ಪರಸ್ಪರ ಸಹಕಾರದಿಂದ ಕೆಲಸ ನಿರ್ವಹಿಸಿ- ಸಿಇಓ ರಾಹುಲ್ ರತ್ನ ಪಾಂಡೇಯ

Work collaboratively- CEO Rahul Ratna Pandey

ಪರಸ್ಪರ ಸಹಕಾರದಿಂದ ಕೆಲಸ ನಿರ್ವಹಿಸಿ- ಸಿಇಓ ರಾಹುಲ್ ರತ್ನ ಪಾಂಡೇಯ 

ಕೊಪ್ಪಳ 09: ಡಿಸೆಂಬರ್ 12 ಮತ್ತು 13 ರಂದು ಹನುಮಮಾಲ ಕಾರ್ಯಕ್ರಮ ನಿರ್ವಹಣೆಗೆ ರಚಿಸಿರುವ ವಿವಿಧ ಸಮಿತಿಯ ಸದಸ್ಯರು ಪರಸ್ಪರ ಸಹಕಾರದಿಂದ ಕೆಲಸ ನಿರ್ವಹಣೆ ಮಾಡಬೇಕು ಅಂದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾ ಪ್ರಭಾರಿ ಜಿಲ್ಲಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೇಯ ಹೇಳಿದರು. 

ಅವರು ಸೋಮವಾರ ವಿರುಪಾಪುರ ಗಡ್ಡಿಯಲ್ಲಿರುವ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಹನುಮಮಾಲ ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಯಾವುದೇ ಸಮಸ್ಯೆಗಳಾದರೆ ತಕ್ಷಣ ಕಂಟ್ರೋಲ್ ರೂಮಿಗೆ ಕರೆ ಮಾಡಬೇಕು. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯ ವೈದ್ಯರು ಜನರಿಗೆ ಯಾವುದೇ ಸಮಸ್ಯೆಗಳಾದರೆ ತಕ್ಷಣ ಅವರಿಗೆ ಸೇವೆ ನೀಡಲು ಸನ್ನದ್ದರಿರಬೇಕು. ಜನರಿಗೆ ಯಾವ- ಯಾವ ಸಮಸ್ಯೆಗಳಾಗಬಹುದು ಎಂಬುದನ್ನು ತಮ್ಮಲ್ಲಿ ಮುಂದಾಲೋಚನೆ ಸಹ ಇರಬೇಕು ಎಂದು ಹೇಳಿದರು. 

ವಿದ್ಯುತ್ ಸಮಸ್ಯೆಗಳಾಗದಂತೆ ನೋಡಿಕೊಳ್ಳಿ. ಜನರು ತಿರುಗಾಡುವ ಎಲ್ಲಾ ಕಡೆ ಲೈಟಿಂಗ್ ವ್ಯವಸ್ಥೆ ಮಾಡಿ, ಪಂಪಾ ಸರೋವರದಲ್ಲಿ ಮೊಸಳೆಗಳು ಇವೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿರುವುದರಿಂದ ಅದರಲ್ಲಿ ಇಳಿದು ಯಾರು ಸ್ನಾನ ಮಾಡಬಾರದು ಇದನ್ನು ನೋಡಿಕೊಳ್ಳಲು ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಿ. ಹನುಮಮಾಲ ಭಕ್ತಾಧಿಗಳಿಗೆ  ಪ್ರಸಾದ ವ್ಯವಸ್ಥೆ ಕಡಿಮೆ ಬೀಳದಂತೆ ಸರಿಯಾದ ವ್ಯವಸ್ಥೆ  ಮಾಡಬೇಕು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ತಮ್ಮ ಸಲಹೆಗಳನ್ನು ನೀಡಿ ಎಂದು ಹೇಳಿದರು. 

ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರು ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು  ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಅವು ಮೂರು ಸಿಪ್ಟನಲ್ಲಿ ಕಾರ್ಯ ನಿರ್ವಹಿಸಲು ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಪೆಂಡಾಲ ಕೆಲಸ ನಡೆಯುತ್ತಿದೆ. ಪಾಕಿಂರ್ಗ್ ಸ್ಥಳಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.  ವೇದಪಾಠ ಶಾಲೆ ಹತ್ತಿರ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದಲೆ ಇತರೆ ಸ್ಥಳಗಳಿಗೆ ಪ್ರಸಾದ ಕಳಿಸಲಾಗುವುದು.  ಎಂದು ಹೇಳಿದರು. 

ಸಭೆಗು ಮುಂಚೆ  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಇತರೆ ಅಧಿಕಾರಿಗಳು ವೇದಪಾಠ ಶಾಲೆಯ ಆವರಣದಲ್ಲಿರುವ ಪ್ರಸಾದ ಕೋಣೆಗೆ ಭೇಟಿ ನೀಡಿ ಲಡ್ಡು ಪ್ರಸಾದದ ತೈಯಾರಿ ಪರೀಶೀಲನೆ, ಅಂಜನಾದ್ರಿ ಬೆಟ್ಟ. ಪಾಕಿಂರ್ಗ ವ್ಯವಸ್ಥೆ ಸ್ಥಳಗಳು ಮತ್ತು ಪಂಪಾ ಸರೋವರ ಸೇರಿದಂತೆ ಇತರೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪೂರ್ವಸಿದ್ದತೆಗಳ ಪರೀಶೀಲನೆ ನಡೆಸಿದರು. 

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಕೊಪ್ಪಳ ಅಬಕಾರಿ ಅಧಿಕಾರಿ  ಪ್ರಶಾಂತಕುಮಾರ, ಕನಕಗಿರಿ ತಹಶೀಲ್ದಾರ ವಿಶ್ವನಾಥ ಮುರಡಿ, ಗಂಗಾವತಿ ನಗರಸಭೆ ಪೌರಯುಕ್ತರು ಆರ್‌.ವಿರೂಪಾಕ್ಷಪ್ಪ ಅರಣ್ಯ ಇಲಾಖೆ, ಪೋಲಿಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.