ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಜಯದ ವಿಶ್ವಾಸ

ಕಟಕ್, ಡಿ. 21 ಎರಡನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಮೂರನೇ ಏಕದಿನ ಕ್ರಿಕೆಟ್ ಪಂದ್ಯಕ್ಕೆ ಸಜ್ಜಾಗಿದೆ. ಈಗಾಗಲೇ ವೆಸ್ಟ್ ಇಂಡೀಸ್ ಹಾಗೂ ಆತಿಥೇಯ ತಂಡ ತಲಾ ಒಂದು ಪಂದ್ಯ ಗೆದ್ದಿದ್ದರಿಂದ ರೋಚಕತೆ ಹೆಚ್ಚಿದೆ.   ಮೊದಲ ಪಂದ್ಯವನ್ನು ವಿಂಡೀಸ್ 8 ವಿಕೆಟ್ ಗಳಿಂದ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ವಿರಾಟ್ ಪಡೆ ಗೆಲುವು ಸಾಧಿಸಿತ್ತು. ಮೂರನೇ ಪಂದ್ಯ ಗೆದ್ದು ಏಕದಿನ ಸರಣಿಯನ್ನು ವಶಕ್ಕೆ ಪಡೆಯಲು ಭಾರತ ತಂಡ ಯೋಜನೆಯನ್ನು ರೂಪಿಸಿಕೊಂಡಿದೆ. ಸ್ಟಾರ್ ಆಟಗಾರರು ಎರಡೂ ತಂಡದಲ್ಲಿದ್ದು ಅಭಿಮಾನಿಗಳನ್ನು ರಂಜಿಸಲಿದೆ.   ಆರಂಭಿಕರ ಮೇಲೆ ಕಣ್ಣು  ಟೀಮ್ ಇಂಡಿಯಾದ ಆರಂಭಿಕರಾದ ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ಆಟಗಾರರು ರನ್ ಶಿಖರ ಏರಿ ಸಾಧನೆ ಮಾಡಿದ್ದರು. ಹೀಗಾಗಿ ಮೂರನೇ ಪಂದ್ಯದಲ್ಲಿ ಈ ಆಟಗಾರರು ಸೊಗಸಾದ ಪ್ರದರ್ಶನ ನೀಡಲು ಅಭ್ಯಾಸ ನಡೆಸಿದ್ದಾರೆ.   ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಮಾಡಲಿದ್ದು, ತಂಡಕ್ಕೆ ಬಲ ತುಂಬ ಬಲ್ಲರು. ಆದರೆ, ಎರಡು ಪಂದ್ಯಗಳಲ್ಲಿ ಚೇತೋಹಾರಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಇವರು, ಭಾನುವಾರದ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸ ಹೊಂದಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ರನ್ ವೇಗಕ್ಕೆ ಚುರುಕು ಮುಟ್ಟಿಸ ಬಲ್ಲ ಆಟಗಾರರು. ಈ ಆಟಗಾರರು ಸಿಕ್ಕ ಅವಕಾಶದಲ್ಲಿ ರನ್ ಬಾರಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಆಲ್ ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ನಿಂದಲೂ ತಂಡಕ್ಕೆ ನೆರವಾಗಬಲ್ಲರು.   ಬೌಲಿಂಗ್ ನಲ್ಲಿ ಕುಲ್ ದೀಪ್ ಯಾದವ್ ಎರಡನೇ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದು ಬೀಗಿದ್ದರು. ಹೀಗಾಗಿ ಇವರ ಮೇಲೆ ಭರವಸೆ ಮೂಡಿಸಿದ್ದಾರೆ. ಇನ್ನು ವೇಗದ ಬೌಲರ್ ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಆರಂಭದಲ್ಲಿ ವಿಕೆಟ್ ಬೇಟೆ ನಡೆಸಿ, ರನ್ ವೇಗಕ್ಕೆ ಕಡಿವಾಣ ಹಾಕಬಲ್ಲರು.   ವಿಂಡೀಸ್ ತಂಡದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುತ್ತಿದ್ದಾರೆ. ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್, ಏವಾನ್ ಲೂಯಿಸ್, ರೋಸ್ಟನ್ ಚೇಸ್, ನಿಕೋಲಸ್ ಪೋರನ್ ರನ್ ಸಿಡಿಸಿ ತಂಡಕ್ಕೆ ನೆರವಾಗಬಲ್ಲರು. ಮೂರನೇ ಪಂದ್ಯದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ದಾಖಲಿಸುವ ಕನಸು ತಂಡದ್ದಾಗಿದೆ.   ವಿಂಡೀಸ್ ಶೆಲ್ಡನ್ ಕಾಟ್ರೆಲ್, ಖಾರಿ ಪಿಯರ್, ಕೀಮೊ ಪೌಲ್, ಅಲ್ಜರಿ ಜೋಸೆಫ್, ವಿಕೆಟ್ ಬೇಟೆಯಾಡುವ ಕ್ಷಮತೆ ಹೊಂದಿದ್ದಾರೆ. ಈ ಆಟಗಾರರು ಭಾರತದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವ ಯೋಜನೆ ಮಾಡಿಕೊಂಡಿದ್ದಾರೆ.