ಬೆಂಗಳೂರು: ಕನಿಷ್ಟ ಆದಾಯ ಯೋಜನೆಗೆ ಬಿಜೆಪಿ ವಿರೋಧ ಏಕೆ : ದಿನೇಶ್ ಗುಂಡೂರಾವ್..?

ಬೆಂಗಳೂರು,ಮಾ 26: ನ್ಯಾಯ ಕನಿಷ್ಟ ಆದಾಯ ಯೋಜನೆ ಘೋಷಣೆ ಬಗ್ಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ. ದೇಶದ ಶೇ 20% ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತುವ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ದುರಂತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಘೋಷಣೆ ಮಾಡಿದ ನ್ಯಾಯ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತಲು ಬ್ರಹ್ಮಾಸ್ತ್ರವಾಗಿದೆ. 2011-12ರಲ್ಲಿ ಆರ್ಥಿಕ ಸಮೀಕ್ಷೆ ವರದಿ ಪ್ರಕಾರ ಶೇ 21ರಷ್ಟು ದೇಶದಲ್ಲಿ ಬಡತನವಿದೆ.ಜನ ಬಡತನ ರೇಖೆಗಿಂತ ಕೆಳಗಿರುವ 5 ಕೋಟಿ ಕುಟುಂಬಗಳಿಗೆ ಪ್ರತೀ ವರ್ಷ 72000 ರೂ ಕನಿಷ್ಟ ಆದಾಯ ನೀಡುವ ಮೂಲಕ 25 ಕೋಟಿ ಜನರಿಗೆ ಕಾರ್ಯಕ್ರಮ‌ ಮುಟ್ಟಿಸಲಾಗುವುದು. ವಿಶ್ವದಲ್ಲಿಯೇ ಇಂತಹ ಮಹತ್ವದ ಯೋಜನೆಯನ್ನು ಯಾವುದೇ ಸರ್ಕಾರ ರೂಪಿಸಿಲ್ಲ.ಇದಕ್ಕಾಗಿ 3 ಲಕ್ಷ ಕೋಟಿ ರೂ ವೆಚ್ಚವಾಗಲಿದೆ.ಇಂಹತ ಮಹತ್ವದ ಯೋಜನೆಯನ್ನ ಬಿಜೆಪಿ ವಿರೋಧಿಸುತ್ತಿರುವುದರಲ್ಲಿ ಅರ್ಥವಿಲ್ಲ ಎಂದರು.

ಯುಪಿಎ ಸರ್ಕಾರ ರೂಪಿಸಿದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಬಿಜೆಪಿ ಕೈಬಿಡುವ ಕೆಲಸ ಮಾಡುತ್ತಿದೆ.ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದ ಶೇ 14ರಷ್ಟು ಜನ ಬಡತನದಿಂದ ಹೊರ ಬಂದಿದ್ದಾರೆಂದು ವಿಶ್ವಬ್ಯಾಂಕ್ ವರದಿ ನೀಡಿದೆ. ಆಹಾರ ಭದ್ರತಾ ಕಾಯ್ದೆ ತಂದಿದ್ದೇವೆ. ಅರಣ್ಯ ಹಕ್ಕು ಕಾಯ್ದೆ. ಬುಡಕಟ್ಟು ಜನರಿಗೆ ಪಾಲಿಗೆ ಇದು ಐತಿಹಾಸಿಕ ಕಾಯ್ದೆಯಾಗಿದೆ. ಭೂಸ್ವಾಧೀನ ಕಾಯ್ದೆಯಿಂದ ನಾಲ್ಕುಪಟ್ಟು ಪರಿಹಾರ ನೀಡುವ ಯೋಜನೆ ಹಿಂದಿನ ಯುಪಿಎ ಸರ್ಕಾರದಲ್ಲಿ ಜಾರಿಗೆ ತಂದಿತ್ತು. ಇಂತಹ ಒಂದಾದರೂ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿಲ್ಲ ಏಕೆ ಎಂದರು.

ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಚೌಕಿದಾರ್, ಅಚ್ಚೇದಿನ್ ಬಿಟ್ಟು ಮತ್ತೇನು ಮಾಡಿದ್ದಾರೆ. ಸುಳ್ಳು ಹೇಳುತ್ತಾ ಕಪಟತನದಿಂದ ಬಿಜೆಪಿಯವರು ನಡೆದುಕೊಳ್ಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ನೀಡುತ್ತಿಲ್ಲ. 2100 ಕೋಟಿ ಅನುದಾನ ನೀಡದೆ ನಿರ್ಲಕ್ಷ್ಯ ಮಾಡಿದರು. ಭೂಸ್ವಾಧೀನ ಕಾಯ್ದೆ ರದ್ದುಪಡಿಸುವ ಕೆಲಸ ಮಾಡಿದರು. ಆಹಾರ ಭದ್ರತಾ ಕಾಯ್ದೆಯ ಮಹತ್ವ ಕಳೆದುಕೊಂಡಿದೆ. ಜನ‌ಸಾಮಾನ್ಯರ ಬಗ್ಗೆ ಬಿಜೆಪಿಗೆ ಕಳಕಳಿ ಎಲ್ಲಿದೆ ಎಂದು ದಿನೇಶ್ ಪ್ರಶ್ನಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಯ್ದೆ  ಬದಲಾವಣೆಗೆ ಪ್ರಯತ್ನ ನಡೆಸಿದರು. ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ  ಕೊನೆಗೆ ತಿದ್ದುಪಡಿ ಕೈಬಿಟ್ಟಿದ್ದಾರೆ. ರೈತರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ರೈತರ ಸಾಲಮನ್ನಾ ಬಗ್ಗೆ ಕನಿಷ್ಟ ಕಾಳಜಿ ಪ್ರದರ್ಶಿಸಲಿಲ್ಲ. 

