ಕ್ಯಾನ್ಬೆರಾ, ಫೆ.28 : ಭರವಸೆಯ ಬೌಲರ್ ಗಳಾದ ಸಾರಾ ಗ್ಲೆನ್ (15 ಕ್ಕೆ 3) ಮತ್ತು ಅನ್ಯಾ ಶ್ರಬ್ಸೋಲ್ (25 ಕ್ಕೆ 3) ಉತ್ತಮ ದಾಳಿಯ ನೆರವಿನಿಂದ ಐಸಿಸಿ ಮಹಿಳಾ ಟಿ-20 ವಿಶ್ವಕಪ್‌ನ “ಬಿ” ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ 42 ರನ್‌ಗಳಿಂದ ಪಾಕಿಸ್ತಾನವನ್ನು ಮಣಿಸಿತು,
ಟಾಸ್ ಸೋತರೂ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು, ನಾಯಕ ಹೀದರ್ ನೈಟ್ 47 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 62, ಮತ್ತು ನಟಾಲಿಯಾ ಸ್ಕೀವರ್ ಅವರ 29 ಎಸೆತಗಳಲ್ಲಿ 36 ರನ್ ಸಿಡಿಸಿದರು. ಉಳಿದಂತೆ ಫ್ರಾನ್ ವಿಲ್ಸನ್ 22 ಮತ್ತು ಡೇನಿಯಲ್ ವೈಟ್ 16 ರನ್ ಗಳಿಸಿದರು. ಪಾಕಿಸ್ತಾನ ಪರ ಇಮಾನ್ ಅನ್ವರ್ 30 ರನ್‌ಗಳಿಗೆ ಮೂರು ವಿಕೆಟ್ ಮತ್ತು ನಿಡಾ ದಾರ್ 43 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 158 ರನ್ ಕಲೆ ಹಾಕಿತು.
ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡದ ಆಲಿಯಾ ರಿಯಾಜ್ 33 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 41 ರನ್ ಗಳಿಸಿದರೂ ತಮ್ಮ ತಂಡಕ್ಕೆ ಗೆಲುವಿನ ಮಾಲೆ ತೊಡಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ್ತಿ ಜಾವೇರಿಯಾ ಖಾನ್ 16 ಮತ್ತು ಮುನಿಬಾ ಅಲಿ 10 ರನ್ ಗಳಿಸಿದರು. ಇಂಗ್ಲೆಂಡ್ ಪರ ಗ್ಲೆನ್, ಶ್ರಬ್ಸೋಲ್ ಮೂರು, ಕ್ಯಾಥರೀನ್ ಬ್ರಂಟ್ ಹಾಗೂ ಸೋಫಿ ಎಕ್ಲೆಸ್ಟೋನ್ ತಲಾ ಎರಡು ವಿಕೆಟ್ ಪಡೆದರು. ಪಾಕಿಸ್ತಾನದ ಇಡೀ ತಂಡ 19.4 ಓವರ್‌ಗಳಲ್ಲಿ 116 ರನ್‌ಗಳಿಗೆ ಕುಸಿಯಿತು.