ಗದಗ ಜಗದ್ಗುರು ತೋಂಟದಾರ್ಯ ವಸತಿ ಶಾಲೆಗೆ ಕಬಡ್ಡಿ ಟ್ರೋಫಿ

ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ 17 ವರ್ಷದೊಳಗಿನ ಬಾಲಕರ ಕಬಡ್ಡಿ ಪಂದ್ಯಾವಳಿ 

ಧಾರವಾಡ 16: ನಗರದ ಲೀಲಾವತಿ ಆರ್‌. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 17 ವರ್ಷದೊಳಗಿನ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಗದಗ ನಗರದ ಜಗದ್ಗುರು ತೋಂಟದಾರ್ಯ ವಸತಿ ಶಾಲೆಯ ಬಾಲಕರು ಅಂತಿಮ ಹಣಾಹಣಿಯಲ್ಲಿ ನಗರದ ಕೆಲಗೇರಿಯ ಜೆ.ಎಸ್‌.ಎಸ್‌. ಪಬ್ಲಿಕ್ ಶಾಲೆಯ ತಂಡವನ್ನು ಮಣಿಸಿ ಕಬಡ್ಡಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.  

ಧಾರವಾಡ ಮತ್ತು ಗದಗ ಜಿಲ್ಲೆಯ ಸಿಬಿಎಸ್‌ಇ ಪಠ್ಯಕ್ರಮ ಆಧಾರಿತ ಶಾಲೆಗಳ ಪ್ರಾಂಶುಪಾಲರ ಒಕ್ಕೂಟವಾಗಿರುವ ‘ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕ ಸಹೋದಯ(ಎಚ್‌ಡಿಎನ್‌ಕೆಎಸ್)’ ಸಂಘಟನೆಯ ಸಹಯೋಗದಲ್ಲಿ ಆತಿಥೇಯ ಲೀಲಾವತಿ ಆರ್‌. ಚರಂತಿಮಠ ಪಬ್ಲಿಕ್ ಶಾಲೆಯು ಪಂದ್ಯಾವಳಿಯನ್ನು ಆಯೋಜಿತ್ತು.  

ಉದ್ಘಾಟನೆ : 15ನೇಯ ರಾಜ್ಯಮಟ್ಟದ 23 ವರುಷದ ಒಳಗಿನ ಪುರುಷರ ಸೈಕಲ್ ಪಂದ್ಯಾವಳಿಯಲ್ಲಿ ಸ್ವರ್ಣ ಪದಕ ಗೆದ್ದಿರುವ ಧಾರವಾಡದ ಸ್ವಯಮ್ ಕಠಾರೆ ಹಾಗೂ ಎಚ್‌.ಡಿ.ಎನ್‌.ಕೆ.ಎಸ್‌. ಸಹ ಕಾರ್ಯದರ್ಶಿ ರಜನಿ ಪಾಟೀಲ ಜಂಟಿಯಾಗಿ ಪಂದ್ಯಾವಳಿ ಉದ್ಘಾಟಿಸಿದರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಅರುಣ ಚರಂತಿಮಠ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಧಾರವಾಡ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ವಿ. ಆರ್‌. ಹಾದಿಮನಿ, ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ಅಶ್ವಿನಿ ಚಿಕ್ಕಬಳ್ಳಾಪುರ ಶಾಲೆಯ ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ, ಧಾರವಾಡ ಮತ್ತು ಗದಗ ಜಿಲ್ಲೆಗಳಿಂದ ಆಗಮಿಸಿದ್ದ ಕಬಡ್ಡಿ ಕ್ರೀಡಾಪಟುಗಳು ಇದ್ದರು.  

ವೃತ್ತ ಅರಣ್ಯಾಧಿಕಾರಿ ನಾಗೇಶ ಕಾಡದೇವರಮಠ, ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ತರಬೇತುದಾರ ರಂಗನಾಥ, ಹಿರಿಯ ವಕೀಲ ಅರುಣ ಚರಂತಿಮಠ ಅವರು ವಿಜೇತ ಶಾಲೆಯ ಬಾಲಕರಿಗೆ ಟ್ರೋಫಿ ವಿತರಿಸಿದರು.