ನಾವಿಲ್ಲಿ ಬದಲಿಸಬೇಕಾಗಿರುವುದು ಕನ್ನಡಕವನ್ನೇ ಹೊರತು ಕಣ್ಣನ್ನಲ್ಲ...!

ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ಇಟ್ಟುಕೊಂಡು ಲೇಖನ ಬರೆದು ಬರೆದು ಸಾಕಾಗಿದೆ. ಮೂರ್ತಿಗಳ ಉದ್ಘಾಟನೆಯಲ್ಲಿ ರಾಜಕೀಯ, ಕೆಲಸ ಕೊಡಿಸುವಲ್ಲಿ ರಾಜಕೀಯ, ಮಹಾತ್ಮರ ಜಯಂತಿ ಆಚರಣೆಯಲ್ಲಿ ರಾಜಕೀಯ, ಅನ್ನ ಹಾಕುವಲ್ಲಿಯೂ ರಾಜಕೀಯ, ಕನ್ನಡ ಹಾಕುವಲ್ಲಿಯೂ ರಾಜಕೀಯ. ಹೀಗೆ ಹೆಜ್ಜೆ ಇಟ್ಟಲ್ಲೆಲ್ಲ ಬರೀ ರಾಜಕೀಯವೇ ಹೆಚ್ಚಾಗಿದೆ. ಹೀಗಾಗಿ ಅದರ ಕುರಿತು ಬರೆಯುವುದಕ್ಕೆ ಹೇಸಿಗೆ ಎನಿಸುತ್ತಿದೆ. ಆದರೂ ಮತ್ತೆ ಮತ್ತೆ ಅದನ್ನೇ ಬರೆಯುತ್ತೇನೆ. ಏನು ಮಾಡಲಿ ತಪ್ಪು ನಡೆದಿದ್ದನ್ನು ತಪ್ಪೆಂದು ಹೇಳದೇ ಹೋದರೆ ನಾನೊಬ್ಬ ಅಂಕಣಕಾರನಾಗಿ ಏನು ಸಾರ್ಥಕ ಹೇಳಿ? ಅದೇ ಕಾರಣಕ್ಕಾಗಿ ತಪ್ಪಿದ್ದರೆ ಮುಲಾಜಿಲ್ಲದೆ ಬರೆದು ಬಿಸಾಕುತ್ತೇನೆ. ಆದರೂ ಇಂದೇಕೊ ಬೇರೆ ಏನಾದರು ಹೇಳಬೇಕು ಎನಿಸುತ್ತಿದೆ. ಪ್ರಚಲಿತ ವಿದ್ಯಮಾನಗಳಿಗೆ ಹೋಲಿಕೆಯಾಗುವುದರ ಜೊತೆಗೆ ಬದುಕಿನ ಪ್ರತಿ ಹಂತದಲ್ಲೂ ನಮ್ಮನ್ನು ಕಾಡುವ ವಿಷಯವನ್ನು ಇಲ್ಲಿ ಉಲ್ಲೇಖಿಸುವ ಇರಾದೆಯಿಂದ ಈ ಲೇಖನ ತಮ್ಮೆದುರು ಇಡುತ್ತಿದ್ದೇನೆ. ಜೀವನದಲ್ಲಿ ನಮಗೆ ಎಲ್ಲ ಇದ್ದರೂ ಸಹ ಸಮಾಧಾನ ಎನ್ನುವುದೇ ಇಲ್ಲ. ದಿನಕ್ಕೊಂದಾದರೂ ಸಮಸ್ಯೆಗಳನ್ನು ಹೇಳಿಕೊಳ್ಳುತ್ತ ಗೋಳಾಡುವುದು ನಮ್ಮ ನಿತ್ಯದ ಪರಿಪಾಟಲಾಗಿದೆ. ಬಹುಶಃ ಕಂಪ್ಲೇಂಟ ಇಲ್ಲದೇ ದಿನವನ್ನು ಕಂಪ್ಲೀಟ್ ಮಾಡಿದ ಉದಾಹರಣೆ ಸಿಗುವುದೇ ಕಠಿಣ. ಸಧ್ಯ ಕಂಪ್ಲೆಂಟ್ಸಗಳೊಂದಿಗೆ ಜೀವನವನ್ನು ಕಂಪ್ಲೀಟ್ ಮಾಡುವ ಪಥದಲ್ಲಿ ಸಾಗುತ್ತಿದ್ದೇವೋ ಏನೋ ಅನ್ನಿಸುತ್ತಿದೆ. ನಮ್ಮ ಜೀವನದಲ್ಲಿ ಸಂತೋಷವನ್ನೇ ಕಳೆದುಕೊಂಡಿದ್ದೇವೆ ಎಂದು ಗೋಳಾಡುತ್ತೇವೆ. ಆದರೆ ವಾಸ್ತವದಲ್ಲಿ ಜೀವನದಲ್ಲಿ ಸಂತೋಷ ಎಂದರೆ ಏನು? ಎಂದು ಗೊತ್ತೇ ಇರದ ಜನರಿದ್ದಾರೆ ಎನ್ನುವುದನ್ನು ಮರೆತು ಹೋಗಿದ್ದೇವೆ. ಎಲ್ಲ ಇದ್ದರೂ ಯಾರೂ ಇಲ್ಲ ಎಂಬುದು ನಮ್ಮ ಮತ್ತೋಂದು ಕಂಪ್ಲೇಂಟು. ಅಸಲಿಗೆ ಯಾರೂ ಇಲ್ಲದ ಅನಾಥರು ಪ್ರಪಂಚದಲ್ಲಿ ಲಕ್ಷ ಲಕ್ಷ ಜನರಿದ್ದಾರೆ. ಹಾಗಿದ್ದರೆ ಅವರೇನು ಹೇಳಬೇಕು?. ನಾಮ್ಮ ದುಡಿಮೆಗೆ ತಕ್ಕ ಸಂಬಳವೇ ಇಲ್ಲ. ಇದ್ದರೂ ಅದು ತುಂಬಾ ಕಮ್ಮಿ ಎನ್ನುವುದು ನಮಗೆ ತುಂಬ ಬೇಸರದ ಸಂಗತಿ. ಆದರೆ ವಾಸ್ತವದಲ್ಲಿ ಕೂಲಿಗಾಗಿ ಕಣ್ಣರಳಿಸಿ ಕಾಯುತ್ತ ಪರಿತಪಿಸುವ ಲಕ್ಷಾಂತರ ಜನರಿದ್ದಾರೆ. ಅವರೆದರು ನಮ್ಮದೇನು ಮಹಾ. ಜೊತೆಗಿದ್ದ ಯಾರೋ ನಮ್ಮನ್ನು ಬಿಟ್ಟು ಹೋಗುತ್ತಿದ್ದಂತೆ ನಾನು ನನ್ನ ಸರ್ವಸ್ವವನ್ನೂ ಕಳೆದುಕೊಂಡೆ ಎನ್ನುವ ಉದ್ಘಾರವಾಚಕ ಬಳಸುತ್ತೇವೆ. ಮಾನಸಿಕ ವೇದನೆಯನ್ನು ನಾವೇ ಸೃಷ್ಠಿಸಿಕೊಳ್ಳುತ್ತೇವೆ. ಆದರೆ ದೇಹದ ಸ್ವಾದೀನವನ್ನೇ ಕಳೆದುಕೊಂಡು ಜೀವನ ನಡೆಸಲು ಸಾಹಸ ಪಡುತ್ತಿರುವವನಿಗೆ ಏನೆನ್ನಬೇಕು ಹೇಳಿ?. ನಮಗೆ ಹಾಕಿಕೊಳ್ಳಲು ಬ್ರ್ಯಾಂಡೆಡ್ ಶೂಗಳಿಲ್ಲ ಅಂತ ಕೊರಗ್ತಿವಿ. ಅಕ್ಷರಶಃ ಕೆಲವರಿಗೆ ಹಾಕಿಕೊಳ್ಳಲು ಚಪ್ಪಲಿಯೇ ಇರುವುದಿಲ್ಲ ಎನ್ನುವುದನ್ನು ಮರೆಯುತ್ತೇವೆ.  ನಮಗೆ ಕಲಿಯೋಕೆ ಎಲ್ಲ ಅವಕಾಶ ಸವಲತ್ತುಗಳು ಇವೆ. ಆದರೂ ಕಲಿಯೋದಕ್ಕೆ ಬೇಸರ ಪಟ್ಟುಕೊಳ್ಳುತ್ತೇವೆ. ಆದರೆ ಕೆಲವೊಬ್ಬರಿಗೆ ಅಂತ ಅವಕಾಶವೇ ಇರಲ್ಲ ಅನ್ನೋದನ್ನೇ ಮರಿಯುತ್ತೇವೆ. ತಟ್ಟೆ ತುಂಬ ಅನ್ನಾ ಹಾಕಿಕೊಂಡು ಕೂಡ ಹೊಟ್ಟೆ ಮರುಗಿಸಿ ತಿಪ್ಪೆಗೆ ಚೆಲ್ತಿವಿ. ಆದರೆ ಅದೆಷ್ಟೋ ಜನರಿಗೆ ತುತ್ತು ಅನ್ನಕ್ಕೂ ಗತಿ ಇಲ್ಲ ಅನ್ನೋ ಕಟು ಸತ್ಯವನ್ನು ಮರು​‍್ತ ಬಿಡ್ತಿವಿ. ನಮಗೆಲ್ಲ ಒಂದೇ ತರಹದ ಕೆಲಸ ಮಾಡುವುದು ಅಂದರೆ ಬೇಸರ. ಆದರೆ ಕೆಲವರಿಗೆ ಬೇರೆ ಅವಕಾಶವೇ ಇಲ್ಲದೇ ನರಳುತ್ತಿರುವುದನ್ನು ಕಂಡು ಕಾಣದಂತೆ ಬದುಕುತ್ತೇವೆ. ಇಂಥ ಸಣ್ಣ ಸಣ್ಣ ಉದಾಹರಣೆಗಳನ್ನು ನೋಡಿದಾಗ ನಾವು ಅದೆಂತ ಅರ್ಥರಹಿತವಾದ ಕಂಪ್ಲೇಂಟ್ಸ್‌ಗಳೊಂದಿಗೆ ಬದುಕು ಸಾಗಸ್ತಾ ಇದಿವಿ ಅನ್ಸುತ್ತೆ ಅಲ್ವಾ? ಸುಂದರವಾದ ಬದುಕನ್ನು ಬದುಕಲಾಗದೇ ಪಲಾಯನವಾದಿಗಳಂತೆ ಬರೀ ಸಮಸ್ಯೆಗಳನ್ನು ಹೇಳಿಕೊಳ್ಳುವು ದರಲ್ಲಿಯೇ ಮುಗಿಸಿ ಬಿಡುತ್ತೇವೆಂದರೆ ನಮ್ಮ ಮೇಲೆ ನಮಗೆ ಜಿಗುಪ್ಸೆ ಬರುತ್ತದೆ. ಇವೆಲ್ಲ ಒಂದೆಡೆಯಾದರೆ ಇವುಗಳನ್ನು ಮೀರಿಸುವಂತ ಬಾಲಿಶತನದ ಸಮಸ್ಯೆಯೊಂದನ್ನು ಹೇಳಿಕೊಳ್ಳುತ್ತೇವೆ. ಇದನ್ನು ಕೇಳಿ ನಾಚಿಕೆಯಿಂದ ತಲೆತಗ್ಗಿಸುವಂತಾಗುತ್ತದೆ. ಅದೆಂತ ಕಂಪ್ಲೇಂಟ್ ಅಂತಿರಾ? ನಾವು ಸರಿಯಾಗಿದ್ದೇವೆ; ಆದರೆ ನಮ್ಮ ಜೊತೆಯಲ್ಲಿ ನಮ್ಮ ತಾಯಿ ಹೊಂದಾಣಿಕೆಯಾಗುತ್ತಿಲ್ಲ. ನನ್ನ ಹಂಡತಿಯೊಂದಿಗೆ ತಾಯಿ ಹೊಂದಿಕೊಂಡು ಬಾಳುತ್ತಿಲ್ಲ. ಇದರಿಂದ ನನ್ನ ಸಂಸಾರದ ನೆಮ್ಮದಿಯೇ ಹಾಳಾಗಿ ಹೋಗಿದೆ. ಬದುಕೇ ಸಾಕಪ್ಪ ಸಾಕು ಎನ್ನಿಸುವ ಹಾಗೆ ನನ್ನತಾಯಿ ಚಿತ್ರಹಿಂಸೆ ನೀಡುತ್ತಿದ್ದಾಳೆ ಎಂಬುದು ನಮ್ಮೆದುರು ಇರುವ ದೊಡ್ಡ ಸಮಸ್ಯೆ. ಈ ರೀತಿಯ ಕಂಪ್ಲೇಂಟ್ ಕೇಳಿದಾಗ ಇದೊಂತರ ವಿಚಿತ್ರ ಅನ್ಸುತ್ತೆ ಅಲ್ವಾ? 

ಸಿಕ್ಕಿದ್ದಕ್ಕಿಂತ ಸಿಗದೇ ಇರುವುದರ ಕಡೆ ಮನಸ್ಸು ಹರಿಯುವುದು ಹಾಗೂ ಕಂಡಿದ್ದಕ್ಕಿಂತ ಕಾಣದೇ ಇರುವುದರ ಕಡೆ ಗಮನ ಸೇಳೆವುದು ನಮ್ಮ ಮನೋಧರ್ಮವಾಗಿದೆ. ಹೀಗಾಗಿ ನಮಗೆ ತಂದೆ ತಾಯಿರ ಪ್ರೀತಿ ಲೆಕ್ಕಕ್ಕಿಲ್ಲ. ಆದರೆ ಕೆಲವೊಬ್ಬರಿಗೆ ತಂದೆ ತಾಯಿಗಳೇ ಇರುವುದಿಲ್ಲ. ಆ ಪ್ರೀತಿಯನ್ನು ಬಯಸಿದರೂ ಸಹ ಅದು ಅವರಿಗೆ ದೊರಕುವುದಿಲ್ಲ. ಇದನ್ನು ಅರಿತು ಅರಿಯದವರಂತೆ ಬದುಕುತ್ತಿರುವ ನಾವು ನಮ್ಮ ತಾಯಿಯ ಸ್ವಭಾವನ್ನು ಕುರಿತು ಸರಳವಾಗಿ ಮಾತನಾಡುತ್ತೇವೆ. ನನ್ನ ತಾಯಿ ಅನಕ್ಷರಸ್ಥಳು, ಅವಳಿಗೆ ಯಾರಜೊತೆ ಹೇಗೆ ಬದುಕಬೇಕು ಎನ್ನುವುದು ಗೊತ್ತಿಲ್ಲ. ಹೀಗಾಗಿ ಎಲ್ಲರೆದುರು ಏನಾದರು ಮಾತನಾಡಿ ಬಿಡುತ್ತಾಳೆ. ಇದೇ ನನಗೆ ಅತೀ ದೊಡ್ಡ ತಲೆನೋವಾಗಿಬಿಟ್ಟಿದೆ. ಅದರಲ್ಲೂ ನನ್ನ ಹೆಂಡತಿ ತುಂಬಾ ಓದಿದವಳು ಡಬಲ್ ಡಿಗ್ರಿ ಮಾಡಿದವಳು. ತುಂಬಾ ಬುದ್ದಿವಂತೆ. ಅವಳಷ್ಟು ಜ್ಞಾನ ನನ್ನ ತಾಯಿ ಹತ್ತಿರ ಇರಲು ಸಾಧ್ಯವಿಲ್ಲ. ಹೀಗಾಗಿ ಅವಳ ಜಾಣ್ಮೆಯನ್ನು ಅರಿತು ಅವಳಿಗೆ ಗೌರವ ನೀಡಬೇಕಾಗಿರುವುದು ನಮ್ಮ ತಾಯಿಯ ಕರ್ತವ್ಯ. ಆದರೆ ಅದನ್ನು ಬಿಟ್ಟು ನಮ್ಮ ತಾಯಿ ಅವಳಿಗೆ ಎದುರು ಮಾತಾಡುವುದು ಸರಿಯೆ? ನೀವೇ ಹೇಳಿ, ಇಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿರುವುದು ಯಾರು? ರಾಶಿ ರಾಶಿ ಓದಿದ ನನ್ನ ಹೆಂಡತಿಯೊ? ಇಲ್ಲ ಅನಕ್ಷರಸ್ಥೆಯಾದ ನನ್ನ ತಾಯಿಯೊ? ಅನಕ್ಷರಸ್ಥೆಯಾದ ನನ್ನ ತಾಯಿ ತಾನೆ? ಎಂದು ಎಲುಬಿಲ್ಲದ ನಾಲಿಗೆಯನ್ನು