾ ಶಿರೋಳೆ, ಸಿಡಿಪಿಒ ಸಂತೋಷಕುಮಾರ ಕಾಂಬಳೆ, ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ಬಾನೆ, ಇಒ ಪ್ರಕಾಶ ವಡ್ಡರ, ಡಾ.ಸುಕುಮಾರ ಬಾಗಾಯಿ, ಡಾ.ಸಿದ್ದಾರ್ಥ ಮಗದುಮ್ಮ, ನಂದಕುಮಾರ ಪಾಟೀಲ, ಕಾವೇರಿ ತಳವಾರ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.