ಶಿಶು ತೀವ್ರ ನಿಗಾ ಘಟಕದಲ್ಲಿ ಬೆಂಕಿ: 10 ನವಜಾತ ಶಿಶುಗಳು ಸಜೀವ ದಹನ

ಝಾನ್ಸಿ 16: ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 10 ನವಜಾತ ಶಿಶುಗಳು ಸಜೀವ ದಹನವಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿ ಶಿಶು ತೀವ್ರ ನಿಗಾ ಘಟಕದ ಸುತ್ತಲೂ ಆವರಿಸಿದೆ. ಬೆಂಕಿ ಹೊತ್ತುಕೊಂಡಂತೆಯೇ ಕಂಗೆಟ್ಟ ಮಕ್ಕಳ ಪೋಷಕರು ಜೋರಾಗಿ ಕಿರುಚಾಡ ತೊಡಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಆಘಾತಗೊಂಡಿದ್ದು, ವೈದ್ಯರು ಮತ್ತು ಇತರೆ ಸಿಬ್ಬಂದಿ ವಾರ್ಡ್‌ನ ಕಿಟಕಿ ಗಾಜುಗಳನ್ನು ಒಡೆದು ಅವುಗಳ ಮೂಲಕ ರೋಗಿಗಳನ್ನು ಹೊರಕ್ಕೆ ಕಳುಹಿಸಿದ್ದಾರೆ.

ಆದರೆ, ಅಷ್ಟರಲ್ಲಾಗಲೇ 10 ಶಿಶುಗಳು ಸಜೀವ ದಹನವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತಲುಪುವ ವೇಳೆಗಾಗಲೇ ಎನ್‌ಐಸಿಯು ವಾರ್ಡ್ ದಟ್ಟ ಹೊಗೆಯಿಂದ ತುಂಬಿಕೊಂಡಿತ್ತು.

ಘಟನೆಯಲ್ಲಿ 16 ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ವಾರ್ಡ್ ನಲ್ಲಿ 54 ಮಕ್ಕಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದವು.

ಮಕ್ಕಳ ವಾರ್ಡ್‌ನ ಎರಡು ಘಟಕಗಳ ಪೈಕಿ ಒಂದರಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಎನ್‌ಐಸಿಯುದ ಹೊರ ಭಾಗದಲ್ಲಿದ್ದ ಮಕ್ಕಳನ್ನು ರಕ್ಷಿಸಲಾಗಿದೆ.

ಈ ನಡುವೆ ದುರ್ಘಟನೆ ಸಂಬಂಧ ಉತ್ತರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದ್ದು, ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.

ಸ್ಥಳಕ್ಕೆ ಆರು ಅಗ್ನಿಶಾಮಕ ವಾಹನಗಳ ಜತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಆಸ್ಪತ್ರೆಯ ಹೊರಗೆ ಮೃತಪಟ್ಟ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.