ಎಲ್ಲೆಂದರೆಲ್ಲಿ ಹರಿದಾಡಿಸಿ, ಪ್ರಶ್ನೆಯನ್ನು ತಾನೇ ಕೇಳಿ ಅದಕ್ಕುತ್ತರವನ್ನು ತಾನೇ ಹೇಳಿ, ಒಂದೇ ಉಸಿರಿನಲ್ಲಿ ತಾಯಿಯ ಕುರಿತು ಕಂಪ್ಲೇಂಟ್ ಮಾಡುವವನು ಅಮ್ಮನ ಅಕ್ಕರೆಯ ಅಪ್ಪುಗೆಯಲಿ ಬೆಚ್ಚಗೆ ಬೆಳೆದ ಮಗ. ಯಾರ ಮಗ ಅಂಥ ಅನ್ಕೊಳ್ಳೋಕೆ ಹೋಗಬೇಡಿ ಕಾರಣ ಇದು ಕೇವಲ ಯಾರದೋ ಒಬ್ಬ ಮಗನ ಮಾತಲ್ಲ. ವಾಸ್ತವದ ಬದುಕಿನಲ್ಲಿ ಬುದ್ಧಿವಂತರ ಸೋಗಿನಲ್ಲಿ ಬದುಕುತ್ತಿರುವ ಜೀವನದ ದಟ್ಟದರಿದ್ರ ಮಕ್ಕಳಲ್ಲಿ ಪ್ರತಿಶತ ತೊಂಬತ್ತೇಂಟರಷ್ಟು ಜನರದು ಇದೇ ಮಾತು. ಇದೆಂತ ವಿಚಿತ್ರ ಅಲ್ಲವೆ; ಇಷ್ಟು ದಿವಸ ಹೊತ್ತು ಹೆತ್ತು ಸಾಕಿ ಸಲುಹಿದ ತಾಯಿ ನಿನ್ನೆ ಮೊನ್ನೆ ಬಂದ ಹೆಂಡತಿಗಾಗಿ ಬದಲಾಗಬೇಕು. ವಾಹ್‌...! ಈ ಮಾತುಗಳನ್ನು, ಇದನ್ನಾಡುವ ಮಕ್ಕಳನ್ನು ಮೆಚ್ಚಲೇ ಬೇಕು. 

ಹೌದು ನಿಜವಾಗಲೂ ಬದಲಾಗಬೇಕಾಗಿರುವುದು ತಾಯಿಯೇ. ಆದರೆ ಅವನ ತಾಯಿಯಲ್ಲ. ಬದಲಿಗೆ ಮುಂದೆ ತಾಯಿಯಾಗಬೇಕು ಎಂದು ಹಂಬಲ ಪಡುವವರು. ಈ ಮೇಲಿನ ಕಂಪ್ಲೇಂಟ್ಸ್‌ ಕೇಳಿದ ಮೇಲೆ ಬದಲಾಗಲೇ ಬೇಕು. ಈಗಲೂ ಬದಲಾಗದಿದ್ದರೆ ಇಂಥಹ ಮಕ್ಕಳು ಹುಟ್ಟಿ ಬದಲಾವಣೆಯಾಗು ಎಂದು ಹೇಳಿ ಬದುಕನ್ನೇ ಬದಲಿಸುತ್ತಾರೆ. ಅದಕ್ಕಾಗಿ ಈಗಲೆ ಆಸೆಗಳನ್ನು, ಕನಸುಗಳನ್ನು, ಬದುಕುವ ದಾರಿಗಳನ್ನು, ಜೀವನದ ಯೋಜನೆಗಳನ್ನು ಬದಲಾಯಿಸಿಕೊಂಡು ಈಗಲೇ ಬದಲಾಗಬೇಕು. ಇಲ್ಲದಿದ್ದರೆ ನೋವು, ನಿರಾಸೆ, ಕಣ್ಣೀರು, ಹತಾಶೆ ಕಟ್ಟಿಟ್ಟ ಬುತ್ತಿ. ಇಲ್ಲಿ ನನಗೆ ಒಂದು ವಿಷಯ  ಸ್ಪಷ್ಟವಾಗುತ್ತಿಲ್ಲ. ಈ ಜಗತ್ತಿಗೆ ನಾವು ಬರುವಾಗ ಕಣ್ಣುಗಳು ಮಾತ್ರ ಇದ್ದವು. ನಂತರ ಬೆಳೆದಂತೆ ಅದಕ್ಕೊಂದು ಕನ್ನಡಕ ಬಂದಿತು. ಬಂದ ಕನ್ನಡಕ ಸುಮ್ಮನೆ ಕೂರಲಿಲ್ಲ. ಪದೆ ಪದೆ ತನ್ನ ಶಕ್ತಿ ಪ್ರದರ್ಶನ ಮಾಡುತ್ತ ಸಾಗಿತು. ಅಂದರೆ ಕನ್ನಡಕದ ನಂಬರ್‌ಗಳು ಬದಲಾಗುತ್ತ ಹೋಯಿತು. ಅವು ಹೇಗೆ ಬದಲಾಗುತ್ತಿದ್ದವೋ ಹಾಗೇ ಕನ್ನಡಕವನ್ನು ಬದಲಾಯಿಸುತ್ತ ಸಾಗಿದೆವು. ಹೊಸ ಹೊಸ ಫ್ರೇಮ್‌ಗಳನ್ನು ಹಾಕಿಕೊಂಡು ಬಳಸತೊಡಗಿದೆವು. ಸಧ್ಯ ನಾವು ಅರ್ಥ ಮಾಡಿಕೊಳ್ಳಬೇಕಾಗಿದ್ದು ಇದನ್ನೆ. ಕಾರಣ ಇಲ್ಲಿ ಬದಲಾವಣೆ ಮಾಡಿದ್ದು ಕನ್ನಡಕವನ್ನೇ ಹೊರತು