ಮಂಗಳೂರು, ಮಾ.26, ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯಾಗಿ ಮಾರ್ಪಾಟು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಕಟ್ಟಡವನ್ನು ಕೋವಿಡ್ ಸೋಂಕಿತರಾಗಿ ಮೀಸಲಿಡಲಾಗಿದೆ. ಆಸ್ಪತ್ರೆಯ 20 ಹಾಸಿಗೆಗಳ ಆಯುಷ್ ಕಟ್ಟಡದಲ್ಲಿ ಶಂಕಿತ ರೋಗಿಗಳನ್ನು ದಾಖಲಿಸಲಾಗುವುದು. ಈ ಪ್ರಕರಣದಲ್ಲಿ ಯಾವುದಾದರು ಪಾಸಿಟಿವ್ ಬಂದಲ್ಲಿ ಅವರನ್ನು ಸೂಪರ್ ಸ್ಪೆಷಾಲಿಟಿ ಕಟ್ಟಡದ ವಾರ್ಡಿಗೆ ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ಆಸ್ಪತ್ರೆಯಲ್ಲಿ ಬೇರೆ ಬೇರೆ ಕಾಯಿಲೆಗಳ ಚಿಕಿತ್ಸೆಗಾಗಿ ಒಳರೋಗಿಗಳಾಗಿ ದಾಖಲಾಗಿರುವ ಸುಮಾರು 218 ರೋಗಿಗಳನ್ನು ಹಂತ ಹಂತವಾಗಿ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಮೂರು ದಿನಗಳ ಒಳಗೆ ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದರು.ಖಾಸಗಿ ಆಸ್ಪತ್ರೆಯಲ್ಲಿರುವ ಕೊರೊನಾ ಶಂಕಿತನ್ನೂ ವೆನ್ಲಾಕ್ ಗೆ ದಾಖಲು ಮಾಡಲಾಗಿದೆ. ಅದೇ ರೀತಿ ಆಸ್ಪತ್ರೆಗೆ ಹೊರರೋಗಿ ಚಿಕಿತ್ಸೆಗೆ ಬರುವವರನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಈ ರೋಗಿಗಳಿಗೆ ವೆನ್ಲಾಕ್‌ನಲ್ಲಿ ಚಿಕಿತ್ಸೆ ನೀಡುವ ದರ ಪಟ್ಟಿಯಂತೆಯೇ ಚಿಕಿತ್ಸೆ ಮಾಡಲಾಗುವುದು.ನಿನ್ನೆ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಉಪಸ್ಥಿತರಿದ್ದರು.