ಮೆಲ್ಬೋರ್ನ್, ಫೆ.26 ,ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡವನ್ನು ಮಹಿಳಾ ವಿಶ್ವಕಪ್ ಟಿ-20 ಟೂರ್ನಿಯ “ಎ” ಗುಂಪಿನ ಲೀಗ್ ಹಂತದಲ್ಲಿ ಮಣಿಸಿರುವ ಭಾರತ ವನಿತೆಯರ ತಂಡ, ಗುರುವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಪಂದ್ಯವನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ತವಕದಲ್ಲಿದೆ. ಆಡಿರುವ ಎರಡೂ ಪಂದ್ಯ ಗೆದ್ದಿರುವ ಹರ್ಮನ್ ಪ್ರೀತ್ ಪಡೆ ಅಂಕ ಪಟ್ಟಿಯಲ್ಲಿ ನಾಲ್ಕು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಎರಡು ಅಂಕ ಕಲೆ ಹಾಕಿದೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಬಲಾಢ್ಯವಾಗಿದೆ. ಎರಡೂ ಪಂದ್ಯಗಳಲ್ಲಿ ಸ್ಟಾರ್ ಆಟಗಾರ್ತಿಯರು ತಮ್ಮ ಘನತೆಗೆ ತಕ್ಕ ಆಟವಾಡಿದ್ದಾರೆ. ಆದರೆ, ಎರಡೂ ಪಂದ್ಯದಲ್ಲಿ ಮಿಂಚು ಹರಿಸಿರುವ ಸ್ಪಿನ್ ಬೌಲರ್ ಪೂನಂ ಯಾದವ್ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಇವರು ಆಸೀಸ್ ವಿರುದ್ಧ 4, ಬಾಂಗ್ಲಾ ವಿರುದ್ಧ 3 ವಿಕೆಟ್ ಕಬಳಿಸಿದ್ದರು. ಉಳಿದಂತೆ ಶಿಖಾ ಪಾಂಡೆ 5, ರಾಜೇಶ್ವರಿ ಗಾಯಕ್ವಾಡ್ ಹಾಗೂ ಅರುಂಧತಿ ರೆಡ್ಡಿ ತಲಾ ಎರಡು ವಿಕೆಟ್ ಪಡೆದು ಭರವಸೆ ಮೂಡಿಸಿದ್ದಾರೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗಕ್ಕೆ ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೇಮಿಮಾ ರೋಡ್ರಿಗಸ್ ಬಲ ತುಂಬ ಬಲ ಆಟಗಾರರು. ತನ್ಯಾ ಭಾಟಿಯಾ ಸಹ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿದೆ. ಹರ್ಮನ್ ಪ್ರೀತ್ ಕೌರ್ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ನ್ಯೂಜಿಲೆಂಡ್ ತಂಡದಲ್ಲೂ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ನಾಯಕಿ ಸೋಫಿಯಾ ಡಿವೈನ್ ಸಿಕ್ಕ ಅವಕಾಶ ಬಳಸಿಕೊಂಡು ಬ್ಯಾಟಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ. ಮ್ಯಾಡಿ ಗ್ರೀನ್ ಸಹ ಎದುರಾಳಿ ಬೌಲರ್ ಗಳನ್ನು ಕಾಡಬಲ್ಲರು. ಹೇಲಿ ಜೆನ್ಸನ್ ವಿಕೆಟ್ ಪಡೆದು ಅಬ್ಬರಿಸಬಲ್ಲರು. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ, ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಿವೀಸ್ ತಂಡದ್ದಾಗಿದೆ. ಪಂದ್ಯದ ಸಮಯ: ಬೆಳಗ್ಗೆ 9.30ಕ್ಕೆ