ಹಿಡಕಲ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಕೈಗಾರಿಕಾ ವಲಯಕ್ಕೆ ನೀರು: ಪಾದಯಾತ್ರೆ ಪ್ರತಿಭಟನೆ, ಸಚಿವ ಸತೀಶ ಜಾರಕಿಹೊಳಿಗೆ ಮನವಿ

Water from Hidkal Reservoir to Hubli Dharwad Industrial Area: Pedestrian protest, appeal to Minister

ರಾಯಬಾಗ 24: ಹಿಡಕಲ ರಾಜಾ ಲಖಮಗೌಡ ಜಲಾಶಯದಿಂದ ಅನಧಿಕೃತವಾಗಿ ಹುಬ್ಬಳ್ಳಿ ಧಾರವಾಡ ಕೈಗಾರಿಕಾ ವಲಯಕ್ಕೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಪ್ರೋ.ಎಂ.ಡಿ.ನಂಜುಂಡಸ್ವಾಮಿ ರೈತ ಸಂಘ ರಾಯಬಾಗ ತಾಲೂಕು ಘಟಕದಿಂದ ಸೋಮವಾರ ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಿಂದ ತಹಶೀಲ್ದಾರ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿ, ತಹಶೀಲ್ದಾರ ಸುರೇಶ ಮುಂಜೆ ಅವರ ಮೂಲಕ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರಿಗೆ ಮನವಿ ಸಲ್ಲಿಸಲಾಯಿತು. 

ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಈಗಾಗಲೇ ಹುಬ್ಬಳ್ಳಿ ಧಾರವಾಡ ಕೈಗಾರಿಕೆ ವಲಯಕ್ಕೆ ನವಿಲತೀರ್ಥ ಜಲಾಶಯದಿಂದ ನೀರು ಒದಗಿಸಲಾಗುತ್ತಿದೆ. ಈಗ ಹಿಡಕಲ ಜಲಾಶಯದಿಂದ ಮತ್ತೆ ನೀರು ಒದಗಿಸಿದರೆ ಬೆಳಗಾವಿ ಜಿಲ್ಲೆಯ ಜನರು ಮತ್ತು ರೈತರು ನೀರಿನ ಅಭಾವ ಎದುರಿಸಬೇಕಾಗುತ್ತದೆ. ಕೂಡಲೇ ಈ ಕಾಮಗಾರಿ ನಿಲ್ಲಿಸದೇ ಇದ್ದರೆ ಬೆಳಗಾವಿ ಜಿಲ್ಲೆಯ ರೈತರು ಮತ್ತು ಸಾರ್ವಜನಿಕರು ಕೂಡಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

ರಾಜ್ಯ ರೈತ ಮುಖಂಡ ಮಲ್ಲಿಕಾರ್ಜುನ ವಾಲಿ ಮಾತನಾಡಿ, ಕಾರ್ಖಾನೆಗಳ ಮಾಲೀಕರೊಂದಿಗೆ ಕೂಡಿಕೊಂಡಿರುವ ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳು ರೈತರಿಗೆ ಮೋಸ ಮಾಡುತ್ತಿದ್ದಾರೆ. ಕಾರ್ಖಾನೆ ಮಾಲೀಕರ ಹಿತಾಸಕ್ತಿಗಾಗಿ ರೈತರ ಮತ್ತು ಜನರ ಹಿತವನ್ನು ಬಲಿ ಕೊಡ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಹಿಡಕಲ್ ಜಲಾಶಯ ಈ ಭಾಗದ ರೈತರ ಜೀವ ನಾಡಿಯಾಗಿದೆ. ಈ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಕೈಗಾರಿಕೆ ವಲಯಕ್ಕೆ ನೀರು ಹರಿಸಿದರೆ, ಈ ಭಾಗದ ಜನ ಜಾನುವಾರುಗಳಿಗೆ ಮತ್ತು ರೈತರು ಮುಂಬರುವ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಎದುರಿಸುವುದು ನಿಶ್ಚಿತ ಎಂದರು.  

ಈ ಕಾಮಗಾರಿ ಕೈ ಬಿಡದೇ ಇದ್ದರೆ ಸರ್ಕಾರದ ವಿರುದ್ಧ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.  

ಬಾಕ್ಸ್‌ ಲೈನ್‌: ನಾಳೆ ಹುಕ್ಕೇರಿಯಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು.  

ಮಾಜಿ ಸಚಿವ ಶಶಿಕಾಂತ ನಾಯಿಕ, ತಾಲೂಕಾಧ್ಯಕ್ಷ ವಿಜಯ ಶ್ರೇಷ್ಠಿ, ಮಾಯಗೌಡಾ ಪಾಟೀಲ, ರಾಯಗೌಡಾ ಪಾಟೀಲ, ನಿಜಗುಣಿ ನಾವಿ, ಸತ್ಯಪ್ಪ ರಾಮತೀರ್ಥ, ಗುರುನಾಥ ಹೆಗಡೆ, ಮಹಾಲಿಂಗ ಹಂಜಿ, ತ್ಯಾಗರಾಜ ಕದಮ, ಶ್ರೀಶೈಲ ಸಾಬಾನೆ, ಅಪ್ಪಾಸಾಹೇಬ ಮಾನೆ, ಈರಗೌಡ ಪಾಟೀಲ, ಸಾವಂತ ಕೊಚೇರಿ, ದೀಲೀಪ ಸಮಾಜೆ, ರಾಮು ಬಸ್ತವಾಡೆ, ಸುಲ್ತಾನ ಪೂಜೇರಿ, ಕಲಗೌಡಾ ಪಾಟೀಲ, ಮಾಯಪ್ಪ ಲೋಕೂರೆ, ರಮೇಶ್ ಪಾಟೀಲ, ಶ್ರವಣಕುಮಾರ ದೇವಮಾನ ಸೇರಿದಂತೆ ನೂರಾರು ರೈತರು ಇದ್ದರು.