ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಹಿಳೆ ಮೇಲೆ ಐಎಎಸ್ ಅಧಿಕಾರಿಯಿಂದ ಅತ್ಯಾಚಾರ

ರಾಯಪುರ್ (ಚತ್ತೀಸ್ ಘಡ್), ಮಾ ೪,  ಮಹಿಳೆಯೊಬ್ಬರ  ಪತಿಯನ್ನು  ಕೆಲಸದಿಂದ  ವಜಾಗೊಳಿಸುವುದಾಗಿ ಬೆದರಿಸಿ,  ಆಕೆಯ  ಮೇಲೆ   ಜಿಲ್ಲಾಧಿಕಾರಿ  ಕಾರ್ಯಾಲಯದಲ್ಲಿಯೇ  ಜಿಲ್ಲಾಧಿಕಾರಿಯೊಬ್ಬರು ಅತ್ಯಾಚಾರ  ನಡೆಸಿರುವ   ಪ್ರಕರಣ    ಚತ್ತೀಸ್ ಘಡ್  ರಾಜ್ಯದ  ಜಂಗಜೀರ್ ಚಾಂಪ್ ಜಿಲ್ಲೆಯಲ್ಲಿ ವರದಿಯಾಗಿದೆ.ಜಂಗಜೀರ್ ಚಾಂಪ್ ಜಿಲ್ಲೆಯ   ಜಿಲ್ಲಾಧಿಕಾರಿ  ಜನಕ್ ಪ್ರಸಾದ್ ಪಾಠಕ್  ಮೇ ೧೫ ರಂದು  ಜಿಲ್ಲಾಧಿಕಾರಿ  ಕಚೇರಿಯಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ೩೩ ವರ್ಷದ ಮಹಿಳೆಯೊಬ್ಬರು  ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಸರ್ಕಾರಿ ಉದ್ಯೋಗಿಯಾಗಿರುವ ತನ್ನ  ಪತಿಯನ್ನು ಸೇವೆಯಿಂದ ವಜಾಗೊಳಿಸುವ ಬೆದರಿಕೆಯೊಡ್ಡಿ ತನ್ನ ಮೇಲೆ  ಜಿಲ್ಲಾಧಿಕಾರಿ ಅತ್ಯಾಚಾರ ನಡೆಸಿದ್ದಾನೆ   ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.  ಪ್ರಕರಣ  ಹಿನ್ನಲೆಯಲ್ಲಿ   ಜಿಲ್ಲಾಧಿಕಾರಿ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ  ಪಾರುಲ್ ಮಾಥುರ್ ಹೇಳಿದ್ದಾರೆ.ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಜಿಲ್ಲಾಧಿಕಾರಿಯನ್ನು  ಈಗ  ರಾಜ್ಯ   ಭೂ ದಾಖಲೆಗಳ  ನಿರ್ದೇಶಕರನ್ನಾಗಿ ವರ್ಗಾಯಿಸಿದೆ. ತಮಗೆ ಜಿಲ್ಲಾಧಿಕಾರಿ, ಅಶ್ಲೀಲ ಸಂದೇಶ ರವಾನಿಸಿ, ಅತ್ಯಾಚಾರ  ಎಸಗಿದ್ದಾರೆ  ಎಂದು ಬಾಧಿತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.ಜಿಲ್ಲಾಧಿಕಾರಿ  ಪಾಠಕ್ ವಿರುದ್ದ  ಭಾರತೀಯ ದಂಡ ಸಂಹಿತೆ ೩೭೬, ೫೦೬,೫೦೯ ಬಿ  ಕಲಂ ಗಳಡಿ  ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಆರೋಪಿ ಐಎಎಸ್ ಅಧಿಕಾರಿಯನ್ನು ಇನ್ನೂ ಬಂಧಿಸಬೇಕಿದೆ.