ಕಣ್ಣನ್ನಲ್ಲ. ಅಲ್ವೆ?. ಇದು ಸಹ ಹಾಗೆಯೇ; ತಾಯಿ ಕಣ್ಣು ಇದ್ದಹಾಗೆ; ನಮ್ಮ ಜನ್ಮವಾಗುತ್ತಲೇ ಅವಳ ಸ್ಪರ್ಶ, ಅವಳ ನೋಟ, ಅವಳ ಅಪ್ಪುಗೆ, ಅವಳ ಮುತ್ತು, ಅವಳ ಅಕ್ಕರೆ, ಅವಳ ಅನುಕಂಪ, ಅವಳ ಪ್ರೀತಿ, ಅವಳೆದೆಯ ಅಮೃತವನ್ನು ಸವಿದು ಬೆಳೆದಿರುತ್ತೇವೆ. ಅದಕ್ಕೆ ಅವಳು ಕಣ್ಣು, ಬೆಳಕು, ಭರವಸೆಯ ಪ್ರತೀಕದ ಹಾಗೆ. ಬಾಲ್ಯದಲ್ಲಿ ಸರಿಯಾಗಿದ್ದ ಕಣ್ಣು ನಂತರ ಹಾಳಾಗಿ ಕನ್ನಡಕ ಪಡೆಯುತ್ತೇವೆ ಹೇಗೇಯೋ ಹಾಗೆ ಯೌವ್ವನಾವಸ್ತೆಗೆ ಬಂದ ಮೇಲೆ ಹೆಂಡತಿಯನ್ನು ಪಡೆಯುತ್ತೇವೆ. ಹೇಗೆ ಕಣ್ಣಿನ ನಂತರ ಕನ್ನಡಕ ಬರುತ್ತದೆಯೋ ಹಾಗೆ ತಾಯಿಯ ನಂತರ ಹೆಂಡತಿ ಬರುತ್ತಾಳೆ. ಒಮ್ಮೆ ಆಲೋಚಿಸಿ ನೋಡಿದರೆ ಅರ್ಥವಾಗುವ ಸತ್ಯವೆಂದರೆ ಕಣ್ಣು ಸೃಷ್ಠಿಯಾದ ಮೇಲೆ ಕನ್ನಡಕ ಸೃಷ್ಠಿಯಾಗಿದ್ದು. ಕಣ್ಣು ಇರುವವರೆಗೆ ಮಾತ್ರ ಕನ್ನಡಕಕ್ಕೆ ಬೆಲೆ ಬರುವುದು. ಅಂದಮೇಲೆ ಕನ್ನಡಕ ಸದಾ ಕಣ್ಣಿಗೆ ಆಭಾರಿಯಾಗಿರಬೇಕು ಹೊರತು ಕಣ್ಣು ಕನ್ನಡಕಕ್ಕೆ ಆಭಾರಿಯಾಗಬೇಕಿಲ್ಲ. ಇಲ್ಲಿ ಪದೆ ಪದೆ ಬದಲಾಗುವುದು ಕನ್ನಡಕದ ಸಂಖ್ಯೆಯೆ ಹೊರತು ಕಣ್ಣಿನ ಸಂಖ್ಯೆಯಲ್ಲ. ಹೀಗಾಗಿ ಬದಲಾವಣೆಯಾಗಬೇಕಿರುವುದು ಕನ್ನಡಕವೇ ಹೊರತು ಕಣ್ಣಲ್ಲ. ಕಣ್ಣನ್ನು ಜೋಪಾನವಾಗಿಟ್ಟುಕೊಂಡಾಗ ಮಾತ್ರ ಬೆಳಕು, ಬೆಳಕು ನಮ್ಮಲ್ಲಿದ್ದಾಗ ಮಾತ್ರ ಬದುಕು. ಈ ವಾಸ್ತವ ಸತ್ಯವನ್ನು ನಾವು ಅರಿಯದಿದ್ದರೇ ಬದುಕೇ ದುಸ್ಥರವಾಗುತ್ತದೆ. ಇದೇ ರೀತಿ ಇಲ್ಲಿ ಬದಲಾಗಬೇಕಿರುವುದು ನಾವು ಮತ್ತು ನಮ್ಮ ಸಂಗಾತಿಯೇ  ಹೊರತು ತಾಯಿಯಲ್ಲ. ತಾಯಿ ಎನ್ನುವುದು ಸಮುದ್ರದಂತೆ. ನದಿಯು ಸಮುದ್ರ ಅರಸಿ ಹೋಗಬೇಕೆ ಹೊರುತು ನದಿಯನ್ನು ಬಯಸಿ ಸಮುದ್ರ ಬರಲು ಸಾಧ್ಯವಿಲ್ಲ. ಸಾವಿರ ನದಿಗಳು ಹರಿದು ಬಂದಾಗ ಬರಸೆಳೆದು ಅಪ್ಪಿಕೊಳ್ಳುವ ಸಮುದ್ರದಂತೆ ಎಷ್ಟೇ ಮಕ್ಕಳಿರಲಿ ಅವರನ್ನು ಪ್ರೇಮದ ಕಡಲಲ್ಲಿ ಲೀನ ಮಾಡಿಕೊಳ್ಳುವಳು ತಾಯಿ. ಹೀಗಿರುವಾಗ ಕೇವಲ ಒಂದು ನದಿಗಾಗಿ ಸಾವಿರ ನದಿಗಳ ಸಂಗಮ ಸ್ಥಳವಾದ ಸಮುದ್ರವನ್ನೇ ಬದಲಾಯಿಸುತ್ತೇನೆ ಎಂದುಕೊಂಡರೆ ಅವನಂತ ಮೂರ್ಖ ಜಗದಲ್ಲಿ ಬೇರೊಬ್ಬನಿರಲು ಸಾಧ್ಯವೇ ಇಲ್ಲ. ಸಮುದ್ರ ಸಮುದ್ರವೇ, ನದಿ ನದಿಯೇ. ಹಾಗೆಯೇ ತಾಯಿ ತಾಯಿಯೇ ಹೆಂಡತಿ ಹೆಂಡತಿಯೇ. ಹಾಗಾಗಿ ಬದಲಾವಣೆ ಕಾಣಬೇಕಾಗಿದ್ದು ಹೆಂಡತಿಯಲ್ಲಿಯೇ ಹೊರತು ತಾಯಿಯಲ್ಲಿ ಅಲ್ಲ. 

