ಯಾರ್ಯಾರು ಏನೇನು ಆಟಗಳನ್ನು ಆಡುತ್ತಿದ್ದಾರೋ.. ! : ಡಿ.ಕೆ.ಶಿವಕುಮಾರ್

ಬೆಂಗಳೂರು, ಜು 2 (ಯುಎನ್ಐ) ಯಾರ್ಯಾರು ಏನೇನು ಆಟಗಳನ್ನು ಆಡುತ್ತಿದ್ದಾರೋ ಏನೇನು  ನಡೆಯುತ್ತಿವೆಯೋ ಎನ್ನುವುದು ತಮಗೆ ಗೊತ್ತಿಲ್ಲ ಈ ಎಲ್ಲಾ ಆಟಗಳು ಎಷ್ಟು ದಿನ ನಡೆಯುತ್ತವೆ ಎನ್ನುವುದನ್ನು ನೋಡೋಣ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾಮರ್ಿಕವಾಗಿ ಹೇಳಿದ್ದಾರೆ 

ಸದಾಶಿವನಗರದ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಾವ ಶಾಸಕರನ್ನು ಮನವೊಲಿಸಲು ಹೋಗುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ ಸ್ವಯಂಪ್ರೇರಿತವಾಗಿ ಅವರಿಗೆ ಸರ್ಕಾರ ಮತ್ತು ಪಕ್ಷವನ್ನು ಉಳಿಸಬೇಕೆಂಬ ಮನಸು ಇರಬೇಕೇ ಹೊರತು ಯಾವುದೇ ಬಲವಂತವಿಲ್ಲ ಎಂದರು. 

ಸರ್ಕಾರದಲ್ಲಿ ಬಹಳಷ್ಟು ಆಟಗಳು ನಡೆಯುತ್ತಿವೆ. ಎಲ್ಲದಕ್ಕೂ ಸಮಯ, ಸಂದರ್ಭ ಎನ್ನುವುದಿದೆ. ಆ ಸಮಯಕ್ಕೆ ಕಾಯಬೇಕಿದೆ ಎಂದರು. 

ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಎಲ್ಲಿ ಏನು ಮಾಡಬೇಕೋ ಯಾವ ರೀತಿ ಸೂಚನೆ ಸಲಹೆ ಕೊಡಬೇಕೋ ಅದೆಲ್ಲವನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಅವರು ತಮ್ಮ ಕರ್ತವ್ಯವನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ. ಇಲ್ಲಿಗೆ  ಬಂದೇ ಎಲ್ಲವನ್ನು ಅವರು ಮಾಡಬೇಕೆಂದಿಲ್ಲ ಎಂದು ಒಗಟಾಗಿ ಡಿ.ಕೆ.ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

ದಿನೇಶ್ ಗುಂಡೂರಾವ್ ವಿದೇಶ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷರಿಗೆ ಸರ್ಕಾರ ಮತ್ತು ಪಕ್ಷ ಸುಭದ್ರವಾಗಿದೆ ಎನ್ನುವ ವಿಶ್ವಾಸವಿದೆ. ಹೀಗಾಗಿ ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಬದುಕಿದೆ. ಎಲ್ಲರೂ ಡಿ.ಕೆ.ಶಿವಕುಮಾರ್ ನಂತೆ ಇರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಬಣಕ್ಕೆ ಚಾಟಿ ಬೀಸಿದರು. 

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎಂದರೆ  ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಂದರೆ ಸಿದ್ದರಾಮಯ್ಯ, ಇನ್ನು ಕುಮಾರಸ್ವಾಮಿ ಎಂದರೆ ಕುಮಾರಸ್ವಾಮಿ ಮಾತ್ರ. ಒಬ್ಬರು ಇನ್ನೊಬ್ಬರಂತೆ ಆಗಲು ಸಾಧ್ಯವಿಲ್ಲ ಎಂದು ಒಗಟಾಗಿಯೇ ಪ್ರತಿಕ್ರಿಯಿಸಿದರು. 

ಈ ಸರ್ಕಾರ ಸುಭದ್ರವಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲಾ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಶಾಸಕ ನಾಗೇಂದ್ರ ಬಹಳ ಬುದ್ಧಿವಂತ, ಪ್ರಜ್ಞಾವಂತ ಕಾಂಗ್ರೆಸ್ ಮನುಷ್ಯ. ಮಹೇಶ್ ಕಮಟಳ್ಳಿ ಕೂಡ ಪ್ರಜ್ಞಾವಂತ. ಯಾರೂ ಸಹ ಪಕ್ಷ ಬಿಟ್ಟು ಹೋಗುವುದಿಲ್ಲ. ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯುಂಟಾಗುವುದಿಲ್ಲ ಎಂದರು. 

 ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಹೋದರ ಎಸ್.ಎಂ.ಶಂಕರ್ ಅವರ ಅಂತ್ಯಕ್ರಿಯೆಗೆ ಕೆಲಸದ ಒತ್ತಡದಿಂದ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇಂದು ಮದ್ದೂರಿಗೆ ಅವರ ಮನೆಗೆ ಭೇಟಿ ನೀಡುತ್ತಿದ್ದು, ಅಲ್ಲಿಂದ ಬಂದ ಬಳಿಕ ನಾಗೇಂದ್ರ, ಮಹೇಶ್ ಕಮಟಳ್ಳಿ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ಅವರು ತಿಳಿಸಿದರು. 

ಆನಂದ್ ಸಿಂಗ್, ತಮಗೆ ಆತ್ಮೀಯರು. ಮರುಪರಿಶೀಲನೆ ಮಾಡಿ ತಮ್ಮ ರಾಜೀನಾಮೆ ಹಿಂಪಡೆಯುತ್ತಾರೆ ಎನ್ನುವ ವಿಶ್ವಾಸ ಇದೆ. ರಿವರ್ಸ  ಆಪರೇಷನ್ ಬಗ್ಗೆ ಈಗ ಚರ್ಚಿಸುವ ಅವಶ್ಯಕತೆಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

ಬಳ್ಳಾರಿ ಹಾಲು ಒಕ್ಕೂಟದ ನಿರ್ದೇಶಕರಾಗಿರುವ ಶಾಸಕ ಭೀಮಾನಾಯ್ಕ್ ಅವರಿಗೆ ಕೆಎಂಎಫ್ ಪಟ್ಟ ಕಟ್ಟಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಲು ಮನಸು ಮಾಡದ ಡಿ.ಕೆ.ಶಿವಕುಮಾರ್, ಮುಂದೆ ನೋಡೋಣ ಎಂದಷ್ಟೇ ಹೇಳಿದರು.