ನ್ಯೂನ್ಯತೆಗಳನ್ನು ಮೀರಿ ಬೆಳೆಯುವವನು ಸಾಧಕನಾಗುತ್ತಾನೆ: ಸವಿತಾ ಕಾಳೆ

Who grows beyond the shortcomings becomes an achiever: Savita Kale

ವಿಜಯಪುರ 04: ಯಾರಲ್ಲಿ ನ್ಯೂನ್ಯತೆಗಳನ್ನು ಮೀರಿ ಬೆಳೆಯುವ ಶಕ್ತಿ ಇರುತ್ತದೆಯೋ ಅಂಥವರಿಗೆ ದೇವರು ಸವಾಲುಗಳನ್ನು ಎಸೆಯುತ್ತಾನೆ. ಆ ದೇವರು ಎಸೆದ ಸವಾಲನ್ನು ಸಮರ​‍್ಕವಾಗಿ ಎದುರಿಸಿದವನ ಸಾಧಕನಾಗಿ ಹೊರ ಹೊಮ್ಮುತ್ತಾನೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಸವಿತಾ ಕಾಳೆ ಹೇಳಿದರು. 

ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ವಿಲಚೇತರ ದಿನಾಚರಣೆಯ ಅಂಗವಾಗಿ ಏರಿ​‍್ಡಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ಸಮಸ್ಯೆಗಳು ಮನುಷ್ಯನನ್ನು ಸಾಧಕನನ್ನಾಗಿ ಹೊರಹೊಮ್ಮಿಸುವುದಕ್ಕೆ ಪ್ರೇರಣೆ ನೀಡುತ್ತವೆ. ಅಂತೆಯೇ ದೈಹಿಕವಾಗಿ ಅಂಗ ವೈಕ್ಯಲತೆಯೂ ಸಹ ಮನಸ್ಸಿನಲ್ಲಿ ಅಡಗಿರುವ ಸೂಪ್ತ ಚೇತನವನ್ನು ಜಾಗೃತಗೊಳಿಸಿ ಸಾಧನೆಯ ಶಿಖರವೇರುವುದಕ್ಕೆ ಪ್ರೇರಣೆ ನೀಡುತ್ತದೆ. ನನಗೆ ಅಂಗವೈಕಲ್ಯವಿದೆ ಎಂದು ಮರುಗುತ್ತ ಕುಳಿತರೆ ಏನು ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ನಮಗೆ ದೇವರು ನೀಡಿದ ಈ ಸವಾಲು ನಿಜವಾಗಲೂ ನಮ್ಮಲ್ಲಿರುವ ಶಕ್ತಿಯನ್ನು ಜಗತ್ತಿಗೆ ತೋರಿಸುವುದಕ್ಕೆ ಮಾಡಿಕೊಟ್ಟ ಅವಕಾಶ ಎಂದು ತಿಳಿದು ಮುನ್ನುಗಿದ್ದರೆ ಎಲ್ಲವೂ ಸರಿಯಾಗಿರುವ ವ್ಯಕ್ತಿಯನ್ನು ಸಹ ಮೀರಿಸಿ ನಡೆಯಬಹುದು. ಇದಕ್ಕೆ ಜಗತ್ತಿನ ಹಲವಾರು ರಂಗಗಳಲ್ಲಿ ದುಡಿದು ಹೆಸರು ಮಾಡಿದ ಅನೇಕ ಜನಗಳನ್ನು ನಾವು ಉದಾಹರಣೆಯಾಗಿ ಕಾಣಬಹುದಾಗಿದ್ದು ಅಂಗ ವೈಕ್ಯಲ್ಯತೆಯನ್ನು ಮೀರಿ ಬೆಳೆಯುವುದೇ ಬದುಕಿನ ಬಹು ದೊಡ್ಡ ಕಾರ್ಯವಾಗಿದೆ. ಈ ದೃಷ್ಠಿಯಿಂದ ವಿಕಲಚೇತರಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜೆಎಸ್‌ಎಸ್ ಆಸ್ಪತ್ರೆಯು ಇಷ್ಟು ದೊಡ್ಡ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ; ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಸಮಾಜಿಕ ಕಳಕಳಿಯುಳ್ಳ ಆಸ್ಪತ್ರೆಯಾಗಿದ್ದು ಈ ದಿನ ಭವ್ಯ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಸಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿದ್ದು ಎಲ್ಲರಿಗೂ ಮಾದರಿಯಾಗಿದೆ. ಈ ರೀತಿಯ ಕಾರ್ಯಕ್ರಮಗಳಿಂದ ವಿಕಲಚೇತನ ಮಕ್ಕಳಿಗೆ ಬೆಂಬಲದ ಜೊತೆಯಲ್ಲಿ ಭರವಸೆ ಸಿಕ್ಕು ಸಮಾಜಮುಖಿಯಾಗಿ ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು. 

ಸಿದ್ಧೇಶ್ವರ ಸಂಸ್ಥೆಯ ಚೇರಮನ್‌ರಾದ ಬಸಯ್ಯ ಹಿರೇಮಠ ಮಾತನಾಡಿ; ಸಿದ್ಧೇಶ್ವರ ಸ್ವಾಮೀಜಿಗಳ ಹೆಸರಿನಲ್ಲಿ ನಿರ್ಮಾಣವಾದ ಈ ಆಸ್ಪತ್ರೆಯು ನಮ್ಮ ಶಾಸಕರ ಕನಸಿನ ಕೂಸಾಗಿದೆ. ಶೈಕ್ಷಣಿಕ ಹಾಗೂ ಸಾಮಾಜಿಕ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಿದ್ಧೇಶ್ವರ ಸಂಸ್ಥೆಯು ಹೆಜ್ಜೆ ಹಾಕುತ್ತಲಿತ್ತು. ಈ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕುವಲ್ಲಿ ನೆರವಾಯಿತು. ಈಗ ಸಾಮಾಜಿಕ ಕಳಕಳಿಯ ಕಾರ್ಯವನ್ನು ಮತ್ತಷ್ಟು ಮಾಡುವ ಮೂಲಕ ನಮ್ಮ ಸಂಸ್ಥೆಯ ಆಶಯವನ್ನು ನೆರವೇರಿಸುತ್ತಿದೆ ಎಂದು ಹೇಳಿದರು. 

ಕಾರ್ಯಕ್ರಮವನ್ನು ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟನ ಸದಸ್ಯರಾದ ಶೈಲಜಾ ಬ. ಪಾಟೀಲ್ ಯತ್ನಾಳ, ಬಸವರಾಜ್ ವಿ ಗಣಿ, ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ, ಯೋಗಿಕ್ ನ್ಯೂರೋ ಸರ್ಜನ್ ಡಾ.ಮಯೂರ ಕಾಕು, ಶಿಶುಗಳು, ಮಕ್ಕಳು ಮತ್ತು ಹದಿ ಹರೆಯದವರ ಮಾನಸಿಕ ಆರೋಗ್ಯ ತಜ್ಞರಾದ ಡಾ.ಸೌಮ್ಯಶ್ರೀ ಕಾಕು ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿವರ್ಗದವರ ಹಾಜರಿದ್ದರು. ವಿವಿಧ ವಿಶೇಷ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲಾಯಿತು.