ಅಡಿಕೆ ಬೆಳೆಗಾರರ ಯಾವುದೇ ಸಮಸ್ಯೆಗಳಿಗೆ ನಾವು ಜೊತೆಯಾಗಿ ಇರುತ್ತೇವೆ: ಸಚಿವ ಪ್ರಹ್ಲಾದ್ ಜೋಶಿ

We stand by any problems of groundnut growers: Minister Prahlad Joshi

ಬೆಂಗಳೂರು 27: ಹವ್ಯಕ ಬ್ರಾಹ್ಮಣ ಸಮಾಜ ಮೂಲತಃ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಂದಿ. ನನ್ನ ಬಳಿ ಪ್ರಮುಖವಾಗಿ ಅಡಿಕೆ ಸಂಬಂಧಿತ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಾರೆ. ಅಡಿಕೆ ಕೇವಲ ಎಲೆ ಅಡಿಕೆಯಾಗಿ ತಿನ್ನಲು ಮಾತ್ರ ಬಳಕೆಯಾಗದೆ ಮದುವೆಯಿಂದ ಹಿಡಿದು ಶ್ರಾದ್ಧದವರೆಗೆ ಉಪಯೋಗವಾಗುತ್ತದೆ. ಅನೇಕ ರೀತಿಯ ವ್ಯತಿರಿಕ್ತ ವರದಿಗಳು ಅಡಿಕೆ ಬಗ್ಗೆ ಬಂದರೂ ಸಹ ಭಾರತ ಸರ್ಕಾರದ ಮಂತ್ರಿಯಾಗಿ ಅಡಿಕೆ ಬೆಳೆಗಾರರ ಯಾವುದೇ ಸಮಸ್ಯೆಗಳಿಗೆ ನಾವು ಜೊತೆಯಾಗಿ ಇರುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಅಖಿಲ ಹವ್ಯಕ ಮಹಾಸಭಾ 81‌ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಒಟ್ಟು ಹಿಂದೂ ಸಮಾಜವನ್ನು ನಾವು ಜೊತೆಯಾಗಿ ತೆಗೆದುಕೊಂಡು ಹೋಗಬೇಕಿದೆ. ಇಂದು ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಫ್ರೆಜೈಲ್ 5 ಎನ್ನುತ್ತಿದ್ದ ಆರ್ಥಿಕತೆ ಒಡೆದು ಹೋಗಬಹುದಾಗಿದ್ದ ಆರ್ಥಿಕತೆ ಸ್ಥಿತಿಯಿಂದ ಇಂದು ಜಗತ್ತಿನಲ್ಲಿ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯ ದೇಶವಾಗಿ ಇವತ್ತು ಹೊರಹೊಮ್ಮಿದೆ.

ಒಂದು ಕಾಲದಲ್ಲಿ ಆಮದು ಎನ್ನುತ್ತಿದ್ದ ಭಾರತದಲ್ಲಿ ಇಂದು ಮೊಬೈಲ್ ನಿಂದ ಹಿಡಿದು ರಕ್ಷಣಾ ಸಾಧನದವರೆಗೆ ರಫ್ತಿನ ಕೇಂದ್ರವಾಗಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ರಫ್ತಿನ ಕೇಂದ್ರ ಚೀನಾ ಎಂದು ಹೇಳುತ್ತಿದ್ದಲ್ಲಿ ಇಂದು ಭಾರತ ಅದನ್ನು ಹಿಂದಿಕ್ಕುವ ಸಾಧನೆ ತೋರಿಸುತ್ತಿದೆ. ಕೋವಿಡ್ ನಂತರ ಭಾರತದ ಆರ್ಥಿಕತೆಯ ಪುನರುತ್ಥಾನದ ಬಗ್ಗೆ ಜಗತ್ತು ಆಸಕ್ತಿಯಿಂದ ನೋಡುತ್ತಿದೆ ಎಂದರು.

ಬ್ರಾಹ್ಮಣ ಸಮುದಾಯದಲ್ಲಿ ಹವ್ಯಕ ಪಂಗಡದವರ ಸಂಖ್ಯೆ ಕ್ಷೀಣಿಸುತ್ತಿದೆ. ಪೀಠಕ್ಕೆ ಬಂದ 30 ವರ್ಷಗಳ ಹಿಂದೆ ಇದ್ದ ಹವ್ಯಕ ಸಮುದಾಯದವರ ಸಂಖ್ಯೆ ಈಗ ಅರ್ಧಕ್ಕಿಂತ ಕಡಿಮೆಯಾಗಿದೆ. ಇಂದಿನ ಯುವಜನಾಂಗ ಮದುವೆ, ಮಕ್ಕಳೆಂಬ ಜವಾಬ್ದಾರಿ ಹೊಂದುವುದರಿಂದ ವಿಮುಖರಾಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮಕ್ಕಳು ಹೊಂದುವುದು ಖುಷಿಯ ವಿಚಾರವಾಗಿದ್ದರೆ ಇಂದು ಹೊರೆ ಎಂದು ಭಾವಿಸುತ್ತಾರೆ. ಇಂತಹ ಆಲೋಚನೆ ಸಮಾಜದ ಬೆಳವಣಿಗೆಗೆ ಉತ್ತಮವಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಖೇದ ವ್ಯಕ್ತಪಡಿಸಿದರು.

ಅಪರೂಪದ ಗೋತಳಿಗಳನ್ನು ಉಳಿಸುವ ಅಭಿಯಾನದಂತೆ ಹವ್ಯಕ ಸಮುದಾಯಗಳನ್ನು ಉಳಿಸುವ ಅಭಿಯಾನವನ್ನು ಆರಂಭಿಸುತ್ತೇವೆ. ಅನೇಕ ಮಕ್ಕಳನ್ನು ಹೆತ್ತ ತಾಯಿಗೆ ಕಂಚಿ ಆಚಾರ್ಯರು ವೀರಮಾತ ಎಂಬ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು. ಅದೇ ರೀತಿ ಹವ್ಯಕ ಮಠದಲ್ಲಿಯೂ ಇನ್ನು ಆರಂಭಿಸಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ ಅಶ್ವತ್ಥನಾರಾಯಣ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.