ಜುಲೈ 10ರಂದು ಬಸವೇಶ್ವರ ಹಾಗೂ ಐನಾಪುರ ಕಾಲುವೆಗಳಿಗೆ ನೀರು ಹರಿವು: ಶಾಸಕ ರಾಜು ಕಾಗೆ

ಜುಲೈ 10ರಂದು ಬಸವೇಶ್ವರ ಹಾಗೂ ಐನಾಪುರ ಕಾಲುವೆಗಳಿಗೆ ನೀರು ಹರಿವು: ಶಾಸಕ ರಾಜು ಕಾಗೆ Water release to Basaveshwara and Ainapura canals on July 10: MLA Raju Kage

ಲೋಕದರ್ಶನ ವರದಿ 

 ಕಾಗವಾಡ, ಜು.8: ಮತಕ್ಷೇತ್ರದ ಮಹತ್ವಾಕಾಂಕ್ಷಿ ಖಿಳೇಗಾಂವ್ ಬಸವೇಶ್ವರ ಹಾಗೂ ಐನಾಪುರ ಯಾತ ನೀರಾವರಿ ಯೋಜನೆಗಳ ಕಾಲುವೆಗಳಿಗೆ ಜುಲೈ 10ರಂದು ಬೆಳಿಗ್ಗೆ 10 ಗಂಟೆಯಿಂದ ನೀರು ಹರಿಸಲಾಗುವುದು ಎಂದು ಕಾಗವಾಡ ಶಾಸಕ ರಾಜು ಕಾಗೆ ತಿಳಿಸಿದ್ದಾರೆ.  

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಮಳೆಯ ಕೊರತೆಯಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ರೈತರ ಬೆಳೆಗಳಿಗೆ ತೊಂದರೆಯಾಗಿತ್ತು. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಹಿತದೃಷ್ಟಿಯಿಂದ ಎರಡೂ ಯೋಜನೆಗಳ ಕಾಲುವೆಗಳಿಗೆ ನೀರು ಬಿಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.  

ಖಿಳೇಗಾಂವ್ ಬಸವೇಶ್ವರ ಯಾತ ನೀರಾವರಿ ಯೋಜನೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗ ಪೂರ್ಣಗೊಂಡಿರುವ ಮೊದಲ ಹಂತದ ಕಾಲುವೆಗಳಿಗೆ ಹಾಗೂ ಐನಾಪುರ ಯಾತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.  

ಶೀಘ್ರದಲ್ಲೇ ಖಿಳೇಗಾಂವ್ ಯಾತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಯನ್ನೂ ಪೂರ್ಣಗೊಳಿಸಿ, ಮದಭಾವಿ ಹಾಗೂ ಅನಂತಪುರ ಹೋಬಳಿಯ ಗ್ರಾಮಗಳಿಗೂ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ.