ಬಜಾರ ರಸ್ತೆಯಲ್ಲಿ ನೀರಿನ ಹೊಂಡ

ಲೋಕದರ್ಶನ ವರದಿ

ಬೈಲಹೊಂಗಲ 05: ಪಟ್ಟಣ ಸೇರಿ  ಸುತ್ತಲಿನ ಗ್ರಾಮಗಳಲ್ಲ್ಲಿ ಸೋಮವಾರ ಮಧ್ಯ ರಾತ್ರಿ ಹಾಗೂ ಮಂಗಳವಾರ ಸಂಜೆ ಜೋರಾದ ಮಳೆ ಸುರಿದಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿದಿವೆ, ರಸ್ತೆಗಳಲ್ಲಿ, ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು.

    ರಾತ್ರಿ ಭಯಂಕರ ಗುಡುಗು, ಮಿಂಚಿನೊಂದಿಗೆ ಮೂರ್ನಾಲ್ಕು ಭಯಂಕರ ಸಿಡಿಲು ಪಟ್ಟಣದ ಹೊರವಲಯದಲ್ಲಿ ಅಪ್ಪಳಿಸಿದ್ದರಿಂದ ಜನತೆ ರಾತ್ರಿಯಿಡಿ ಹೆದರಿ ನಿದ್ದೆ ಮಾಡದ ಪ್ರಸಂಗ ಸಹ ನಡೆದಿದೆ. ಸಿಡಿಲಿನ ಅಬ್ಬರಕ್ಕೆ ಮಕ್ಕಳೊಂದಿಗೆ ಪಾಲಕರು ಸಹಿತ ಭಯಭೀತರಾಗಿ ಎಚ್ಚರ ಉಳಿದು ಜಾಗರಣೆ ಮಾಡುವಂತಾಯಿತು. 

  ಮಂಗಳವಾರ ಮುಂಜಾನೆ ಎಲ್ಲರ ಬಾಯಲ್ಲೂ ರಾತ್ರಿಯಾದ ಭಾರೀ ಮಳೆಯ ಹಾಗೂ ಗುಡುಗು, ಮಿಂಚು, ಸಿಡಿಲಿನ ಮಾತೆ ನಡೆದಿತ್ತು. ಪಟ್ಟಣದ ಕಲ್ಮಠಗಲ್ಲಿಯ ಹಳ್ಳದ ಮೇಲಿನ ಎತ್ತರದ ತೆಂಗಿನ ಮರಕ್ಕೆ ಸಿಡಿಲು ಅಪ್ಪಳಿಸಿದ್ದು ಮರ ಸುಟ್ಟು ಕರಕಲಾಗಿದೆ. ಸ್ಟೇಟ್ ಬ್ಯಾಂಕ್ ಶಾಖೆ ಸೇರಿ ಅನೇಕ ಸೋಸೈಟಿ, ಬ್ಯಾಂಕುಗಳ  ಕಂಪ್ಯೂಟರಗಳು ನಾಶವಾಗಿ ಮಂಗಳವಾರ ವ್ಯವಹಾರ ಮಾಡಲು ಅಡಚಣೆಯಾಯಿತು. ಬಜಾರ ರಸ್ತೆ ಸೇರಿ ಪಟ್ಟಣದ ಒಳ ರಸ್ತೆಗಳು ಕೆಟ್ಟು ಹಾಳಾಗಿದ್ದರಿಂದ ನೀರಿನ ಹೊಂಡಗಳು ನಿರ್ಮಾಣವಾಗಿ ಜನ ಸಂಚಾರಕ್ಕೆ ತೊಂದರೆಯಾಯಿತು.

  ಅನೇಕ ಅಂಗಡಿ ಮುಗ್ಗಟ್ಟುಗಳ, ಮನೆಗಳಲ್ಲಿ ಕಂಪ್ಯೂಟರ್, ಪ್ರೀಜ್ಡ, ಟಿವ್ಹಿ, ಟಿವ್ಹಿ ಸೆಟ್ ಆಪ್ ಬಾಕ್ಸ ನಾಶವಾಗಿವೆ. ಕೆಬಲ್, ವಿದ್ಯುತ್ತ ಸಂಪರ್ಕಗಳು ಕಡಿತಗೊಂಡಿದ್ದವು. ಇಷ್ಟಕ್ಕೆ ಮಳೆಯು ತನ್ನ ರೌದ್ರಾವತಾರ ನಿಲ್ಲಿಸದೆ ಮಂಗಳವಾರ ಮುಂಜಾನೆ ಬಿಸಿಲಿನ ನಂತರ ಸಂಜೆ ಸಹಿತ ಜೋರಾಗಿ ಸುರಿಯಿತು. ಅಲ್ಲಲ್ಲಿ ಅಲ್ಪ ಸ್ವಲ್ಪ ಮನೆಗಳ ಗೊಡೆ ಕುಸಿದಿವೆ. ಯಾವುದೆ ಪ್ರಾಣ ಹಾನಿಯಾಗಿಲ್ಲ ಎಂದು ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ಪತ್ರಿಕೆಗೆ ತಿಳಿಸಿದರು.