ಸಮಾಜವಲ್ಲ ಮೊದಲು ನಾವೇ ಬದಲಾಗಬೇಕು: ಹೆಗ್ಡೆ

ಗುಳೇದಗುಡ್ಡ: ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಅನ್ಯಾಯ ಮಾಡುವವರಿಗೆ ಮನ್ನಣೆ ನೀಡಲಾಗುತ್ತದೆ. ಶ್ರೀಮಂತಿಕೆ, ಅಧಿಕಾರಕ್ಕೆ ಬಯಸುವ ಸಮಾಜ ಇವತ್ತಿನದಾಗಿದೆ. ಈ ವ್ಯವಸ್ಥೆ ಬದಲಾಗಬೇಕಿದೆ. ಸಮಾಜ ಅಷ್ಟೇ ಅಲ್ಲ ನಾವು ಬದಲಾಗಬೇಕು ಎಂದು ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಹೇಳಿದರು. 

      ಅವರು ಪಟ್ಟಣದಲ್ಲಿ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ದೇಶದಲ್ಲಿ ಜೈಲಿಗೆ ಹೋಗಿ ಬಂದವರನ್ನು ಅದ್ಧೂರಿಯಾಗಿ ಸ್ವಾಗತಿಸುವ ಪರಂಪರೆ ಹೆಚ್ಚಿದೆ. ಭ್ರಷ್ಟತೆಗೆ ಹೆಚ್ಚಿನ ಮನ್ನಣೆ ಸಿಗುತ್ತಿರುವುದು ಖೇದಕರವಾಗಿದೆ. ಇಂತಹ ಸಮಾಜದಲ್ಲಿ ನಾವಿದ್ದೇವೆ. ಇದನ್ನೆಲ್ಲ ನೋಡಿದರೆ ಸಮಾಜಕ್ಕೆ ನಾವು ಏನು ಕೊಡುತ್ತಿದ್ದೇವೆ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಹೇಳಿದರು.  

      ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ನಾವು ಮಾಡಬೇಕು. ಜನರೊಂದಿಗೆ ನಾವು ಬೆರೆತಾಗ ಸಮಸ್ಯೆ ಅರಿತುಕೊಳ್ಳಲು ಸಾಧ್ಯ. ಕೇವಲ ಹಣ ಮಾಡುವದಷ್ಟೇ ಮುಖ್ಯವಲ್ಲ. ಜನರಿಗೆ ಸರಿಯಾದ ನ್ಯಾಯ ಕೊಡಿಸಬೇಕು. ವೆಂಕಟಾಚಲಯ್ಯ ಅವರು ಬಂದ ಮೇಲೆ.

ಲೋಕಾಯುಕ್ತ ಹೆಚ್ಚು ಹತ್ತಿರವಾಯಿತು. ಲೋಕಾಯುಕ್ತದ ಮೇಲೆ ನಂಬಿಕೆ ಬಂದಿತು. ನಾನು ಕೂಡಾ ಅವರ ರೀತಿ ಪ್ರಯತ್ನಿಸಿದ್ದೇನೆ ಎಂದು ಹೇಳಿದರು. 

     ಇಂದು ಜೈಲಿಗೆ ಹೋಗಿ ಬಂದವರಿಗೆ ಹಾರವಷ್ಟೇ ಅಲ್ಲ ಸೇಬಿನ ಹಾರ ಹಾಕಿ ಅದ್ಧೂರಿ ಸ್ವಾಗತ ಕೊರುತ್ತಿರುವುದು ಒಂದು ರೀತಿ ನೀತಿಯಾಗಿದೆ. ಈ ರೀತಿ ರಾಜಕಾರಣಿಗಳಿಗೆ ಸೇಬಿನ ಹಾರ ಹಾಕುತ್ತಿರುವದಕ್ಕೆ ಸೇಬಿನ ದರ ಹೆಚ್ಚುತ್ತಿದೆ. ನಾನು ನ್ಯಾಯಾಧೀಶನಾಗಿದ್ದು ಆಕಸ್ಮೀಕ, ಅದೃಷ್ಠದಿಂದ ನ್ಯಾಯಾಧೀಶನಾದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಹೇಳಿದರು. 

      ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಕಿಶೋರ ಕುಮಾರ ಎಂ., ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್.ಮಿಟ್ಟಲಕೋಡ, ವಕೀಲರ ಸಂಘದ ಅಧ್ಯಕ್ಷ ಎ.ಬಿ.ಉದ್ನೂರ ಮಾತನಾಡಿದರು. 

ಇದೇ ಸಂದರ್ಭದಲ್ಲಿ ವಕೀಲರ ಸಂಘದಿಂದ ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. 

      ಸರಕಾರಿ ಅಭಿಯೋಜಕ ಎಸ್.ಬಿ.ನಾಯಕ, ನ್ಯಾಯವಾದಿಗಳಾದ ಶಕೀಲ ಕಂಟ್ರಾಕ್ಟರ್, ಮಲ್ಲಿಕಾಜರ್ುನ ತೇಲಸಂಗ, ಎಸ್.ಆರ್.ಬರಾಹಾನಪೂರ, ಜಿ.ಆಯ್.ಮೇಟಿ, ಜಿ.ಎಸ್.ರಾಮಪೂರ, ಕೆ.ಟಿ.ಪವಾರ, ಚಂದ್ರಶೇಖರ ಬೆಕಿನಾಳ, ಕೆ.ಆರ್.ರಾಯಚೂರ, ಟಿ.ಎಸ್.ಬೆನಕಟ್ಟಿ, ಇ.ಎಸ್.ಚೋಳಾ, ವೈ.ಬಿ.ಹೊಸಮನಿ, ಪಿ.ಆರ್.ಬಡಿಗೇರ, ರಾಠೋಡ, ತೋಳಮಟ್ಟಿ ಸೇರಿದಂತೆ ಇತರರು ಇದ್ದರು.