ಕಟಕ್,ಜ 6 ಸಂಘಟಿತ ಪ್ರದರ್ಶನ ತೋರಿದ ಭಾರತ ಸಿ ತಂಡ ಮಹಿಳಾ ಟಿ-20 ಚಾಲೆಂಜರ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಭಾರತ ಎ ವಿರುದ್ಧ 10 ರನ್ ಗಳಿಂದ ಜಯ ಸಾಧಿಸಿತು.
ಇಲ್ಲಿನ, ಬಾರಬತಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಿ ತಂಡ ನಿಗದಿತ 20 ಓವರ್ ಗಳಿಗೆ 7 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಭಾರತ ಎ ತಂಡ 20 ಓವರ್ ಗಳಿಗೆ 6 ವಿಕೆಟ್ ನಷ್ಟಕ್ಕೆ 113 ರನ್ ಗಳಿಗೆ ಶಕ್ತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.
ಭಾರತ ಸಿ ನೀಡಿದ್ದ 124 ರನ್ ಗುರಿ ಹಿಂಬಾಲಿಸಿದ್ದ ಭಾರತ ಎ ತಂಡದ ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ ಅದ್ಭುತ ಬ್ಯಾಟಿಂಗ್ ಮಾಡಿದರು. ಕೊನೆಯ ಎಸೆತದವರೆಗೂ ತಂಡದ ಮೊದಲ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ, ಅಂತಿಮವಾಗಿ 10 ರನ್ ಗಳಿಂದ ಹರ್ಮನ್ ಪ್ರೀತ್ ಕೌರ್ ಬಳಗ ಸೋಲು ಒಪ್ಪಿಕೊಳ್ಳಬೇಕಾಯಿತು. ದೀಪ್ತಿ ಶರ್ಮಾ 29 ಎಸೆತಗಳಲ್ಲಿ ಮೂರು ಬೌಂಡರಿಯೊಂದಿಗೆ 34 ರನ್ ಗಳಿಸಿ ಅಜೇಯರಾಗಿ ಉಳಿದರು. ಪ್ರಿಯಾ ಪೂನಿಯಾ 25 ರನ್ ಹಾಗೂ ನಾಯಕಿ ಕೌರ್ 13 ರನ್ ಗಳಿಸಿದರು. ಆದರೆ, ಇವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯುವಲ್ಲಿ ವಿಫಲರಾದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಸಿ ತಂಡಕ್ಕೆ ಯಸ್ತಿಕಾ ಭಾಟಿಯಾ(18) ಹಾಗೂ ಶಫಾಲಿ ವರ್ಮಾ ಜೋಡಿ ಮೊದಲನೇ ವಿಕೆಟ್ ಗೆ 54 ರನ್ ಗಳಿಸಿ ಉತ್ತಮ ಆರಂಭ ನೀಡಿತು.
ಅದ್ಭುತ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮಾ 24 ಎಸೆತಗಳಲ್ಲಿ 38 ರನ್ ಚಚ್ಚಿದರು. ಇವರ ಇನಿಂಗ್ಸ್ ನಲ್ಲಿ ಒಂದು ಸಿಕ್ಸರ್ ಹಾಗೂ 7 ಬೌಂಡರಿಗಳಿದ್ದವು.
ಕೊನೆಯ ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಡಿ. ಹೇಮಲತಾ 25 ಎಸೆತಗಳಲ್ಲಿ 24 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತ ಎ ಪರ ದೀಪ್ತಿ ಶರ್ಮಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ ಸಿ: 20 ಓವರ್ ಗಳಿಗೆ 123/7 (ಶಫಾಲಿ ವರ್ಮಾ 38, ಡಿ.ಹೇಮಲತಾ ಔಟಾಗದೆ 24; ದೀಪ್ತಿ ಶರ್ಮಾ 20 ಕ್ಕೆ 2)
ಭಾರತ ಎ: 20 ಓವರ್ ಗಳಿಗೆ 113/6 (ದೀಪ್ತಿ ಶರ್ಮಾ ಔಟಾಗದೆ 34, ಪ್ರಿಯಾ ಪೂನಿಯಾ 25; ಮನಾಳಿ ದಾಕ್ಷಿಣಿ 15 ಕ್ಕೆ 1, ಅರುಂಧತಿ ರೆಡ್ಡಿ 17 ಕ್ಕೆ 1)