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮುಂದಾದ ಬಿಜೆಪಿಗೆ ರೈತರು ವಿರೋಧಿಸಿ ಪ್ರತಿಭಟನೆಯ ಬಿಸಿ ಮುಟ್ಟಿಸಿದ ಬಳಿಕ ಕಾಯ್ದೆ ಬದಲಾವಣೆ ನಿಲ್ಲಿಸಿದರು. ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಿಂದ ರೈತರಿಗೆ ನಷ್ಟವಾಗುತ್ತಿದೆ. ಖಾಸಗಿ ಕಂಪನಿಗಳಿಗೆ ಲಾಭ ತಂದುಕೊಟ್ಟಿದ್ದಾರೆ. ಆಯುಷ್ಮಾನ್ ಭಾರತ ಯೋಜನೆಯಿಂದ ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದರು.

ಕನಿಷ್ಟ ಆದಾಯ ಖಾತ್ರಿ ಯೋಜನೆ ಜಾರಿ ಮಾಡಿದರೆ ಅರುಣ್ ಜೇಟ್ಲಿ ಹಾಗೂ ಬಿಜೆಪಿಯವರಿಗೆ ಏನು ಕಷ್ಟ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಿಸಿದ ಯೋಜನೆಗಳನ್ನು ಜಾರಿ ಮಾಡಿಯೇ ತೀರುತ್ತದೆ. ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದರೆ ಯೋಜನೆ ಜಾರಿ ಮಾಡುತ್ತೇವೆಂದು ದಿನೇಶ್ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಹಲವಾರು ಉದ್ದಿಮೆದಾರರ 3.12 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದೀರಿ. 1ಲಕ್ಷ ಕೋಟಿರೂ ಲೂಟಿ ಮಾಡಿ‌ ದೇಶ ಬಿಟ್ಟು ಹೋದವರನ್ನು ಇನ್ನೂ ಬಂಧಿಸಿಲ್ಲ. ರಫೇಲ್ ಹಗರಣದಲ್ಲಿ 30 ಸಾವಿರ ಕೋಟಿ ರೂ ಖಾಸಗಿ ಕಂಪನಿಗೆ ನೀಡಿದ್ದೀರಿ. ಪ್ರಚಾರಕ್ಕಾಗಿ 6000 ಕೋಟಿ ರೂ ಖರ್ಚು ಮಾಡಿದ್ದೀರಿ. ವಿದೇಶ ಪ್ರವಾಸಕ್ಕೆ ಮಾಡುವುದಕ್ಕೆ ಪ್ರಧಾನಿ ಬಳಿ ಹಣ ಇದೆ. 10 ಲಕ್ಷ ರೂ ಮೌಲ್ಯದ ಸೂಟ್ ಧರಿಸುತ್ತೀರಿ. ಬೆಳಗ್ಗೆ ಒಂದು, ಮಧ್ಯಾಹ್ನ, ಸಂಜೆ ಹೀಗೆ ದಿನಕ್ಕೆ ನಾಲ್ಕು ಬಟ್ಟೆ ಬದಲಾಯಿಸುತ್ತಿರಿ ಇದೆನ್ನೆಲ್ಲಾ ಗಮನಿಸಿದರೆ ಪ್ರಧಾನಿ ಮೋದಿ ಯಾರ ಪರ ಇದ್ದಾರೆ ಎಂಬುದು ಅರ್ಥ ಆಗುತ್ತದೆ. ಇಷ್ಟೆಲ್ಲಾ ನೀವು ಮಾಡಿದರೆ ಅದು ಜನಪರ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದರೆ ತಮಗೆ ಸಹಿಸಲು ಆಗುವುದಿಲ್ಲ  ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು. 

ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್ ಕೊನೆಯ ಕ್ಷಣದಲ್ಲಿ ವಾಪಸ್ ನೀಡಿದೆ. ಹೀಗಾಗಿ ಅನಿವಾರ್ಯವಾಗಿ ಕೃಷ್ಣ ಬೈರೇಗೌಡರನ್ನು ಕಣಕ್ಕಿಳಿಸಬೇಕಾಯಿತು. ತುಮಕೂರಿನಲ್ಲಿ ಹಾಲಿ ಸಂಸದ ಮುದ್ದ ಹನುಮೇಗೌಡರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ದೇವೇಗೌಡರು ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ಮೈತ್ರಿ ಧರ್ಮದ ಪ್ರಕಾರ ಅವರಿಗೆ ನೀಡಲಾಗಿದೆ. ಬಂಡಾಯವೆದ್ದಿರುವ ಮುದ್ದಹನುಮೇಗೌಡ ಹಾಗೂ ಕೆ.ಎನ್.ರಾಜಣ್ಣ ಅವರ ಜೊತೆ ಚರ್ಚಿಸಿ  ಮನವೊಲಿಸುವ ಕೆಲಸ ಮಾಡಲಾಗುವುದು ಎಂದರು.