ಹ್ಯಾಮಿಲ್ಟನ್, ಫೆ. 4, ಭಾರತದ ವಿರುದ್ಧ ನಾಳೆಯಿಂದ ಆರಂಭವಾಗುವ ಏಕದಿನ ಸರಣಿ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಂಗಾಮಿ ನಾಯಕ ಟಾಮ್ ಲಥಾಮ್, ಕೀ ಆಟಗಾರ ಕೇನ್ ವಿಲಿಯಮ್ಸನ್ ಅನುಪಸ್ಥಿತಿ ನಿರಾಸೆ ಉಂಟುಮಾಡಿದೆ ಎಂದು ಹೇಳಿದ್ದಾರೆ.ಭುಜದ ಗಾಯಕ್ಕೆ ತುತ್ತಾಗಿರುವ ಕೇನ್ ವಿಲಿಯಮ್ಸನ್ ಅವರು ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹಾಗಾಗಿ, ಟಾಮ್ ಲಥಾಮ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಲಿಯಮ್ಸನ್ ಬದಲು ಮಾರ್ಕ್ ಚಾಪ್ಮನ್ ಸ್ಥಾನ ಪಡೆದಿದ್ದಾರೆ.
ಭಾರತದ ವಿರುದ್ಧ ಮೂರನೇ ಟಿ-20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಕೇನ್ ಅವರ ಎಡ ಭುಜಕ್ಕೆ ಗಾಯವಾಗಿತ್ತು. ನಂತರ, ಎರಡು ಪಂದ್ಯಗಳಲ್ಲಿ ಅವರು ಆಡಿರಲಿಲ್ಲ. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.“ಕೇನ್ ವಿಲಿಯಮ್ಸನ್ ಅವರಂಥ ಆಟಗಾರರನ್ನು ಕಳೆದುಕೊಂಡಾಗ ನಿಜಕ್ಕೂ ಬೇಸರವಾಗುತ್ತದೆ. ಅವರ ಭುಜಕ್ಕೆ ಗಂಭಿರ ಗಾಯವಾಗಿಲ್ಲ ಎಂಬುದನ್ನು ನಾನು ನಂಬಿದ್ದೇನೆ. ಅವರು ಆದಷ್ಟು ಬೇಗ ತಂಡಕ್ಕೆ ಮರಳಲಿದ್ದಾರೆ ಎಂಬ ನಂಬಿಕೆ ಇದೆ,’’ ಎಂದು ವರದಿಗಾರರಿಗೆ ಲಥಾಮ್ ಹೇಳಿದರು.“ ತಂಡದಲ್ಲಿ ಸದ್ಯ ಯಾರೆಲ್ಲ ಆಟಗಾರರು ಇದ್ದಾರೆ ಎಂಬುದಕ್ಕೆ ಅನುಗುಣವಾಗಿ ಯೋಜನೆ ಸಿದ್ಧವಾಗಿದೆ. ಒಳ್ಳೆಯ ಕ್ರಿಕೆಟ್ ಆಡುತ್ತೇವೆ. ಈ ಹಿಂದೆಯೂ ಆಡಿದ್ದೇವೆ,’’ ಎಂದು ತಿಳಿಸಿದರು“ಭಾರತದ ವಿರುದ್ಧ ಟಿ-20 ಕ್ರಿಕೆಟ್ ನಲ್ಲಿ ನಿರಾಸೆ ಅನುಭವಿಸಿದ್ದೇವೆ. ಆದರೆ, ಏಕದಿನ ತಂಡದ ಭಾಗ ವಿಭಿನ್ನವಾಗಿದೆ. ಈ ಹಿಂದೆ ನಾವು ಏಕದಿನ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದೇವೆ. ಅದೇ ಯೋಜನೆಯನ್ನು ಹೋಗಲಿದ್ದೇವೆ.’’ ಎಂದು ತಿಳಿಸಿದ್ದಾರೆ.ಗಾಯದಿಂದ ರೋಹಿತ್ ಶರ್ಮಾ ಅವರು ಏಕದಿನ ಹಾಗೂ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಅವರ ಬದಲು ಮಯಾಂಕ್ ಅಗರ್ವಾಲ್ ಆಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ,”ರೋಹಿತ್ ಶರ್ಮಾ ಭಾರತದ ಅದ್ಭುತ ಆಟಗಾರ. ಅವರು ಭಾರತ ತಂಡಕ್ಕೆ ಅತ್ಯಂತ ಮೌಲ್ಯಯುತ ಆಟಗಾರ. ಟೀಮ್ ಇಂಡಿಯಾವನ್ನು ಸುಲಭವಾಗಿ ಪರಿಗಣಿಸುವುದಿಲ್ಲ. ರೋಹಿತ್ ಬದಲು ಆಡುವ ಆಟಗಾರನ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ,’’ ಎಂದು ಲಥಾಮ್ ತಿಳಿಸಿದ್ದಾರೆ.