ಹೌದು ಮಗ ಸೊಸೆಯ ವಿಷಯದಲ್ಲಿ ತಾಯಿ ಸ್ವಲ್ಪ ಮಾತಾಡಿರಬಹುದು ನಿಜ. ಆದರೆ ಅದು ದ್ವೇಶದ ಮಾತಲ್ಲ ಬದಲಿಗೆ ಎಲ್ಲೋ ಒಂದು ರೀತಿಯ ಭಯ, ಎಲ್ಲಿ ನನ್ನ ಮಗ ನನ್ನಿಂದ ದೂರವಾಗುತ್ತಾನೋ ಎನ್ನುವ ಆತಂಕ. ದುಡ್ಡುಕೊಟ್ಟು ಖರಿದಿಸಿದ ಸೀರೆಯನ್ನು ನಿಮ್ಮ ಗೆಳತಿ ಒಂದು ಬಾರಿ ತೊಟ್ಟುಕೊಂಡು ನೋಡುತ್ತೇನೆ ಕೊಡು ಎಂದಾಗ ಸಾವಿರ ಬಾರಿ ಆಲೋಚನೆ ಮಾಡುತ್ತೀರಿ. ಜೀವವಿಲ್ಲದ ವಸ್ತುವನ್ನು ನೀಡುವುದಕ್ಕೆ ಅಷ್ಟೊಂದು ವಿಚಾರ ಮಾಡುವಾಗ ನವಮಾಸ ಹೊತ್ತು, ಹೆತ್ತು, ಎದೆಯ ಅಮೃತ ಉಣಿಸಿ, ಕೈಯ ತುತ್ತನು ತಿನ್ನಿಸಿ, ಮಡಿಲು ತೊಟ್ಟಿಲವಾಗಿಸಿ, ಉಸಿರೇ ಲಾಲಿಯಾಗಿಸಿ ಬೆಳೆಸಿದ ತನ್ನ ಮಗನನ್ನು ಸೊಸೆ ಎಡೆಗೆ ಕಳುಹಿಸುವಾಗ ಆಲೋಚನೆ ಮಾಡುವುದರಲ್ಲಿ ತಪ್ಪೇನಿದೆ? ಕಿಡ್ನಿಯಲ್ಲಿ ಕೇವಲ 2 ಎಂ.ಎಂ ನಷ್ಟು ಹರಳು ಸೃಷ್ಟಿಯಾದರೆ ಸಾಕು ಸತ್ತೇ ಹೋಗುತ್ತೆನೇನೊ ಎನ್ನುವಂತೆ ಅಬ್ಬರಿಸಿ ಬೊಬ್ಬಿರಿದು ಒದ್ದಾಡುತ್ತೇವೆ. ಆದರೆ ತಾಯಿ, ಗ್ರಾಂನಿಂದ ಆರಂಭವಾಗಿ ಕೇಜಿಯಿಂದ ಹೊರಬರುವ ನಮ್ಮನ್ನು ಒಂಬತ್ತು ತಿಂಗಳು ಹೊರುತ್ತಾಳೆ. ಸಾವಿನ ಮನೆಯ ಕದ ತಟ್ಟಿ ನಮ್ಮನ್ನು ಹೆರುತ್ತಾಳೆ. ಅವಳಿಗೆ ತಾನು ಇನ್ನೂ ಜೀವಂತವಗಿದ್ದೇನೆ ಎನ್ನುವ ನಂಬಿಕೆ ಬರುವುದೇ ಮಗುವಿನ ಮುಖ ನೋಡಿದ ಮೇಲೆಯೇ. ಅಂದಮೇಲೆ ಅಂಥ ತಾಯಿ ತನ್ನ ಮಗನ ಮೇಲೆ ಅಂಥ ಒಂದು ಬಣ್ಣಿಸಲಾಗದ ಭಾವನೆಯನ್ನಿಟ್ಟುಕೊಂಡಿರುವದರಲ್ಲಿ ತಪ್ಪೇನಿದೆ? ಇದನ್ನು ಅರಿತುಕೊಳ್ಳದ ನಾವುಗಳು ತಾಯಿ ಆಡುವ ಮಾತುಗಳನ್ನೇ ದೊಡ್ಡದನ್ನಾಗಿ ಮಾಡಿ ನನ್ನ ತಾಯಿಯೇ ಸರಿ ಇಲ್ಲ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎನ್ನುವ ಕಂಪ್ಲೇಂಟ್ ಮಾಡುತ್ತವೆ. ಒಂದು ವೇಳೆ ನಮ್ಮ ತಾಯಿ ಜೀವನದೊಂದಿಗೆ, ತನ್ನ ಜೀವನ ಶೈಲಿಯೊಂದಿಗೆ, ತಿನ್ನೋ ಆಹಾರದೊಂದಿಗೆ, ವೈದ್ಯರು ನೀಡೋ ಸಲಹೆಯೊಂದಿಗೆ, ತನಗಾಗುವ ನೋವಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಹೋಗಿದ್ದರೆ ಬಹುಶಃ ನಾವು ನೀವು ಹುಟ್ಟುತ್ತಲೇ ಇರಲಿಲ್ಲ. ಜನಿಸುವಾಗ ಸಹನಾಮೂರ್ತಿಯ ಪ್ರತಿರೂಪವಾದ ತಾಯಿ ಇಂದು ಹೊಂದಾಣಿಕೆ ಇಲ್ಲದವಳಾಗಿ ನಮ್ಮ ಕಣ್ಣಿಗೆ ಕಾಣುತ್ತಿರುವುದು ನಮ್ಮ ನಿರ್ಲಜ್ಜ ಜೀವನದ ಪರಮಾವದಿ ಎಂದೇ ಬಣ್ಣಿಸಬಹುದು.  

ಹೆಂಡತಿ ಎನ್ನುವ ವ್ಯಾಮೋಹ ನಮ್ಮನ್ನು ಆವರಿಸಿಕೊಂಡು ಬಿಟ್ಟಿತು ಎಂದರೆ ನಮ್ಮ ಕಣ್ಣಿಗೆ ಬೇರೆನು ಕಾಣಿಸುವುದೇ ಇಲ್ಲ. ಇದೇ ಇಂದು  ಜೀವನದ ಸಂಬಂಧಗಳು ಹಾಳಾಗುವಂತೆ ಮಾಡುತ್ತಿವೆ. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಒಂದು ಸಣ್ಣ ಸೂಕ್ಷ್ಮವನ್ನು. ಯಾವುದನ್ನು ಬದಲಾವಣೆಯನ್ನು ಮಾಡಲು ಸಾಧ್ಯ ಎನ್ನುವುದನ್ನು. ಕಟ್ಟಿದ ಬಿಲ್ಡಿಂಗು ಗಟ್ಟಿಯಾಗಿ ನಿಲ್ಲುವುದು ಬುನಾದಿಯ ಆಧಾರದ ಮೇಲೆ. ನಾವು ಬಿಲ್ಡಿಂಗ್ ವಿನ್ಯಾಸವನ್ನು, ಗೋಡೆಯ ಆಕಾರವನ್ನು, ವಾಸ್ತುಶೈಲಿಯನ್ನು, ಮನಸ್ಸಿಗೆ ಬಂದ ಹಾಗೆ ಬದಲಾವಣೆ ಮಾಡಿಕೊಳ್ಳಬಹದು. ಆದರೆ ಬುನಾದಿಯನ್ನು ಪದೆ ಪದೆ ಮನಸೋ ಇಚ್ಚೆ ಬದಲಿಸಲು ಸಾಧ್ಯವೆ? ಖಂಡಿತ ಇಲ್ಲ. ಒಂದು ವೇಳೆ ಅಂಥ ಮೂರ್ಖ ಕಾರ್ಯಕ್ಕೆ ಕೈ ಹಾಕಿದರೆ ಇಡೀ ಬಿಲ್ಡಿಂಗ್ ಬಿದ್ದು ಹೋಗುತ್ತದೆ. ಇಲ್ಲಿ ತಾಯಿ ಬದಲಾವಣೆ ಮಾಡಲಾಗದ ಬುನಾದಿಯಾದರೆ ಇನ್ನೂಳಿದ ಸಂಬಂಧಗಳು ಅದರ ಮೇಲೆ ಕಟ್ಟಿರುವ ಗೋಡೆಯ ಹಾಗೆ. ಒಂದುವೇಳೆ ಬದಲಿಸುವ ಅನಿವಾರ್ಯತೆ ಎದುರಾದರೆ ಗೋಡೆಯನ್ನು ಬದಲಾವಣೆ ಮಾಡಬೇಕೆ ಹೊರತು ಬುನಾದಿಯನ್ನಲ್ಲ. ಸಂಸಾರದ ನೆಮ್ಮದಿಗಾಗಿ ವಾಸ್ತು ಎಂದು ಹೇಳುತ್ತ ಮನೆಯ ಗೋಡೆಗಳನ್ನು ಕೆಡವಿ, ಕೆಡವಿ ರೂಡಿಯಾಗಿ ಹೋಗಿದೆ. ಆದರೆ ನಿಜವಾಗಲೂ ಹೊಸ ಬದಲಾವಣೆ ತರಲು ಬಯಸುವ ನಾವುಗಳು  ಕೆಡುವಬೇಕಾಗಿರುವುದು ಮನೆಯ ಗೋಡೆಯನ್ನಲ್ಲ. ಸಂಬಂಧಗಳ ಮಧ್ಯದಲ್ಲಿ ಎದ್ದಿರುವ ಅನವಷ್ಯಕ ವೈಮನಸ್ಸಿನ ಗೋಡೆಗಳನ್ನು. ಆವಾಗ ಶಾಂತಿ ತನ್ನಷ್ಟಕ್ಕೆ ತಾನೆ ನೆಲೆಸುತ್ತದೆ. ಬಿರುಗಾಳಿ ಬೀಸಿದ ನಂತರ ಅಲ್ಲೊಂದು ಅಸಾಧಾರಣ ಶಾಂತಿಯೊಂದು ನಿರ್ಮಾಣವಾಗುತ್ತದೆ. ಹಾಗೇ ಸ್ವಲ್ಪ ಬದಲಾವಣೆ ನಾವೇ ಮಾಡಿಕೊಂಡರೆ ಅಲ್ಲಿ ಎಲ್ಲವೂ ಸರಿಯಾಗುತ್ತದೆ. 

