ಸಿ ಮ್ ಐಷಾರಾಮಿ ಖಚೇರಿಗೆ ಕೋಟಿ ಕೋಟಿ ಹಣ ಖರ್ಚು: ಬಿಜೆಪಿ ಆಕ್ಷೇಪ

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ, ಶಾಸಕರ ಕ್ಷೇತ್ರಕ್ಕೆ ನೀಡಲು ಹಣ ಕೊರತೆ ಎದುರಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಐಷಾರಾಮಿ ಕಚೇರಿಗೆ ಕೋಟಿ ಕೋಟಿ ಹಣ ವ್ಯಯಿಸಿದ್ದಾರೆ ಎಂದು ವರದಿಯಾಗಿದ್ದು ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ಬರೋಬ್ಬರಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಎಂ ಸಿದ್ದರಾಮಯ್ಯನವರ ಕಚೇರಿ ನವೀಕರಣ ಮಾಡುತ್ತಿದೆ ಈ  ಕಾಂಗ್ರೆಸ್ ಸರ್ಕಾರ ಎಂದು ಕಿಡಿ ಕಾರಿದ್ದಾರೆ.  ಗ್ಯಾರೆಂಟಿಗಳಿಂದ ಕಳೆದ ವರ್ಷ ಪೂರ್ತಿ ಅಭಿವೃದ್ಧಿಗೆ ದುಡ್ಡಿರಲಿಲ್ಲ. ರಾಜ್ಯದ ಜನತೆಯ ಮೇಲೆ ಒಟ್ಟು 1.05 ಲಕ್ಷ ಕೋಟಿ ರೂಪಾಯಿ ಸಾಲ ಇದೆ. ಪರಿಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯ ನವರೇ ತಮ್ಮ ಕಚೇರಿ ನವೀಕರಣಕ್ಕೆ 3 ಕೋಟಿ ರೂಪಾಯಿ ವೆಚ್ಚ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

ಕಳೆದ ವರ್ಷವಷ್ಟೇ ಮೂರು ಕೋಟಿ ರೂಪಾಯಿ ಖರ್ಚು ಮಾಡಿ ತಮ್ಮ ಸರ್ಕಾರಿ ನಿವಾಸ ಕಾವೇರಿ ನವೀಕರಣಗೊಂಡಿದೆ. ಈಗ ತಮ್ಮ ಕಚೇರಿ ನವೀಕರಣಕ್ಕೆ ಮತ್ತೊಮ್ಮೆ ಮೂರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೀರಲ್ಲ, ತಮ್ಮ ಆತ್ಮಸಾಕ್ಷಿ ಇದಕ್ಕೆ ಒಪ್ಪುತ್ತದೆಯೇ? ಇಂತಹ ದುಂದುವೆಚ್ಚ ಮಾಡುವ ಬದಲು, ಆ ಹಣವನ್ನ ಬಡವರಿಗಾಗಿ ಉಪಯೋಗಿಸಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.