ಈಗಿನ ಕಾಂಗ್ರೆಸ್‌ಗೂ, ಮಹಾತ್ಮ ಗಾಂಧೀಜಿಗೂ ಏನು ಸಂಬಂಧ? ಪ್ರಲ್ಹಾದ ಜೋಶಿ

What is the relationship between the current Congress and Mahatma Gandhi?

ಹುಬ್ಬಳ್ಳಿ 23: ‘ಈಗಿನ ಕಾಂಗ್ರೆಸ್‌ಗೂ, ಮಹಾತ್ಮ ಗಾಂಧೀಜಿಗೂ ಏನು ಸಂಬಂಧ. ಈಗಿನದು ನಕಲಿ ಕಾಂಗ್ರೆಸ್‌, ಹಳೇ ಕಾಂಗ್ರೆಸ್‌ ತುಂಡು ತುಂಡಾಗಿ ಹೋಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ಬೆಳಗಾವಿಯಲ್ಲಿ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿರುವ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್ ಸಮಾವೇಶ ನಡೆಸಿ ಹಣ ಪೋಲು ಮಾಡುತ್ತಿದೆ. ಮಹಾತ್ಮ ಗಾಂಧೀಜಿಗೂ ಇಂದಿನ ಕಾಂಗ್ರೆಸ್‌ಗೂ ಏನು ಸಂಬಂಧ? ಈಗಿರುವ ಕಾಂಗ್ರೆಸ್ ನಲ್ಲಿ ಮೂಲ ಕಾಂಗ್ರೆಸ್ ಕಾಣುತ್ತಿಲ್ಲ. ಇದು ಇಂದಿರಾ  ಗಾಂಧಿ ಕಾಂಗ್ರೆಸ್, ಈ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯದಲ್ಲಿ ನಂಬಿಕೆಯಿಲ್ಲ. ಬಿ.ಆರ್.ಅಂಬೇಡ್ಕರ್ ಅವರಿಗೆ ಅಗೌರವ ಸೂಚಿಸಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸಿ.ಟಿ. ಅವರನ್ನು ಕಾರಿನಲ್ಲಿ ಸುತ್ತಾಡಿಸಿದ್ದು ತನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ನೀಡುತ್ತಾರೆ. ಅಂದರೆ, ಗೃಹ ಸಚಿವರನ್ನೇ ಕತ್ತಲಲ್ಲಿ ಇಟ್ಟು ಪೊಲೀಸರು ಹೀಗೆ ಮಾಡಿದ್ದಾರಾ? ಜಿಲ್ಲಾ ಉಸ್ತುವಾರಿ ಸಚಿವರು ಸಹ ಪೊಲೀಸರು ತಪ್ಪು ಮಾಡಿದ್ದಾರೆ ಎಂದಿದ್ದಾರೆ. ಹಾಗಾದರೆ ಸರ್ಕಾರದಲ್ಲಿ ಏನು ನಡೆಯುತ್ತಿದೆ? ಇದರ ಹಿಂದಿನ ಸೂತ್ರಧಾರರು ಯಾರು ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಖು’ ಎಂದು ಆಗ್ರಹಿಸಿದರು.

ಸಿ.ಟಿ. ರವಿ ಅವರ ಆಕ್ಷೇಪಾರ್ಹ ಹೇಳಿಕೆ ಮುಚ್ಚಿಕೊಳ್ಳಲು ಬಿಜೆಪಿ ಮುಖಂಡರು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ’ ಎನ್ನುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಯಾವಾಗಲೂ ಮರ್ಯಾದೆಯಿಂದಲೇ ವರ್ತಿಸುತ್ತಿದ್ದೇವೆ. ಅವರ ಹಾಗೆ ನಾವೇನೂ ಮರ್ಯಾದೆ ಬಿಟ್ಟಿಲ್ಲ. ಕಾಂಗ್ರೆಸ್‌ನಲ್ಲಿ ಸಂಸ್ಕೃತಿ, ಸಂಸ್ಕಾರ ಅನ್ನುವುದೇ ಇಲ್ಲ. ಕೆಲವಷ್ಟು ನಾಯಕರನ್ನು ಹೊರತು ಪಡಿಸಿ ಉಳಿದವರೆಲ್ಲ ಅನಾಗರಿಕರ ಹಾಗೆ ವರ್ತಿಸುತ್ತಾರೆ ಎಂದು ಹರಿಹಾಯ್ದರು