ತಾಯಿ-ಮಗು ಆಸ್ಪತ್ರೆಯಲ್ಲಿ ಮಹಿಳೆಯ ಸಾವು: ತನಿಖೆಗೆ ಒತ್ತಾಯ

ಮಾಂಜರಿ 16:  ಚಿಕ್ಕೋಡಿ ಗ್ರಾಮೀಣ ಭಾಗದ ಬಡ ಜನರಿಗೆ ಅನುಕೂಲ ಆಗಲೆಂದು, ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ವತಿಯಿಂದ  ಚಿಕ್ಕೋಡಿ ಪಟ್ಟಣದಲ್ಲಿ, ಸುಮಾರು 28 ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ತಾಯಿ-ಮಗು ಆಸ್ಪತ್ರೆಯು ನಿರ್ಮಾಣವಾಗಿ ಕಾರ್ಯ ನಿರ್ವಹಿಸುತ್ತಿದೆ, ಆದರೆ ಇಲ್ಲಿ ಒಳ್ಳೆಯ ಸೌಕರ್ಯ ಮತ್ತು ಚಿಕಿತ್ಸೆ ಬಡ ಜನರಿಗೆ ದೊರಕದೇ, ಶುಕ್ರವಾರ ದಿ  15. ರಂದು, ಚಿಕ್ಕೋಡಿ ಪಟ್ಟಣದ ನಿವಾಸಿಯಾದ  ಫೀಜಾ ಆತೀಫ್ ಸನದಿ ಎಂಬ ಮಹಿಳೆ ಉಪಚಾರದ ವೇಳೆ ಮೃತಪಟ್ಟಿದ್ದಾಳೆ, ಇದಕ್ಕೆ ಆರೋಗ್ಯ ಇಲಾಖೆಯವ ಅಧಿಕಾರಿಗಳೇ ನೇರ ಹೊಣೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಮೂಲಕ, ಆರೋಗ್ಯ ಸಚಿವರಿಗೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. 

 ಈ ಸಂದರ್ಭದಲ್ಲಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ಅಧಿಕಾರಿಗಳು, ಚಿಕ್ಕೋಡಿ ಪಟ್ಟಣದಲ್ಲಿ ತಮ್ಮದೇ ಆದಂತ ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ, ತಮ್ಮ ತಮ್ಮ ಸ್ವಂತದ ಲಾಭಕ್ಕಾಗಿ ಸರಕಾರಿ ಆಸ್ಪತ್ರೆಯಲ್ಲಿ ಇರುವ ರೋಗಿಗಳ ಕಡೆಗೆ ಗಮನ ಹರಿಸದೇ ಖಾಸಗಿ ಆಸ್ಪತ್ರೆಗಳ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು. ಕರವೇ ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಮಾತನಾಡಿ, ಸರಕಾರಿ ಕೆಲಸದಲ್ಲಿ ಇರುವವರು ಬೇರೆ ಯಾವುದೇ ತರದ ಲಾಭದಾಯಕ ಹುದ್ದೆಗಳನ್ನು ಅಲಂಕರಿಸುವಂತಿಲ್ಲ ಹಾಗೂ ಖಾಸಗಿ ಉದ್ಯೋಗ ಮಾಡುವಂತಿಲ್ಲ ಎಂಬ ಸರಕಾರದ ನಿಯಮವಿದ್ದರೂ ಸಹ ಯಾವುದೇ ತರದ ಜವಾಬ್ದಾರಿ ಇರುವುದಿಲ್ಲ, ಆರೋಗ್ಯ ಸಚಿವರು ಇತ್ತ ಕಡೆಗೆ ಗಮನ ಹರಿಸಿ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥ ಆರೋಗ್ಯ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಮಹಿಳೆಯ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಮತ್ತೆ ಇದೇ ತರಹ ಮರುಕಳಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಮನವಿ ಸ್ವೀಕರಸಿ ತಹಶೀಲ್ದಾರರಾದ ಪ್ರಮೀಳಾ ದೇಶಪಾಂಡೆ ಮಾತನಾಡಿ, ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಚಿವರಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುವುದು ಎಂದು ಹೇಳಿದರು.* 

ಈ ಸಂಧರ್ಭದಲ್ಲಿ ಸಂತೋಷ ಪೂಜಾರಿ, ರಫೀಕ್ ಪಠಾಣ, ರಮೇಶ ಪಾಟೀಲ, ರುದ್ರಯ್ಯಾ ಹಿರೇಮಠ, ರಾಜೇಂದ್ರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.