ನಾನು ಈ ಲೇಖನ ಬರೆಯುವುದಕ್ಕೂ ಮುನ್ನ ನೂರಾರು ಬಾರಿ ಆಲೋಚನೆ ಮಾಡಿದೆ. ನಿಜಕ್ಕೂ ನಾವು ಪೊಲೀಸರನ್ನು ಕಂಡು ಹೆದರುವುದೇಕೆ? ಎಂದು ಪ್ರಶ್ನೆ ಮಾಡಿಕೊಂಡೆ. ಒಂದು ಕಡೆ ಹೆದರಿಕೊಂಡರೆ ಮತ್ತೊಂದು ಕಡೆ ಅವರನ್ನು ಕಂಡಾಗ ಮೂಗು ಮುರಿಯುತ್ತೇವೆ. ಕೆಲವು ಜನ ಪೊಲೀಸರು ಮಾಡುವ ಕಾರ್ಯವನ್ನು ಕಂಡು ಅಸಹ್ಯ ಪಟ್ಟುಕೊಳ್ಳುತ್ತೇವೆ. ಎಲ್ಲೋ ಕೆಲವರು ಮಾಡುವ ತಪ್ಪುಗಳನ್ನು ಇಡೀ ಇಲಾಖೆಯನ್ನೇ ಕಡೆಗಣನೆ ಮಾಡುತ್ತೇವೆ. ಇದನ್ನು ಕಂಡಾಗ ನನಗೇ ಒಂದು ವಿಚಿತ್ರ ಅನುಭವವಾಯಿತು. ಹೀಗೆ ಏನೇನೋ ಆಲೋಚನೆ ಮಾಡುತ್ತಿರಬೇಕಾದರೆ ನನಗೆ ಪೊಲೀಸ್ ಹುತಾತ್ಮ ದಿನದ ನೆನಪಾಯಿತು. ಏನಿದು ಪೊಲೀಸ್ ಹುತಾತ್ಮ ದಿನ ಎಂದಿರಾ? ಕರ್ತವ್ಯ ನಿರತ ಪೊಲೀಸರು ಕಾನೂನು ಕಾಯುತ್ತಲೇ ತಮ್ಮ ಪ್ರಾಣವನ್ನು ನಾಡಿಗಾಗಿ ನೀಡಿದ್ದನ್ನು ಸ್ಮರಿಸಿಕೊಳ್ಳುವ ದಿನ. ಅವರ ತ್ಯಾಗವನ್ನು ಸ್ಮರಿಸಿಕೊಂಡು ನಮ್ಮ ನಾಡಿಗಾಗಿ ತಮ್ಮ ಪ್ರಾಣವನ್ನು ಕೊಟ್ಟ ಅವರಿಗೆ ಗೌರವ ಸಲ್ಲಿಸುವ ದಿನ. ವಿಚಿತ್ರ ಎಂದರೆ ಸಮಾಜದ ಹೆಸರಿನಲ್ಲಿ ಸರ್ವರ ಕಾರ್ಯವನ್ನು ಸ್ಮರಿಸಿ ಅವರ ಜಯಂತಿಗಳನ್ನು ನಾವು ಆಚರಿಸುತ್ತೇವೆ. ಆದರೆ ಪೊಲೀಸ್ ಹುತಾತ್ಮ ದಿನವನ್ನು ಕೇವಲ ಕರ್ತವ್ಯನಿರತ ಪೊಲೀಸರು ಮಾತ್ರ ಆಚರಿಸುತ್ತಾರೆ. ಇದನ್ನು ಕಂಡು ನಿಜಕ್ಕೂ ಸಂಕಟವಾದಂತಾಯಿತು. ಕಾರಣ ನಮಗಾಗಿ ಪ್ರಾಣತೆತ್ತ ಆ ಪೊಲೀಸಪ್ಪನನ್ನು ನಂಬಿಕೊಂಡು ಒಂದು ಕುಟುಂಬವೇ ಬದುಕಿತ್ತು. ಇಂದು ಆತನಿಲ್ಲದ ಕುಟಂಬ ಏನಾಗಿರಬಹುದು? ಗಂಡನನ್ನು ಕಳೆದುಕೊಂಡ ಆತನ ಹೆಂಡತಿ ಏನೆಲ್ಲ ಕಷ್ಟ ಅನುಭವಿಸಿರಬೇಕು? ಅಪ್ಪನಿಲ್ಲದ ಮಗ ಅದೆಷ್ಟು ಸಂಕಟ ಪಟ್ಟಿರಬೇಕು? ಮಗನನ್ನು ಕಳೆದುಕೊಂಡ ಹೆತ್ತವರು ಅದೆಷ್ಟು ನಿಟ್ಟುಸಿರುವ ಹಾಕಿರಬಹುದು? ಇಡೀ ಕುಟುಂಬವೇ ಅವರನ್ನು ನೆನೆದು ಅದೆಷ್ಟು ಕಣ್ಣೀರಾಗಿರಬೇಕು? ಹೀಗೆ ಹತ್ತು ಹಲವು ಪ್ರಶ್ನೆಗಳು ನನ್ನೆದುರು ಹಾದು ಹೋದವು. ಇಷ್ಟೆಲ್ಲ ಇದ್ದರು ನಾವು ಪೊಲೀಸರನ್ನು ಕಂಡು ಭಯ ಪಡುವುದೇಕೆ? ಅವರನ್ನು ಕಂಡಾಗ ಮೂಗು ಮುರಿಯುವುದೇಕೆ? ಎನ್ನುವ ಪ್ರಶ್ನೆ ಎದುರಿಟ್ಟುಕೊಂಡಾಗ ಈ ಲೇಖನ ಬರೆಯಬೇಕೆನಿಸಿತು. ಅದಕ್ಕಾಗಿ ಬರೆಯುತ್ತಿದ್ದೇನೆ.
