ನವದೆಹಲಿ 11: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತುರ್ತಾಗಿ ಫ್ರಾನ್ಸ್ ನ ರಾಫೇಲ್ ಘಟಕಕ್ಕೆ ಭೇಟಿ ನೀಡುವ ಅಗತ್ಯವೇನಿತ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರಕ್ಷಣಾ ಸಚಿವರು ಸರ್ಕಾರದ ರಾಫೇಲ್ ಡೀಲ್ ಬಗ್ಗೆ ಮುಚ್ಚಿ ಹಾಕಲು ಫ್ರಾನ್ಸ್ ಗೆ ತೆರಳಿದ್ದಾರೆಯೇ ಎಂದು ಕೇಳಿದ್ದಾರೆ.
ಮೂರು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ನಿರ್ಮಲಾ ಸೀತಾರಾಮನ್ ಭಾರತಕ್ಕಾಗಿ ರಾಫೇಲ್ ಯುದ್ದ ವಿಮಾನ ತಯಾರಾಗುತ್ತಿರುವ ಡಾಸಲ್ಟ್ ಘಟಕಕ್ಕೆ ಏಕೆ ಭೇಟಿ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಪ್ರಾನ್ಸಿಸ್ಕೋ ಹಾಲಂಡೆ ಭಾರತದ ಪ್ರಧಾನಿ ರಿಲಯನ್ಸ್ ಗೆ ಡೀಲ್ ಸಿಗಬೇಕು ಎಂದು ತಿಳಿಸಿದ್ದರು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದರು, ರಾಫೇಲ್ ನ ಹಿರಿಯ ಅಧಿಕಾರಿಗಳು ಕೂಡ ಇದನ್ನೆ ಹೇಳಿದ್ದರು. ಹೀಗಿರುವಾಗ ಇದೊಂದು ದೊಡ್ಡ ಹಗರಣ ಎಂಬುದು ಸ್ಪಷ್ಟ. ದೇಶದ ಪ್ರಧಾನಿಯೇ ಹೀಗೆ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬುದನ್ನು ದೇಶದ ಯುವಕರಿಗೆ ತಿಳಿಸುತ್ತೇನೆ.
ನರೇಂದ್ರ ಮೋದಿ ಅನಿಲ್ ಅಂಬಾನಿ ಅವರಿಗೆ ಚೌಕಿದಾರರಾಗಿದ್ದಾರೆ. ಅಂಬಾನಿಗೆ ಲಾಭ ಮಾಡಿಕೊಡಲು ಪ್ರಧಾನಿ ಆಗಿದ್ದಾರೆ. ಪ್ರಧಾನಿ ಮೋದಿ ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ನೀಡಲು ಆಗದಿದ್ದರೇ ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.