ಬೆಂಗಳೂರು, ಜ 6 ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳು ಬುಧವಾರ ಭಾರತ್ ಬಂದ್ ಗೆ ಕರೆ ನೀಡಿದ್ದು, ವಿವಿಧ ಸಂಘಟನೆಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಎಐಟಿಯುಸಿ, ಸಿಐಟಿಯು, ಐಎನ್ ಟಿಯುಸಿ, ಎಲ್ಪಿಎಫ್ ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಗಳು ಭಾರೀ ಮಟ್ಟದ ಬಂದ್ ಗೆ ಕರೆ ನೀಡಿವೆ. ಕೈಗಾರಿಕಾ ವ್ಯಾಪಾರ ಒಕ್ಕೂಟಗಳಿಂದ ಹಿಡಿದು ಮಹಿಳಾ ಮತ್ತು ರೈತರ ಸಂಘ-ಸಂಸ್ಥೆಗಳು, ಅನೇಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ವಿವಿಧ ಎಡಪಕ್ಷಗಳು ಮತ್ತು ಕೇಂದ್ರ ವ್ಯಾಪಾರ ಒಕ್ಕೂಟಗಳು ಮುಷ್ಕರಕ್ಕೆ ತಮ್ಮ ಬೆಂಬಲ ಘೋಷಿಸಿವೆ.
ಬಂದ್ ದಿನದಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎಸ್ಮಾ ಜಾರಿಗೊಳಿಸುತ್ತಿದ್ದು, ತುರ್ತು ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿಗಳು, ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಸರ್ಕಾರಿ ಸಾರಿಗೆ ಸಂಸ್ಥೆಗಳು, ಮೆಟ್ರೋ ಸೇವೆ ಎಂದಿನಂತೆ ಇರಲಿದೆ. ಆದರೆ ಕೆಲವು ಸೇವೆಗಳು ವ್ಯತ್ಯಯವಾಗಲಿವೆ.
ಎಐಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ವಿಜಯಭಾಸ್ಕರ್ ಮಾತನಾಡಿ, ಜ.8ರಂದು ಪುರಭವನದ ಮುಂಭಾಗದಿಂದ ಮೈಸೂರು ಬ್ಯಾಂಕ್ ಮೂಲಕ ಫ್ರಿಂಡ್ ಪಾರ್ಕಗೆ ತಲುಪಿ ಪ್ರತಿಭಟನಾ ಸಭೆ ನಡೆಸುವುದಾಗಿ ತಿಳಿಸಿದರು.
ಸಭೆಯಲ್ಲಿ 21 ಸಾವಿರ ರಾಷ್ಟವ್ಯಾಪಿ ಸಮಾನ ಕನಿಷ್ಟ ವೇತನ ನಿಗದಿ ಪಡಿಸಬೇಕು, ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಳಿಗಾಗಿ ಡಾ. ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಲಪಡಿಸುವುದು, ಆಥರ್ಿಕ ಹಿಂಜರಿತಕ್ಕೆ ಕಾರಣವಾಗಿರುವ ನೀತಿಗಳನ್ನು ಕೈಬಿಡಬೇಕು, ಉದ್ಯೋಗ ಸೃಷ್ಟಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವುದಾಗಿ ಅವರು ತಿಳಿಸಿದರು.