ನಿಮಗೆ ನೆನಪಿದೆಯಾ ನಾವು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿದ್ದಾಗ ಎಲ್ಲೋ ಸಂದಿಗೊಂದಿಯಲ್ಲಿ ಚಿಣ್ಣಿಕೋಲು, ಗೋಲಿ, ಬುಗುರಿ ಆಡುತ್ತಿರುವ ಸಮಯದಲ್ಲಿ ಅದೇ ದಾರಿಯಲ್ಲಿ ನಮಗೆ ಪಾಠ ಮಾಡುವ ಮೇಸ್ಟ್ರು ಹಾದು ಹೋಗುತ್ತಿರುವುದನ್ನು ಕಂಡಾಗ ಓಡಿ ಹೋಗಿ ಅವಿತುಕೊಳ್ಳುತ್ತಿದ್ದೆವು. ಮೇಸ್ಟ್ರ ಕೈಯಲ್ಲಿ ಭಾರವಾದ ವಸ್ತು ಇದ್ದರೆ ಅದನ್ನು ಪಡೆದು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಅವರ ಮನೆ ತಲುಪಿಸಿ ಬರುತ್ತಿದ್ದೇವು. ಅದು ಅವರ ಮೇಲಿನ ಭಯಕ್ಕೋ ಅಥವಾ ಅವರ ಮೇಲಿನ ಭಕ್ತಿಗೊ ಗೊತ್ತಿರಲಿಲ್ಲ. ಆದರೆ ನಮ್ಮ ಕಾರ್ಯವನ್ನು ನಾವು ಅಚ್ಚುಕಟ್ಟಾಗಿ ಮಾಡುತ್ತಿದ್ದೆವು. ಮುಂದೆ ಅವರ ಕೈಯಲ್ಲಿ ಕಲಿತು ಪಾಸಾಗಿ, ನೌಕರಿ ಮಾಡುವಾಗಲು ಸಹ ಕಲಿಸಿದ ಗುರುಗಳು ಬಂದಾಕ್ಷಣ ಕೈಕಟ್ಟಿ ನಿಲ್ಲುವಾಗ ನನ್ನ ಅರಿವಿಗೆ ಬಂದಿದ್ದು ನಾವು ಗುರುಗಳ ಮೇಲಿನ ಭಯದಿಂದ ಹಾಗೆ ಮಾಡುತ್ತಿರಲಿಲ್ಲ ಬದಲಿಗೆ ಅವರನ್ನು ಕಂಡರೆ ನಮಗೇ ಅರಿವಿಲ್ಲದಂತೆ ಗೌರವ ಮೂಡುತ್ತಿತ್ತು. ಆ ಗೌರವವೇ ನಮ್ಮನ್ನು ಆ ರೀತಿ ನಡೆದುಕೊಳ್ಳುವಂತೆ ಮಾಡುತ್ತಿತ್ತು. ಆವಾಗ ನನಗೆ ಒಂದು ಸತ್ಯದ ಅರಿವಾಗಿದ್ದು ಎಲ್ಲಿ ಭಯವಿರುತ್ತದೆಯೋ ಅಲ್ಲಿ ಗೌರವ ಇರುವುದಿಲ್ಲ. ಯಾರನ್ನು ಕಂಡಾಗ ಗೌರವ ಮೂಡುತ್ತದೆಯೇ ಅವರನ್ನು ಕಂಡಾಗ ಭಯವಾಗುವುದಿಲ್ಲ. ಇದನ್ನೇ ಸಂಸ್ಕಾರ ಎಂದು ಕರೆಯುವರು. ನಮ್ಮನ್ನು ಕಾಯುವ ಪೊಲೀಸರ ವಿಷಯದಲ್ಲೂ ನಾವು ಮಾಡಿಕೊಂಡಿರುವ ಎಡವಟ್ಟು ಇದೇನೆ. ಅವರನ್ನು ಕಂಡಾಗ ಗೌರವ ನೀಡಿ ಅವರ ಆಜ್ಞೆಯನ್ನು ಪಾಲಿಸಿದ್ದರೆ ಭಹುಶಃ ಅವರು ನಮ್ಮ ಮೇಲೆ ಲಾಠೀ ಬೀಸುವ ಪ್ರಮೇಯವೇ ಬರುತ್ತಿರಲಿಲ್ಲ. ಅದನ್ನು ಬಿಟ್ಟು ಬರೀ ಅವರು ಮಾಡುವ ಕಾರ್ಯವನ್ನು ದೂಷಿಸುವುದರಲ್ಲಿ ಸಮಯವನ್ನು ಕಳೆದು ಬಿಟ್ಟಾಗ ಸಮಸ್ಯೆಗಳ ಪರಿಹಾರಕ್ಕೆ ಲಾಠೀಯ ಹೊರತು ಬೇರೆ ಅಸ್ತ್ರವೇ ಇಲ್ಲದಂತ ಸ್ಥಿತಿ ನಿರ್ಮಾಣ ಆಗೇ ಆಗುತ್ತದೆ.
ಈ ಸಂದರ್ಭದಲ್ಲಿ ನನಗೆ ಐ.ಪಿ.ಎಸ್ ಅಣ್ಣಾಮಲೈ ನೆನಪಾಗುತ್ತಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ರಾಜಿನಾಮೆ ನೀಡುವುದನ್ನು ಇಡೀ ರಾಜ್ಯದ ಜನ ವಿರೋಧಿಸುತ್ತಾರೆ. ನೀವು ಈ ಕೆಲಸದಲ್ಲಿ ಮುಂದುವರೆಯಬೇಕು. ಸದಾ ನಮ್ಮ ರಕ್ಷಣೆಗೆ ನೀವೇ ಬೇಕು ಎನ್ನುತ್ತಾರೆ ಎಂದರೆ ಅರ್ಥ ಮಾಡಿಕೊಳ್ಳಿ ಆ ವ್ಯಕ್ತಿಯ ವ್ಯಕ್ತಿತ್ವ ಎಂಥದು ಎಂದು. ಜನ ಸಾಮಾನ್ಯರ ಜೊತೆ ಅವರು ನಡೆದುಕೊಳ್ಳುತ್ತಿದ್ದ ರೀತಿಯನ್ನು ಕಂಡಾಗ ಎಂಥವರಿಗಾದರೂ ಅವರ ಮೇಲೆ ಗೌರವ ಉಂಟಾಗಲೇ ಬೇಕು. ಬರೀ ಅವರ ಮೇಲೆ ಮಾತ್ರವಲ್ಲ ಇಡೀ ಪೊಲೀಸ್ ಇಲಾಖೆಯ ಮೇಲೆ ಗೌರವ ಉಂಟಾಗುತ್ತಿತ್ತು. ಅನವಶ್ಯಕ ಯಾರ ಮೇಲೂ ಲಾಠೀ ಬೀಸುವುದಕ್ಕೆ ಅವರು ಬಿಡುತ್ತಿರಲಿಲ್ಲ. ಯಾವೊಬ್ಬ ಅಧಿಕಾರಿಯೂ ಸಹ ಹಾಗೆ ಮಾಡು ಎಂದು ಹೇಳುವುದಿಲ್ಲ. ಎಲ್ಲವನ್ನು ಶಾಂತವಾಗಿಯೇ ಬಗೆಹರಿಸಬೇಕು ಎನ್ನುವ ಉದ್ದೇಶದಿಂದಲೇ ಕಾರ್ಯ ಮಾಡುತ್ತಿರುತ್ತಾರೆ. ಆದರೆ ನಾವು ಮಾಡುವ ಎಡವಟ್ಟುಗಳು, ಆಡುವ ಮಂಗನ ಆಟಗಳು ಅವರನ್ನು ಅನಿವಾರ್ಯವಾಗಿ ಲಾಠೀ ಬೀಸುವಂತ ಸ್ಥಿತಿಗೆ ತಂದು ತಲುಪಿಸುತ್ತವೆ. ಕೆಲವರಂತೂ ತಾವು ಮಾಡುವ ತಪ್ಪುಗಳಿಗಾಗಿ ಪೊಲೀಸರಿಂದ ಒದೆ ತಿಂದು ಮಂಗ ಬೆಣ್ಣೆ ತಿಂದು ಮೇಕೆ ಬಾಯಿಗೆ ಒರೆಸಿದಂತೆ ತಾವು ಮಾಡಿದ ತಪ್ಪನ್ನು ಮುಚ್ಚಿಟ್ಟು ಪೊಲೀಸರ ಮೇಲೆ ಗೂಬೆ ಕೂರಿಸುತ್ತಾರೆ. ಮಾತ್ರವಲ್ಲ ಅವರನ್ನು ಸರ್ಕಾರಿ ಪ್ರಾಯೋಜಕತ್ವದ ಗೂಂಡಾಗಳು ಎನ್ನುವ ಮಟ್ಟದಲ್ಲಿ ಬಿಂಬಿಸುತ್ತಾರೆ. ಇದ್ಯಾವ ನ್ಯಾಯ ಹೇಳಿ? ನಾವು ನಮ್ಮ ಮನೆಯಲ್ಲಿ ನೆಮ್ಮದಿಯಾಗಿರುವುದಕ್ಕೆ ಕಾರಣರಾದ ಆರಕ್ಷಕರನ್ನು ವಿಲನ್ ರೀತಿಯಲ್ಲಿ ಬಿಂಬಿಸುವುದು ನಿಜಕ್ಕೂ ಘೋರ ದುರಂತವೇ ಸರಿ. ಈ ಸಂದರ್ಭದಲ್ಲಿ ನಾವು ಒಂದು ಮಾತು ಅರ್ಥ ಮಾಡಿಕೊಳ್ಳಬೇಕಾಗಿದೆ. ಪೊಲೀಸರೆಂದರೆ ಅವರು ನಮ್ಮ ಶತ್ರುವಲ್ಲ, ನಮ್ಮ ಮೇಲೆ ದಬ್ಬಾಳಿಕೆ ಮಾಡುವುದಕ್ಕಾಗಿ ಇರುವ ಸರ್ಕಾರದ ಗುಂಪಲ್ಲ, ಸದಾ ಲಾಠೀ ಬೀಸುವ ಕಾಯಕದವರಲ್ಲ. ಪೊಲೀಸರೆಂದರೆ ನಮ್ಮ ಸೇವೆಗಾಗಿ ಹಾಗೂ ನಮ್ಮ ರಕ್ಷಣೆಗಾಗಿ ಇರುವ ರೀಯಲ್ ಹೀರೋಗಳು. ಕೆಲವೊಬ್ಬರು ಅವರನ್ನು ಖಳನಾಯಕರಂತೆ ಬಿಂಬಿಸಿದರೆ ಮತ್ತೆ ಕೆಲವರು ಅವರನ್ನು ಇನ್ನೋಂದು ಮುಖದಲ್ಲಿ ಪರಚಯಿಸುತ್ತಾರೆ. ಆದರೆ ಅವರ ನಿಜವಾದ ಮುಖವನ್ನು ಮರೆ ಮಾಚುತ್ತಾರೆ. ಮನೆ, ಮಡದಿ, ಮಕ್ಕಳು, ಸಂಸಾರ ಎಲ್ಲವನ್ನು ಬಿಟ್ಟು ಸದಾ ನಮ್ಮ ಸೇವೆಯಲ್ಲಿ ತೊಡಗುವ ಕಾಕಿಪಡೆಗೆ ನಾವು ಎಷ್ಟು ಕತಜ್ಞರಾಗಿದ್ದರು ಕಡಿಮೆಯೇ. ಅದನ್ನು ಮೊದಲು ನಾವು ಮನಗಾಣಬೇಕಿದೆ.
ನನ್ನ ಒಬ್ಬ ಗೆಳೆಯ ಸರ್ಕಲ್ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದು ಅವರೊಂದಿಗೆ ಮಾತನಾಡುವಾಗ ಹೇಳಿದ ಮಾತು ನನಗೆ ನೆನಪಿಗೆ ಬರುತ್ತಿದೆ. ನಮ್ಮನ್ನು ಕಂಡರೆ ಹೆದರುವ ಬದಲು ನಮ್ಮ ಮಾತಿಗೆ ಇವರು ಗೌರವ ನೀಡಿದರೆ ನಮಗೆ ಈ ಲಾಠೀ ಬೇಕಾಗುವುದೇ ಇಲ್ಲ. ನಿಜ ಹೇಳಬೇಕೆಂದರೆ ಕಳ್ಳ ಕದಿಮರ ಹುಟ್ಟಡಗಿಸಲು ನೀಡಿದ ಲಾಠೀಯನ್ನು ಜನಸಾಮಾನ್ಯರ ಮೇಲೆ ಬಳಸುವಾಗ ನಿಜಕ್ಕೂ ತುಂಬಾ ನೋವಾಗುತ್ತದೆ. ಆದರೆ ಕರ್ತವ್ಯದ ಕರೆಯನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ಲಾಠೀ ರುಚಿ ತೋರಿಸುವುದು ಅನಿವಾರ್ಯವಾಗುತ್ತದೆ. ನಮ್ಮ ಜನ ಅರ್ಥ ಮಾಡಿಕೊಂಡರೆ ನಾವುಗಳು ಯಾರಿಗೂ ನೋವು ನೀಡುವುದಿಲ್ಲ. ಅವರಿಗೆ ನೊವು ನೀಡಿದ ನಾವು ಖುಷಿಯಾಗಿ ಇರುತ್ತೇವೆ ಎಂದು ಕೊಂಡರೆ ಅದು ಮೂರ್ಖತನ. ನಮಗೂ ಮನಸ್ಸಿದೆ, ನಮಗೂ ಮನುಷ್ಯತ್ವ ಇದೆ, ನಮಗೂ ಭಾವನೆಗಳಿವೆ, ನಮಗೂ ಬೇರೊಬ್ಬರ ಸಂಕಂಟ ಅರ್ಥವಾಗುತ್ತದೆ. ಆದರೆ ನಮ್ಮನ್ನು ಅನಿವಾರ್ಯ ಸ್ಥಿತಿಗೆ ತಂದು ನಿಲ್ಲಿಸುವ ಸಾರ್ವಜನಿಕರು ನಮ್ಮನ್ನು ಒಂದು ಬಾರಿ ಅರ್ಥ ಮಾಡಿಕೊಳ್ಳಲಿ ಅಲ್ಲಿಗೆ ಎಲ್ಲವೂ ಸೂಸುತ್ರವಾಗಿ ನಡೆದು ಹೋಗುತ್ತದೆ. ಈ ಮಾತುಗಳನ್ನು ಕೇಳುತ್ತಿದ್ದರೆ ಧೂಳನ್ನು ನಮ್ಮ ಮುಖದ ಮೆಲೆ ಇಟ್ಟುಕೊಂಡು ಕನ್ನಡಿ ಒರೆಸಿ ಒರೆಸಿ ಕಂಗಾಲಾಗುತ್ತಿದ್ದೇವೆ ಎಂದೆನಿಸುವುದಿಲ್ಲವೆ?.
ಕೋರೋನಾ ಕಾದಾಟದಲ್ಲಿ ಸರ್ಕಾರ ಲಾಕ್‌ಡೌನ್ ಆದೇಶವನ್ನು ರಾಜ್ಯಾಧ್ಯಂತ ಘೋಷಿಸಿತು. ಕರ್ಫ್ಯೂ ವಿಧಿಸಿ ಆದೇಶಿತು. ಯಾರೂ ಮನೆಯಿಂದ ಹೊರಬರಬಾರದು ಎಂದು ಆಜ್ಞೆ ವಿಧಿಸಿತು. ಆದರೂ ನಾವು ಅದನ್ನು ಪಾಲಿಸದೇ ಉದ್ಧಟತನ ಪ್ರದರ್ಶಿಸಿದ್ದು ಯಾರ ತಪ್ಪು? ಅಗತ್ಯ ಸೇವೆಗಳಿಗಾಗಿ ಹೊರ ಬರಬಹುದು ಎಂದು ಹೇಳಿದ್ದಾರೆಂದುಕೊಂಡು ಅನಗತ್ಯ ವಸ್ತುಗಳನ್ನು ಖರೀದಿಸಲು ಹೊರ ಬರುವುದು ಯಾತಕ್ಕಾಗಿ ಹೊರಬಂದೆ ಎಂದು ಕೇಳಿದ ಆರಕ್ಷಕರೊಂದಿಗೆ ವಾದಕ್ಕೀಳಿಯುವುದು, ಅವರು ಲಾಠೀ ರುಚಿ ತೋರಿಸಿದರೆಂದು ಅವರ ಮೇಲೆ ಗೂಬೆ ಕೂರಿಸುವುದು ಹಾಗೂ ಅದನ್ನೆ ದೊಡ್ಡದು ಮಾಡಿ ಪೊಲೀಸರೆಂದರೆ ಸರ್ಕಾರಿ ಗೂಂಡಾಗಳು ಎಂದು ಬಿಂಬಿಸುವುದು. ಇದು ಯಾವ ನ್ಯಾಯ ಸ್ವಾಮಿ? ನಾವೆಲ್ಲ ಕರೋನಾದಿಂದ ರಕ್ಷಿಸಿಕೊಳ್ಳಲು ಮನೆಯಲ್ಲಿ ಮಡದಿ ಮಕ್ಕಳೊಂದಿಗೆ ಆರಾಮಾಗಿ ಕುಳಿತುಕೊಳ್ಳಬೇಕು, ಆರಕ್ಷಕರು ಮಾತ್ರ ಎಲ್ಲವನ್ನು ತೊರೆದು ನಮ್ಮನ್ನು ಕಾಯುವುದಕ್ಕೆ ಬೀದಿ ಬೀದಿ ಸುತ್ತಬೇಕು. ನಮ್ಮ ತಪ್ಪನ್ನು ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಕೈಯಿಂದ ಅನ್ನಿಸಿಕೊಳ್ಳಬೇಕು ಆರೋಪಿಸಿಕೊಳ್ಳಬೇಕು. ತಮ್ಮ ಕರ್ತವ್ಯ ಪಾಲನೆ ಮಾಡಿದ್ದಕ್ಕೆ ನಮ್ಮಿಂದ ಬೈಸಿಕೊಳ್ಳಬೇಕು. ಇದೆಂತ ಕರ್ಮ ಅವರಿಗೆ. ಅವರು ಸಂಬಳಕ್ಕಾಗಿ ಅವರ ಕರ್ತವ್ಯ ಮಾಡುತ್ತಾರೆ ಎಂದು ಹೇಳುತ್ತೀರಲ್ಲ. ಸಂಬಳ ಕೊಡುವ ದೇಶ, ಜೀವನ ಕೊಟ್ಟ ನಾಡು, ಬದುಕು ನೀಡಿದ ಭೂಮಿ ಕಷ್ಟದಲ್ಲಿದ್ದಾಗ ಅಗತ್ಯವಾಗಿ ನೆರವಾಗಬೇಕಾಗಿರುವುದು ನಮ್ಮ ಕರ್ತವ್ಯ ಅಲ್ಲವೇ? ಅದನ್ನು ಮಾತ್ರ ಹೇಳುವುದಿಲ್ಲ. ಬಂದ್ ಆಗುತ್ತದೆ ಎಂದು ಗೊತ್ತಾಗುತ್ತಲೇ ಅಗತ್ಯ ವಸ್ತುಗಳ ಬೆಲೆ ಏರಿಸಿ ಬೇಕಾಬಿಟ್ಟಿ ಮಾರಾಟ ಮಾಡುವುದು, ಅದನ್ನು ಕೊಳ್ಳುವುದಕ್ಕೆಂದು ಜಾತ್ರೆಯಂತೆ ಜನ ಸೇರುವುದು, ಅದನ್ನು ಪ್ರಶ್ನೆ ಮಾಡಿದಕ್ಕೆ ತಿರುಗಿ ಉತ್ತರ ನೀಡುವುದು ಇದೆಲ್ಲವನ್ನು ಮಾಡಿದ್ದು ಕಲಿಯದೇ ಇರುವ ಅನಕ್ಷರಸ್ಥರಲ್ಲ ಬದಲಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವ ಮಹಾಜ್ಞಾನವಂತರು. ಪೊಲೀಸರೆಂದರೆ ಅಸಡ್ಡೆ ಅವರ ಕಾರ್ಯ ವೈಖರಿ ಕಂಡು ಅಸಹ್ಯ ಪಟ್ಟುಕೊಳ್ಳುವ ಪ್ರಜ್ಞಾವಂತರೆ ಒಂದು ಬಾರಿ ಅರ್ಥ ಮಾಡಿಕೊಳ್ಳಿ ಅವರು ಮಾಡುತ್ತಿರುವುದು ನಮಗಾಗಿಯೇ ಹೊರತು ತಮ್ಮ ವೈಯಕ್ತಿಕ ಹಿತಕ್ಕಾಗಿ ಅಲ್ಲ. ಅವರಿಗೂ ಕೊರೊನಾ ಹರಡುವ ಭೀತಿ ಇದ್ದರೂ ಕೂಡ ಬಿಸಿಲನ್ನು ಲೆಕ್ಕಿಸದೇ ನಡು ರಸ್ತೆಯಲ್ಲಿ ನಮಗಾಗಿ ಪರದಾಡುತ್ತಿದ್ದರೂ ಕೂಡ ನಾವು ಅದನ್ನು ಲೆಕ್ಕಿಸದೇ ಅವರ ವಿರುದ್ಧ ಮಾತನಾಡಿದ್ದು ನಿಜಕ್ಕೂ ನಮ್ಮ ಬಗ್ಗೆಯೇ ನಾವು ಅಸಹ್ಯ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರ ಹೊರಡಿಸಿದ ಆದೇಶ ನಮಗಳಿಗೆ ಲೆಕ್ಕಕ್ಕಿಲ್ಲ ಅದನ್ನು ಜಾರಿ ಮಾಡಿದಾಗ ಜನರು ಅನುಸರಿಸಲಿ ಎಂದು ಪೊಲೀಸರು ಮುಮದೆ ನಿಂತರೆ ಅದು ಘೋರ ಅಪರಾಧದಂತೆ ಬಿಭಿಸುವ ನಮಗಳಿಗೆ ಏನು ಹೇಳಬೇಕು ಹೇಳಿ? ನಮಗಾಗಿ ದುಡಿದವರ ಸ್ಥಿತಿ ಹೀಗೆ ಎನ್ನುವುದನ್ನು ಕಂಡರೆ ನಿಜಕ್ಕೂ ಬೇಸರವಾಗುತ್ತಿದೆ. ಮುಂದಿನ ನೆಮ್ಮದಿಯ ಬದುಕಿಗಾಗಿ ಅವರು ಮಾಡುವ ಕಾರ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು. ಇಂದು ಬೀಳುವ ಹೊಡೆತ ಮುಂದೆ ಸರಿ ಬದುಕಿಗೆ ದಾರಿಯಾಗುವುದಾದರೆ ಪೊಲೀಸರು ಮಾಡುತ್ತಿರುವ ಕಾರ್ಯಕ್ಕೆ, ಬೀಸುತ್ತಿರುವ ಲಾಠೀಗೆ ನಾವು ಜೈ ಎನ್ನಲೇ ಬೇಕಾಗಿದೆ.
ದೇಶದ ಎಲ್ಲ ಇಲಾಖೆಗಳು ಬೇಡಿಕೆ ಈಡೇರಿಕೆಗಾಗಿ ಕಾರ್ಯವನ್ನು ಬಿಟ್ಟು ರಸ್ತೆಗಳಿದು ಪ್ರತಿಭಟಿಸಿದ್ದಾರೆ. ತಮ್ಮ ತಮ್ಮ ಕಛೇರಿಗಳಿಗೆ ಬೀಗ ಜಡಿದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ. ಆದರೆ ಒಂದೇ ಒಂದು ದಿನವೂ ಹರತಾಳ, ಪ್ರತಿಭಟನೆಯನ್ನು ಮಾಡದ ಭಾರತದ ಎರಡು ಇಲಾಖೆ ಎಂದರೆ ಅದು ಸೈನಿಕರು ಹಾಗೂ ಆರಕ್ಷಕರು. ಹಗಲು ರಾತ್ರಿ ಎನ್ನದೇ ನಮಗಾಗಿ ದುಡಿಯುವ ಅವರ ಮೇಲೆ ನಮಗೆ ಗೌರವ ಇದ್ದರೆ ಅವರ ಮಾತನ್ನು ನಾವು ಕೇಳುತ್ತಿದ್ದೆವು. ಆದರೆ ನಮಗೆ ಅವರ ಮೇಲೆ ಗೌರವ ಇಲ್ಲದೆ ಹೋದಾಗ ಅವರು ಭಯ ಹುಟ್ಟಿಸುವುದು ಅನಿವಾರ್ಯವಾಗಿದೆ. ಒಂದು ಬಾರಿ ಚೀನಾವನ್ನು ಕಣ್ಣಾರೆ ನೋಡಿ. ಅದು ಕಮ್ಯೂನಿಸ್ಟ್ ರಾಷ್ಟ್ರ ಅದರ ಆದೇಶವನ್ನು ಧಿಕ್ಕರಿಸಿದರೆ ಪೊಲೀಸರು ಹೆಡೆಮುರಿ ಕಟ್ಟುತ್ತಾರೆ. ಆದರೆ ನಮ್ಮಲ್ಲಿನ ಪೊಲೀಸರಿಗೆ ಮಾನವೀಯತೆ ಇದೆ ಆ ನಿಟ್ಟಿನಲ್ಲಿ ನಮ್ಮ ಮೇಲೆ ಒಮ್ಮೆಗೆ ಲಾಠಿ ಚಾರ್ಜ ಮಾಡುವುದಕ್ಕೆ ಮುಂದಾಗಿಲ್ಲ. ತಿಳಿಸಿ ಹೇಳಿದರು ಕೇಳದೇ ಹೋದಾಗ ಥಳಿಸಿ ಹೇಳುವುದಕ್ಕೆ ಮುಂದಾಗಿದ್ದರೆ. ಅವರೇನು ನಮ್ಮ ಮನೆಗೆ ನುಗ್ಗಿ ಹೊಡೆಯುತ್ತಿದ್ದಾರಾ? ಇಲ್ಲ ತಾನೆ? ಸುಮ್ಮನೆ ಇರುವುದನ್ನು ಬಿಟ್ಟು ಸರ್ಕಾರದ ಆದೇಶವನ್ನು ಧಿಕ್ಕರಿಸಿ ಕಾಣುನು ಸೂವ್ಯವಸ್ಥೆಯನ್ನು ಹಾಳು ಮಾಡಲು ಬೀದಿಗಿಳಿದಾಗ ಮಾತ್ರ ಲಾಠೀ ರುಚಿ ತೋರಿಸಿದ್ದಾರೆ. ಇದನ್ನು ಇಂದು ನಾವು ಒಪ್ಪಿಕೊಳ್ಳಲೇಬೇಕು. ಇಂದು ಸ್ವಯಂಪ್ರೇರಿತವಾಗಿ ನಾವೇ ಪಾಲಿಸಿದ್ದರೆ ಪೊಲೀಸರ ಮೇಲೆ ಆರೋಪ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
ಯಾವುದಾದರೂ ಘಟನೆ ನಡೆದರೆ ಅದನ್ನು ಪೊಲೀಸರ ತಲೆಗೆ ಕಟ್ಟುತ್ತೇವೆ. ಪ್ರತಿಭಟನೆಯ ಸಂದರ್ಭದಲ್ಲಿ ಲಾಠೀಚಾರ್ಜ ಮಾಡಿದರೆ ಪೊಲೀಸರು ಮಾನವೀಯತೆಯನ್ನು ಮರೆತರು ಎಂದು ಅಬ್ಬರಿಸಿ ಬೊಬ್ಬಿಡುತ್ತೇವೆ. ಆ ಸಂದರ್ಭದಲ್ಲಿ ಪೊಲೀಸರು ಲಾಠೀ ಬೀಸದೇ ಹೋದರೆ ಇಡೀ ವಾತಾವರಣವೇ ಹಾಳಾಗುತ್ತದೆ. ಜನ ಜೀವನವೇ ಅಸ್ಥವ್ಯಸ್ಥವಾಗುತ್ತದೆ. ಉದಾಹರಣೆಗೆ ದೆಹಲಿಯಲ್ಲಿ, ಹುಬ್ಬಳ್ಳಿಯಲ್ಲಿ ನಡೆದ ಘಟನೆಯಲ್ಲಿ ಪೊಲೀಸರು ಲಾಠೀಚಾರ್ಜ ಮಾಡಿದ್ದಕ್ಕೆ ಇಡೀ ದೇಶಾದ್ಯಂತ ಚರ್ಚೆ ನಡೆಯಿತು. ಆದರೆ ಆ ಸಂದರ್ಭದಲ್ಲಿ ಪೊಲೀಸರು ಕಣ್ಣು ಮುಚ್ಚಿ ಕುಳಿತುಕೊಂಡಿದ್ದರೆ, ಕೈ ಕಟ್ಟಿ ನಿಂತುಕೊಂಡಿದ್ದರೆ ಅಲ್ಲಿ ನಡೆಯುತ್ತಿದ್ದ ಕಥೆಯೇ ಬೇರೆಯಾಗಿರುತ್ತಿತ್ತು. ಈ ನಿಟ್ಟಿನಲ್ಲಿ ವಿಚಾರ ಮಾಡಿದರೆ ಪೊಲೀಸರ ಕರ್ತವ್ಯವನ್ನು ಮಾಡಿದ ಲಾಠೀಚಾರ್ಜನ್ನು ಪ್ರಶ್ನೆಸುವ ಪ್ರಮೇಯವೇ ಬರುವುದಿಲ್ಲ. ಎಲ್ಲಾದರೂ ಕೊಲೆ ನಡೆದರೆ, ಅತ್ಯಾಚಾರ ನಡೆದರೆ, ದರೋಡೆಯಾದರೆ ನೇರವಾಗಿ ಬೆರಳು ಮಾಡುವುದೇ ಪೊಲೀಸ್ ಇಲಾಖೆಯ ಮೇಲೆ. ಪೊಲೀಸರು ಕರ್ತವ್ಯ ನೆರ್ವಹಿಸುವಲ್ಲಿ ವಿಫಲರಾಗಿದ್ದ ಕಾರಣ ಇದೆಲ್ಲ ನಡೆಯಿತು ಎಂದು. ಒಂದು ಮಾತು ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕೊಲೆಗಾರ ಕೊಲೆ ಮಾಡುವುದಕ್ಕೆ ಮೊದಲು ಕೊಲೆ ಮಾಡಲು ಹೊರಟಿದ್ದೇನೆ ಎಂದು ಹೇಳಿ ಹೋಗುವುದಿಲ್ಲ. ಅತ್ಯಾಚಾರಕ್ಕೂ ಮುನ್ನ ಕರೆ ಮಾಡುವುದಿಲ್ಲ. ಕಳ್ಳತನಕ್ಕೆ ಹೊರಟಿರುವುದಾಗಿ ಹೇಳಿ ಹೋಗುವುದಿಲ್ಲ. ಆದರೆ ಯಾವುದೇ ಸಾಕ್ಷ್ಯ ಇಲ್ಲದೇ ಇದ್ದರೂ ಅಪರಾಧಿಗಳನ್ನು ಹುಡಿಕಿ ಹೆಡೆಮುರಿ ಕಟ್ಟುತ್ತಾರೆಂದರೆ ಅವರ ಕಾರ್ಯಕ್ಷಮತೆಯನ್ನು ನಾವು ಮೆಚ್ಚಲೇ ಬೇಕು. ಅಪರಾಧ ನಡೆದಾಗ ಅವರ ವೈಫಲ್ಯ ಎಂದು ಹೇಳುವ ನಾವುಗಳು ಅವರು ಅರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದಾಗ ಅಭಿನಂದನೆ ಸಲ್ಲಿಸುತ್ತೇವಾ? ಖಂಡಿತ ಇಲ್ಲ. ಯಾರಾದರು ಒಂದು ಆಟದಲ್ಲಿ ಗೆದ್ದರೆ, ಚುನಾವಣೆಯಲ್ಲಿ ಗೆದ್ದರೆ ಹೂಮಾಲೆ ಹಾಕಿ ಅಭಿನಂದಿಸುವ ನಾವುಗಳು ಪೊಲೀಸರ ಕಾರ್ಯಕ್ಕೆ ಎಂದು ಅಭಿನಂದನೆ ಸಲ್ಲಿಸುವುದೇ ಇಲ್ಲ. ಉದಾಹರಣೆಗೆ ಸುಪ್ರೀಂಕೊರ್ಟ ರಾಮಜನ್ಮಭೂಮಿ ವಿವಾಧಕ್ಕೆ ತೆರೆ ಎಳೆದ ಸಂದರ್ಭದಲ್ಲಿ ದೇಶಾಧ್ಯಂತ ಗದ್ದಲ ಏಳಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಅಂಥ ಯಾವುದೇ ಘಟನೆ ನಡೆಯದಂತೆ ತಡೆಯಲು ಇಡೀ ಪೊಲೀಸ್ ಇಲಾಖೆ ಸನ್ನದ್ದವಾಗಿ ನಿಂತಿತ್ತು. ಅದರ ಪರಿಣಾಮವಾಗಿ ಯಾವುದೇ ರೀತಿಯ ಸಣ್ಣ ಘಟನೆಯು ನಡೆಯದಂತೆ ತಡೆದರು. ಆಗ ನಾವು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದೆವು ನಿನಃ ಇದಕ್ಕೆ ಅವಿರತ ಶ್ರಮಿಸಿದಂತ ಪೊಲೀಸ್ ಇಲಾಖೆಯನ್ನು ಮರೆತು ಹೋದೆವು. ಯಾರೊಬ್ಬರು ಒಂದು ಸಣ್ಣ ಅಭಿನಂದನೆಯನ್ನು ಸಲ್ಲಿಸಲಿಲ್ಲ. ಹಾಗೆಂದು ಯಾವ ಪೊಲೀಸರು ಯಾರಿಂದಲು ಇದನ್ನು ಅಪೇಕ್ಷಿಸುವುದು ಇಲ್ಲ. ಆದರೂ ಅವರನ್ನು ಅಭಿನಂದಿಸಬೇಕಾಗಿರುವುದು ನಮ್ಮಂತ ನಾಗರೀಕರ ಕರ್ತವ್ಯ ಎನ್ನುವುದನ್ನು ನಾವು ಮರೆಯಬಾರದು. ಪೊಲೀಸರನ್ನು ಕಂಡಾಗ ಹೆದರುವ ಬದಲು ಅವರ ಮೇಲೆ ಗೌರವವನ್ನು ಇಟ್ಟುಕೊಂಡು ಅವರು ಮಾಡುವ ಕಾರ್ಯಗಳಿಗೆ ಕೈ ಜೋಡಿಸಿದರೆ ಅವರ ಲಾಠೀಗಾಗಲಿ, ಬೂಟಿಗಾಗಲಿ, ಸಿದ್ಧಗೊಂಡಿರುವ ಬಂದೂಕಿಗಾಗಲಿ ಯಾವದೇ ಕೆಲಸ ಇರುವುದಿಲ್ಲ. ಆ ನಿಟ್ಟಿನಲ್ಲಿ ಈ ನಮಗಾಗಿ ದುಡಿಯುವ ರೀಯಲ್ ಹಿರೋಗಳಿಗೆ ಧನ್ಯವಾದಗಳನ್ನು ಅರ್ಿಸೋಣ. ಪೊಲೀಸರು ಮಾಡುವ ಕಾರ್ಯ ರೀಯಲಿ ಗ್ರೇಟ್ ಅದಕ್ಕೆ ನನ್ನ ಕಡೆಯಿಂದ ಒಂದು ಸೆಲ್ಯೂಟ್...!
- * * * -