ಮಂಗಳೂರು ಎಪಿಎಂಸಿ ಮಾರುಕಟ್ಟೆ ಅವ್ಯವಸ್ಥೆ ಪರಿಶೀಲಿಸಿದ ವೆಲ್ಫೇರ್ ಪಾರ್ಟಿ

ಮಂಗಳೂರು,  ಜೂ.22,ದ.ಕ. ಜಿಲ್ಲೆಯ ಎಲ್ಲೆಡೆಗಳಿಂದ ನಗರಕ್ಕೆ ಬರುವ ಗ್ರಾಹಕರು ಮತ್ತು  ವ್ಯಾಪಾರೋದ್ಯಮದ ಜನಗಳೆಲ್ಲರಿಗೂ ಕೊಡು, ಕೊಳ್ಳುವಿಕೆಗಳ ಕೇಂದ್ರ  ಸ್ಥಾನವೆಂಬ  ನೆಲೆಯಲ್ಲಿದ್ದ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಎಂದೇ ಅರಿಯಲ್ಪಟ್ಟ ಮಂಗಳೂರು ಕೇಂದ್ರ  ಮಾರುಕಟ್ಟೆಯನ್ನು ಇದೀಗ, ದೂರದ ಬೈಕಂಪಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ  (ಎಪಿಎಂಸಿ ಯಾರ್ಡ್) ಸ್ಥಳಾಂತರಿಸುವ ಅಂತಿಮ ಸಿದ್ಧತೆಯ ಬಗ್ಗೆ ಎದ್ದಿರುವ ವಿವಾದಗಳು  ಮತ್ತು ಎಪಿಎಂಸಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಖುದ್ದು ಪರಿಶೀಲನೆ ನಡೆಸುವ  ಸಲುವಾಗಿ,  ವೆಲ್ಫೇರ್ ಪಾರ್ಟಿ ಆಪ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ನಾಯಕರ  ತಂಡದಿಂದ ವೀಕ್ಷಣೆ ನಡೆಸಲಾಯಿತು. ಅವರು ಸ್ವಯಂ ಕಂಡುಕೊಂಡಂತೆ  ಮತ್ತು ಅಲ್ಲಿನ ವ್ಯಾಪರಸ್ಥರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಅರಿತುಕೊಂಡರು.ಎಪಿಎಂಸಿ  ಮಾರುಕಟ್ಟೆಯ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಗೊಂಡಿದೆಯಲ್ಲದೆ, ಆದರ ಮೇಲ್ಚಾವಣಿಯ  ಕಬ್ಬಿಣದ  ರಾಡುಗಳು ಕಾಣುತ್ತಿವೆ. ಚರಂಡಿಗಳು ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಸರಿಯಾದ  ಶೌಚಾಲಯಗಳ ವ್ಯವಸ್ಥೆಯೇ ಇಲ್ಲವಾಗಿದೆ, ಶುದ್ಧ ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ.  ಜತೆಗೆ ಬೈಕಂಪಾಡಿ ಕೈಗಾರಿಕಾ ವಲಯದಿಂದ ಬರುವ ರಾಸಾಯನಿಕ ಹೊಗೆ ಇತ್ಯಾದಿಗಳಿಂದಾಗಿ  ನೆಮ್ಮದಿಯ ಉಸಿರಾಟಕ್ಕೆ ಬೇಕಾಗಿರುವ  ಶುದ್ಧಗಾಳಿಯು ಕೂಡಾ, ಅಲಭ್ಯವಾಗಿರುವ  ದುರವಸ್ಥೆಯನ್ನು ಅಲ್ಲಿನ ಜನರು ಮುಂದಿಟ್ಟಿದ್ದು, ಇಂತಹ ಪರಿಸ್ಥಿತಿಯಲ್ಲಿ ವ್ಯಾಪಾರಿಗಳು  ಹೇಗೆ ಅಲ್ಲಿ ತಮ್ಮ ವ್ಯಾಪಾರ ಮಾಡಲು ಸಾಧ್ಯ? ಎಂದು ವೆಲ್ಫೇರ್ ಪಾರ್ಟಿ  ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಪ್ರಶ್ನಿಸಿದ್ದಾರೆ.

ಆದ್ದರಿಂದ  ಎಪಿಎಂಸಿ ಮಾರುಕಟ್ಟೆಗೆ ಸಂಬಂಧಿಸಿದ ಸರಕಾರಿ ಅಧಿಕಾರಿಗಳು ಕೂಡಲೇ  ಇಲ್ಲಿನ ಮೂಲಭೂತ  ಅಸೌಕರ್ಯಗಳ ಬಗ್ಗೆ ತಮ್ಮ ಗಮನಹರಿಸಿ ಆದಷ್ಟು ಬೇಗ ಇದರ ಪರಿಹಾರ ಮಾರ್ಗ ಗಳನ್ನು  ಕಂಡುಕೊಳ್ಳಬೇಕಾಗಿದೆಯಲ್ಲದೆ, ಇಲ್ಲಿನ ಕಟ್ಟಡಗಳನ್ನು ದುರಸ್ತಿ ಮಾಡಿ ವ್ಯಾಪಾರಿಗಳಿಗೆ  ಸರಿಯಾದ ವ್ಯವಸ್ಥೆಯನ್ನು ಮಾಡಿಕೊಡುವಂತೆ  ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದರು.ಒಂದೊಮ್ಮೆ  ನಮ್ಮ ಮನವಿಗೆ ಸ್ಪಂದಿಸದೆ ಎಪಿಎಂಸಿ ಮಾರುಕಟ್ಟೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ  ಮತ್ತು ಉಳಿದ ಎಲ್ಲಾ ವಿಷಯಗಳಲ್ಲಿಯೂ ಸಮರ್ಪಕವಾದ ವ್ಯವಸ್ಥೆಯನ್ನು ಸರಿಯಾದ ರೂಪದಲ್ಲಿ  ವ್ಯಾಪಾರಿಗಳಿಗೆ ಮಾಡಿಕೊಡದೆ ಹೋದಲ್ಲಿ, ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಮತ್ತು   ಸಾಮಾಜಿಕ ಕಾಳಜಿಯುಳ್ಳ ಇತರ ಎಲ್ಲಾ ಸಮಾನ ಮನಸ್ಕ  ಸಂಘಟನೆಗಳನ್ನೂ ಒಗ್ಗೂಡಿಸಿಕೊಂಡು,  ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಿದ್ದೇವೆ ಎಂದು ಅವರು ಎಚ್ಚರಿಸಿದರು. ಇದಲ್ಲದೆ,  ಅಲ್ಲಿನ ಜನರು ಹೇಳಿಕೊಳ್ಳುವಂತೆ, ಎ.ಪಿ.ಎಂ.ಸಿ.ಮಾರುಕಟ್ಟೆ ಪ್ರಾಂಗಣದೊಳಗೆ ಯಾವುದೇ  ಸಾಮಾನುಗಳನ್ನು ವ್ಯಾಪಾರಕ್ಕಾಗಿ ಒಳತರಬೇಕಾದರೆ ಮುಂದಿನ ದಿನಗಳಲ್ಲಿ ಒಂದು ಟನ್ ಗೆ 500  ರಿಂದ 1000 ರೂಪಾಯಿ ಪಾವತಿಸುವ ಯೋಜನೆಯೂ ಇದೆ ಎಂಬಂತಹ ಅಪಸ್ವರಗಳೂ ಕೂಡಾ ಕೇಳಿ  ಬರುತ್ತಿದ್ದು, ಸಣ್ಣಪುಟ್ಟ ವ್ಯಾಪಾರಿಗಳು ಇಷ್ಟು ದೊಡ್ಡ  ಮೊತ್ತ ಪಾವತಿಸುವುದಲ್ಲದೆ  ಸಾಲದ್ದಕ್ಕೆ ಎಂಬಂತೆ ಇಲ್ಲಿನ ಅನೇಕ ಸಮಸ್ಯೆಗಳೊಂದಿಗೆ ಜೀವ ಪಣಕಿಟ್ಟುಕೊಂಡು  ಜನತೆ  ಇಲ್ಲಿ ವ್ಯಾಪಾರ ಮಾಡಬೇಕಾಗುತ್ತದೆ. ಇಷ್ಟಾಗಿಯೂ, ನಮ್ಮ ವ್ಯಾಪಾರದಲ್ಲಿ ನಮಗೆ ಲಾಭ ಬಿಡಿ  ನಮ್ಮ ಎಲ್ಲಾ ಖರ್ಚನ್ನು ಕಳೆದು ನಾವು ನಮ್ಮ  ಖರೀದಿಗೆ ನೀಡಿದ ಹಣವನ್ನಾದರೂ ಇಲ್ಲಿನ  ವ್ಯಾಪಾರದಲ್ಲಿ ಪಡೆಯಲು ಅಸಾಧ್ಯ ಎಂದು ಅಲ್ಲಿದ್ದ ಕೆಲವು ವ್ಯಾಪಾರಿಗಳು ತಮ್ಮ ಅಳಲನ್ನು  ತೋಡಿಕೊಂಡದ್ದಾಗಿ  ಅವರು ತಿಳಿಸಿದರು.ಎಫ್ಐಟಿಯು  ಜಿಲ್ಲಾ ಕಾರ್ಯದರ್ಶಿ ದಿವಾಕರ್ ಬೋಳೂರು ಅವರು ಎಪಿಎಂಸಿ ಅಧ್ಯಕ್ಷರು ಮತ್ತು ಸಮಿತಿಯವರು   ಕೂಡಲೇ ಗಮನಹರಿಸಬೇಕು ಮತ್ತು ಜಿಲ್ಲಾಧಿಕಾರಿಗಳು ಇದಕ್ಕೆ ನಿರ್ದೇಶನ ನೀಡಬೇಕು ಎಂದು  ಆಗ್ರಹಿಸಿದರು.ಮಂಗಳೂರು ವಲಯ ವೆಲ್ಫೇರ್ ಪಾರ್ಟಿ ಅಧ್ಯಕ್ಷ ಎಸ್ ಎಂ ಮುತ್ತಲಿಬ್   ಮಾತಾಡಿ ಇಂತಹ ಕಟ್ಟಡದಲ್ಲಿ ವ್ಯಾಪಾರ ಮಾಡಬೇಕೆಂದರೆ ಹೇಗೆ ಸಾಧ್ಯ. ಇಲ್ಲಿ ಯಾವುದೇ  ಸೌಕರ್ಯ ಇಲ್ಲ ಯಾವುದೇ ವ್ಯವಸ್ಥೆ ಇಲ್ಲ.ಆದ್ದರಿಂದ ಕೂಡಲೇ ಇದನ್ನು ವ್ಯಾಪಾರಕ್ಕೆ  ಅನುಕೂಲವಾಗುವ ರೀತಿಯಲ್ಲಿ ಮಾಡಿಕೊಡಬೇಕೆಂದು ಆಗ್ರಹಿಸಿದರು. ಈ ತಂಡದಲ್ಲಿ ಪಕ್ಷದ ಮಾಜಿ  ಜಿಲ್ಲಾಧ್ಯಕ್ಷರಾದ ಝಾಹಿದ್ ಹುಸೇನ್, ಫ್ರಟರ್ನಿಟಿ ಮೂವ್ನೆಂಟ್ ರಾಜ್ಯಾದ್ಯಕ್ಷ ತಫ್ಲೀಲ್  ಉಪಸ್ಥಿತರಿದ್ದರು.