ಕೃಷ್ಣೆಗೆ ನೀರು: ಸಿಎಂ ಭೇಟಿಯಾದ ಶಾಸಕ ಶ್ರೀಮಂತ ಪಾಟೀಲ

ಕಾಗವಾಡ 16: ಕೃಷ್ಣಾ ನದಿ ಬತ್ತಿಹೋಗಿ ಎರಡು ತಿಂಗಳು ಗತಿಸಿವೆ. ನದಿಗೆ ನೀರು ಇಲ್ಲದೇ ಹೋಗಿದ್ದರಿಂದ ಜನ-ಜಾನುವಾರಗಳಿಗೆ ಆಗುತ್ತಿರುವ ತೊಂದರೆ ಭೀಷಣವಾಗಿದೆ. ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ನೀರಿಗಾಗಿ ಜೀವ ಹಾನಿಯಾಗುವ ಭಯ ಉಂಟಾಗಿದೆ. ಇದನ್ನು ಗಮನಿಸಿ ರಾಜ್ಯದ ತಾವು ಮುಖ್ಯಮಂತ್ರಿಯಾಗಿದ್ದು, ಯಾವ ಕಾಲಕ್ಕೆ ಕೃಷ್ಣಾ ನದಿಯಲ್ಲಿ ನೀರು ಹರಿಸಲೆಬೇಕೆಂಬ ಪಟ್ಟಹಿಡಿದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಬೇಡಿಕೆ ಮಂಡಿಸಿದರು.

ಗುರುವಾರ ದಿ. 16ರಂದು ಬೆಂಗಳೂರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಇವರನ್ನು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ರೈತ ಮುಖಂಡರು ಭೇಟಿಯಾಗಿ ನೀರಿಗಾಗಿ ಆಗಿರುವ ತೊಂದರೆಗಳನ್ನು ವಿವರವಾಗಿ ಹೇಳಿದರು.

ಕಾಗವಾಡ ಮತ್ತು ಅಥಣಿ ಮತಕ್ಷೇತ್ರದ ಜನತೆಗೆ ಜೀವನಾಡಿಯಾಗಿರುವ ಕೃಷ್ಣಾ ನದಿ ಬತ್ತಿಹೋಗಿದ್ದರಿಂದ ಪೂರ್ವಭಾಗದ ಜನತೆ, ಈವರೆಗೆ ಬರ ಎದುರಿಸುತ್ತಾ ಬಂದಿದ್ದಾರೆ. ಈಗ ನದಿ ತೀರದ ಜನರು ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಈವರೆಗಿನ ಇತಿಹಾಸದಲ್ಲಿ ಕಾಗವಾಡ ಕ್ಷೇತ್ರದ ನದಿ ತೀರದಲ್ಲಿರುವ ಉಗಾರ, ಕುಸನಾಳ, ಮೊಳವಾಡ, ಐನಾಪೂರ, ಸೇರಿದಂತೆ ಅನೇಕ ಗ್ರಾಮದ ಜನತೆ ನೀರಿಲ್ಲದ ಕಹಿ ಅನುಭವ ಎದುರಿಸುತ್ತಿದ್ದಾರೆ.

ಇಲ್ಲಿಯ ಜನತೆ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ತಾಲೂಕಾಧಿಕಾರಿಗಳು ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ, ಇದೇ ಭಾಗದಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ಇದ್ದಿದ್ದರಿಂದ ನೆರೆಯ ಮಹಾರಾಷ್ಟ್ರದ ಏತ ನೀರಾವರಿ ಯೋಜನೆಗಳಿಂದ ನೀರು ಪೂರೈಸುತ್ತಿದ್ದಾರೆ. ಸ್ಥಿತಿ ಗಂಭೀರಗೊಳ್ಳುತ್ತಿದೆ.

ಬರುವ ಮೂರು ದಿನಗಳಲ್ಲಿ ಮಹಾರಾಷ್ಟ್ರದ ಕೊಯ್ನಾ, ಕಾಳಮ್ಮವಾಡಿ, ಅಥವಾ ಕನರ್ಾಟಕದ ಹಿಡಕಲ ಆನೆಕಟ್ಟೆಯಿಂದ ಕೃಷ್ಣೆಗೆ ನೀರು ಹರಿಸಿ ಜನರ ನೀರಿನ ದಾಹ ತೀರಿಸಲು ಮುಂದಾಗಿರಿಯೆಂದು ಶಾಸಕ ಶ್ರೀಮಂತ ಪಾಟೀಲ ಮುಖ್ಯಮಂತ್ರಿಗಳಿಗೆ ಮನವಿ ಮುಖಾಂತರ ಎಚ್ಚರಿಕೆ ನೀಡಿದ್ದಾರೆ.

ನೀರು ಬಿಡುವರೆಗೆ ಕ್ಷೇತ್ರಕ್ಕೆ ಹೋಗಲ್ಲಾ:

ಲೋಕಸಭಾ ಚುನಾವಣಾ ಪೂರ್ವದಲ್ಲಿ ನೀರಿನ ಸಮಸ್ಯೆ ಅರಿತು ಸಂಸದ ಪ್ರಕಾಶ ಹುಕ್ಕೇರಿ ಮತ್ತು ನನ್ನೊಂದಿಗೆ ಕೃಷ್ಣಾ ನದಿ ವ್ಯಾಪ್ತಿಯ ಶಾಸಕರು ಸಕರ್ಾರ ಗಮನಕ್ಕೆ ತಂದು ನೀರಿನ ವ್ಯವಸ್ಥೆಗಾಗಿ ಪ್ರಯತ್ನಿಸಿದ್ದೇವೆ. ಪ್ರಾರಂಭದಲ್ಲಿ ಇದಕ್ಕೆ ತೊಂದರೆಯಿರಲಿಲ್ಲಾ. ಬಳಿಕ ಏನಾಯ್ತು ಗೊತ್ತಾಗಲಿಲ್ಲಾ. ನೀರಿನ ಸಮಸ್ಯೆ ರಾಜ್ಯದ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಜನರ ಮೂಲಭೂತ ಹಕ್ಕು ಆಗಿರುವ ನೀರನ್ನು ಯಾವುದೇ ಕಾಲಕ್ಕೆ ಪೂರೈಸುವ ಜವಾಬ್ದಾರಿ ಎಲ್ಲರದಾಗಿದೆಯೆಂದು ಶಾಸಕ ಶ್ರೀಮಂತ ಪಾಟೀಲ ತಿಳಿಸಿ, ನದಿಗೆ ನೀರು ಹರಿವವರೆಗೆ ನಾನು ಕ್ಷೇತ್ರಕ್ಕೆ ಹೋಗಲ್ಲಾ ಎಂದು ಮುಖ್ಯಮಂತ್ರಿಗೆ ನೇರವಾಗಿ ಹೇಳಿದ್ದೇನೆ ಎಂದು ತಿಳಿಸಿದರು.

ಸಿದ್ಧರಾಮಯ್ಯಾ ಇವರ ಗಮನಕ್ಕೆ ನೀರಿನ ಸಮಸ್ಯೆ:

ಮಾಜಿ ಮುಖ್ಯಮಂತ್ರಿ, ಪಕ್ಷದ ಮುಖಂಡರಾದ ಸಿದ್ಧರಾಮಯ್ಯಾ ಇವರಿಗೆ ಶಾಸಕ ಶ್ರೀಮಂತ ಪಾಟೀಲ ಇವರು ಕೃಷ್ಣಾ ನದಿ ಬತ್ತಿಹೋಗಿರುವ ಬಗ್ಗೆ ವಿವರವಾಗಿ ಮಾಹಿತಿ ನೀಡಿ, ನೀರು ಹರಿಸಲು ಬಹಳಷ್ಟು ತಡವಾಗಿದೆ. ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ತಾವು ಮಧ್ಯಸ್ತಿಕೆ ವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಕೇಳಿದಾಗ ಸಿದ್ಧರಾಮಯ್ಯಾ ಇವರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅವರದೆ ಧಾಟಿಯಲ್ಲಿ ಎಚ್ಚರಿಕೆ ನೀಡಿದ್ದಾರೆಯೆಂದು ಹೇಳಿದರು.

ಶಾಸಕರೊಂದಿಗೆ ಅಥಣಿಯ ಖ್ಯಾತ ನ್ಯಾಯವಾದಿ ಬಿ.ಎ.ಚವ್ಹಾಣ, ರೈತ ಮುಖಂಡ ದಾದಾ ಪಾಟೀಲ, ಮಾಜಿ ಜಿಪಂ ಸದಸ್ಯ ಅಪ್ಪಾಸಾಹೇಬ ಅವತಾಡೆ, ಅಬ್ದುಲ್ ಬಾರಿ ಮುಲ್ಲಾ, ಸೇರಿದಂತೆ ಅನೇಕರು ಇದ್ದರು.