ಬೆಂಗಳೂರು ಫೆ ೧೪ : ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿ ಮೂರು ದಿನಗಳ ಹಿಂದೆ ನಡೆದ ಕಾರು ಅಪಘಾತ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಹಿರಿಯ ಬಿಜೆಪಿ ನಾಯಕ, ಕಂದಾಯ ಸಚಿವ ಆರ್. ಆಶೋಕ್, ಪ್ರಕರಣಕ್ಕೆ ಸಂಬಂಧಪಟ್ಟ ಕಾರಿಗೂ ತಮಗೂ ಯಾವುದೇ ಸಂಬಂಧ ಇಲ್ಲ, ಪೊಲೀಸರು ದಾಖಲಿಸಿರುವ ಎಫ್‌ಐಆರ್ ನಲ್ಲಿ ತಮ್ಮ ಪುತ್ರನ ಹೆಸರಿಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಅಪಘಾತಕ್ಕೀಡಾದ ಕಾರಿನಲ್ಲಿ ನಿಮ್ಮ ಪುತ್ರ ಇರಲಿಲ್ಲವೇ ಎಂಬ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರಕರಣ ಕುರಿತು ಪೊಲೀಸರ ತನಿಖೆ ನಡೆಯುತ್ತಿದೆ, ಈ ಹಂತದಲ್ಲಿ ತಾವು ಯಾವುದೇ ಹೇಳಿಕೆ ನೀಡುವುದಿಲ್ಲ ತನಿಖೆ ಮುಗಿದ ನಂತರ ಎಲ್ಲ ಮಾಹಿತಿಯೂ ಲಭ್ಯವಾಗಲಿದೆ ಎಂದು ಹೇಳಿದರು.
ಅಪಘಾತ ನಡೆಸಿದ ಕಾರಿನಲ್ಲಿ ಸಚಿವರ ಪುತ್ರ ಇದ್ದ ಎನ್ನಲಾಗುತ್ತಿದ್ದು, ಆತನಿಗೂ ಗಾಯಗಳಾಗಿದ್ದು, ಹೆಚ್ಚುವರಿ ಚಿಕಿತ್ಸೆಗೆಂದು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮರಿಯಮ್ಮನಹಳ್ಳಿ ತಾಂಡಾ ಮೂಲದ ರವಿನಾಯ್ಕ (೧೯), ಕಾರಿನಲ್ಲಿದ್ದ ಬೆಂಗಳೂರಿನ ಸಚಿನ್ (೨೭) ಎಂಬುವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಚಾಲಕ ರಾಹುಲ್ ಸೇರಿದಂತೆ ರಾಕೇಶ್, ಶಿವಕುಮಾರ್ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.