ಲೋಕದರ್ಶನ ವರದಿ
ರಾಯಬಾಗ 19: ತಾಲೂಕಿನಲ್ಲಿ ನಿನ್ನೆ (ಶುಕ್ರವಾರ) ರಾತ್ರಿ ಸುರಿದ ಭಾರಿ ಮಳೆಯಿಂದ ಬ್ರಿಜ್, ಬಾಂದಾರ ಮತ್ತು ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದೂ, ತೆಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಶನಿವಾರ ಸಹಿತ ಮಳೆ ಮುಂದುವರೆದಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ.
ತಾಲೂಕಿನ ನಂದಿಕುರಳಿ ಗ್ರಾಮದಲ್ಲಿರುವ ಕೆರೆ ಚುಮ್ಮುತ್ತಿದ್ದು, ಗ್ರಾಮ ಪಂಚಾಯತಿ ಹತ್ತಿರದ ಬ್ರಿಜ್ ಮತ್ತು ಬಾಂದಾರ ಮೇಲೆ ಹರಿಯುತ್ತಿರುವ ನೀರಿನ ರಭಸಕ್ಕೆ ರಸ್ತೆ ಡಾಂಬರ್ ಕಿತ್ತು ಹೋಗಿದೆ. ತಾಲೂಕಿನ ನಸಲಾಪೂರ, ಬಾವನಸೌಂದತ್ತಿ, ದಿಗ್ಗೇವಾಡಿ, ಗುಂಡವಾಡ, ಶಿರಗೂರ, ಭಿರಡಿ, ಚಿಂಚಲಿ, ಮೊರಬ ಸೇರಿದಂತೆ ಬಹುತೇಕ ಎಲ್ಲೆಡೆ ಧಾರಾಕಾರ ಮಳೆ ಸುರಿದಿದೆ.
ತಾಲೂಕಿನ ನದಿ ತೀರದ ಜನರು ಪ್ರವಾಹ ಸಂಕಷ್ಟದಿಂದ ಹೊರ ಬರುತ್ತಿದ್ದಂತೆ, ಮತ್ತೆ ಈಗ ಸುರಿಯುತ್ತಿರುವ ಮಳೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಈಗ ಸುರಿಯುತ್ತಿರುವ ಮಳೆಯಿಂದ ಪ್ರವಾಹದಲ್ಲಿ ಮುಳಗಿದ್ದ ಅಳಿದುಳಿದ ಮನೆಗಳು ಕುಸಿದು ಬೀಳುತ್ತಿವೆ.
ಅಲ್ಪಾವಧಿ ಬೆಳೆಗಳಾದ ಗೋವಿನಜೋಳ, ಶೇಂಗಾ, ಸೋಯಾಬೀನ್ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುವ ಆತಂಕ ರೈತರಲ್ಲಿ ಮನೆ ಮಾಡಿದೆ. ಇದೇ ರೀತಿ ಮೋಡಕವಿದ ವಾತಾವರಣ ಮುಂದುವರೆದರೆ ಬೆಳೆಗಳಿಗೆ ರೋಗ ಹರಡುವ ಭಯ ರೈತರನ್ನು ಕಾಡುತ್ತಿದೆ.
ಪ್ರವಾಹದಿಂದ ಬೆಳೆಗಳನ್ನು ಕಳೆದುಕೊಂಡು ರೈತರು, ತಮ್ಮ ಜಮೀನುಗಳನ್ನು ಸ್ವಚ್ಛ ಮಾಡಿ, ಭೂಮಿ ಹದ ಮಾಡಿ ಮತ್ತೆ ಬೆಳೆಗಳನ್ನು ಬೆಳೆಯಲು ಈಗ ಸುರಿಯುತ್ತಿರುವ ಮಳೆ ತೋಡಕು ಉಂಟುಮಾಡುತ್ತಿದೆ.ಗೋವಿನ ಜೋಳ ಬೆಳೆಗೆ ಲದ್ದಿ ಹುಳ ಮತ್ತು ಕಬ್ಬಿಗೆ ಕಾಂಡಕೊರೆತ ಹುಳು ಹರಡುವ ಭೀತಿಯಲ್ಲಿ ರೈತರಿದ್ದಾರೆಂದು ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಆತಂಕ ವ್ಯಕ್ತಪಡಿಸಿ, ಕೃಷ್ಣಾ ನದಿ ಪ್ರವಾಹದಿಂದ ಮತ್ತು ಈಗ ಸುರಿಯುತ್ತಿರುವ ಮಳೆಯಿಂದ ರೈತರ ಜೀವನ ನರಕಸದೃಷ್ಯವಾಗಿದ್ದು, ಸರಕಾರ ರೈತರ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.