ಇಂದು ತಾಯಾಗಿರುವವಳು ಹಿಂದೆ ಒಂದು ಮನೆಯ ಸೊಸೆಯಾಗಿ ಬಂದಿರುತ್ತಾಳೆ. ಅಂದು ನಮ್ಮ ತಂದೆಯೂ ನನ್ನ ತಾಯಿಯನ್ನು ಬದಲಾಯಿಸುವ ಬದಲು ತನ್ನ ತಾಯನ್ನೇ ಬದಲಾವಣೆಯಾಗು ಎಂದು ಬೋಧನೆ ಮಾಡಿದ್ದರೆ ಬಹುಷಃ ನಮ್ಮನ್ನು ಪ್ರೀತಿಯಿಂದ ಕಥೆ ಹೇಳಿ, ತಲೆ ನೇವರಿಸಿ, ಕೊನೆಗಾಲದಲ್ಲಿ ನಮ್ಮ ಮುಖ ನೋಡುತ್ತ ಜೀವನ ಸಾಗಿಸುವ ಅಕ್ಕರೆಯ ಅಜ್ಜ ಅಜ್ಜಿಯರನ್ನು ನಾವು ಪಡೆದುಕೊಳ್ಳುತ್ತಿರಲಿಲ್ಲ. ಇಂದು ಸೊಸೆಯಾಗಿ ಬಂದವಳು ಮುಂದೊಂದು ದಿನ ತಾಯಾದಾಗ, ತನ್ನ ಮಗನು ತಂದೆಯ ಸ್ಥಾನಕ್ಕೇರಿದಾಗ, ನೀನು ಬದಲಾಗಮ್ಮ ನನ್ನ ಹೆಂಡತಿಗಾಗಿ ಎಂದು ಒಂದು ಮಾತು ಹೇಳಿದರೆ ಸಾಕು ತಾನು ಮಾಡಿದ ತಪ್ಪಿನ ಸಾಲು ಸರಪಟಾಕಿ ಹಚ್ಚಿದಂತೆ ಎದೆಯತುಂಬ ಸಿಡಿಯುತ್ತವೇ. ಆದರೆ ಏನು ಮಾಡುವುದು ಕಾಲ ಮಿಂಚಿ ಹೋಗಿರುತ್ತದೆ. ತಪ್ಪಿನ ಅರಿವಾದರು ಸಹ ತಿದ್ದಿಕೊಳ್ಳುವ ಅವಕಾಶ ಕಳೆದುಹೋಗಿರುತ್ತದೆ. ಆಗ ನೋವು ಹತಾಶೆಯ ಹೊರತು ಬೇರೇನು ಸಿಗುವುದಿಲ್ಲ. ಇದನ್ನು ಅರಿತುಕೊಂಡು ಇಂದೇ ಬದಲಾಗುವುದು ಉತ್ತಮ ಅಲ್ಲವೆ? ಭೂಮಿಯ ಮೇಲೆ ಅದೇಷ್ಟೋ ಬಾರಿ ಚಂಡ ಮಾರುತಗಳು ಬೀಸಿ ಹೋಗಿವೆ. ಅದೆಷ್ಟೋ ಸುನಾಮಿಗಳು ಅಪ್ಪಳಿಸಿ ಅಪ್ಪಚ್ಚಿ ಮಾಡಿವೆ. ಅಲ್ಲಿಗೆ ಎಲ್ಲವು ನಿಂತು ಹೋದವೆ? ಖಂಡಿತ ಇಲ್ಲ. ಮತ್ತೆ ಬದುಕು ಯತಾಸ್ಥಿತಿಗೆ ಬಂದು ಬಿಡುತ್ತದೆ. ಈ ಬದುಕು ಅಷ್ಟೇ ಎಲ್ಲಾ ಮೂರು ದಿನದ ಹಾರಾಟ, ನಂತರ ಯಾತಾಸ್ಥಿತಿ. ಹೀಗಾಗಿ ಅರಿತುಕೊಂಡು ಬದುಕಿದರೆ ಸ್ವರ್ಗ, ಮರೆತಂತೆ ಬದುಕಿದರೆ ನರಕ ಏನಂತಿರಾ........? 

- * * * -