ಬೆಂಗಳೂರು, ಫೆ 10 : ಈ ಹಿಂದೆ ‘ತಾರಾಕಾಸುರ‘ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ವೈಭವ್ ನಟಿಸುತ್ತಿರುವ ದ್ವಿತೀಯ ಚಿತ್ರ ‘ಕೈಲಾಸ’ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿಸಿಕೊಂಡಿದೆ
‘ಕಾಸಿದ್ರೆ’ ಎಂಬ ಅಡಿಬರಹ ಹೊಂದಿರುವ ಚಿತ್ರದ ಮೊದಲ ಸನ್ನಿವೇಶಕ್ಕೆ ಡಾಲಿ ಧನಂಜಯ್ ಆರಂಭ ಫಲಕ ತೋರಿದರು ನಟರಾದ ರಾಜವರ್ಧನ್, ವಿಕ್ಕಿ, ನಿರ್ದೇಶಕರಾದ ನಾಗಣ್ಣ, ಅಲೆಮಾರಿ ಸಂತು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ನಿರ್ಮಾಪಕ ರಮೇಶ್ ಯಾದವ್, ಕರಿಸುಬ್ಬು, ಉಮೇಶ್ ಬಣಕಾರ್ ಮುಂತಾದ ಚಿತ್ರರಂಗದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು
ಬದುಕಿನ ಅರ್ಥ ತಿಳಿದುಕೊಳ್ಳದ ಯುವಕ ಹಾಗೂ, ಜವಾಬ್ದಾರಿ ಇರುವ ಯುವತಿಯ ನಡುವೆ ಪ್ರೀತಿ ಶುರುವಾಗುತ್ತದೆ ಆಕೆಯ ಮನಸ್ಸನ್ನು ಗೆಲ್ಲಲು ಆತ ಏನೇನು ಮಾಡುತ್ತಾನೆ?ಎಷ್ಟು ಕಷ್ಟ ಪಡುತ್ತಾನೆ?ಎಲ್ಲೆಲ್ಲಿ ಹೋಗುತ್ತಾನೆ ಅಂತಿಮವಾಗಿ ಅವನ ಶ್ರಮಕ್ಕೆ ಫಲಿತಾಂಶ ಸಿಗುತ್ತಾದಾ ಎಂಬುದು ಚಿತ್ರದ ಕಥಾ ಹಂದರ
ಹನ್ನೆರಡು ವರ್ಷ ಟೆಕ್ಕಿಯಾಗಿ ಕೆಲಸ ಮಾಡಿರುವ ಬಳ್ಳಾರಿ ಮೂಲದ ನಾಗ್ ವೆಂಕಟ್ ಈ ಚಿತ್ರದ ನಿರ್ದೇಶಕರು. ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿ, ವೆಬ್ ಸೀರೀಸ್ ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿ ಅನುಭವ ಪಡೆದುಕೊಂಡಿದ್ದಾರೆ ನಾಗ್ ವೆಂಕಟ್.
ಬೆಂಗಳೂರು ಸುತ್ತಮುತ್ತ, ತೀರ್ಥಹಳ್ಳಿ, ಕೊಡಗು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ.
ವೈಭವ್ , ರಾಶಿ ಬಾಲಕೃಷ್ಣ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ. ಖಳನ ಪಾತ್ರದಲ್ಲಿ ತೆಲುಗಿನ ಪ್ರಸಿದ್ದ ನಟ ಅಭಿನಯಿಸುವ ಸಾದ್ಯತೆ ಇದ್ದು, ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ. ನಾಲ್ಕು ಹಾಡುಗಳಿಗೆ ಆಶಿಕ್ ಅರುಣ್ ಸಂಗೀತವಿದೆ. ಛಾಯಾಗ್ರಹಣ ಟಾಲಿವುಡ್‌ನ ವಿನೋದ್ ರಾಜೇಂದ್ರನ್. ಅನಂತಪುರದ ಯುವ ಉದ್ಯಮಿ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ವಾಸಿಕ್ ಅಲ್‌ಸಾದ್ ಮಹದ್ ಪಿಕ್ಚರ್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ.