ನೀರು, ನೈರ್ಮಲ್ಯ-ಸ್ವಚ್ಚತೆ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ

ಚನ್ನಮ್ಮ ಕಿತ್ತೂರು 05:  ಮಹಿಳೆಯರು ಸ್ವಚ್ಛತೆ, ಶುದ್ಧ ನೀರು, ಗಾಳಿ, ಪರಿಸರ, ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದರೆ ಅನಾರೋಗ್ಯ ಸಮಸ್ಯೆ ದೂರವಿಡಬಹುದು ಎಂದು  ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ  ಶಿವಾನಂದ ಮಾಸ್ತಿಹೊಳಿ ಹೇಳಿದರು. 

ಇಲ್ಲಿಯ ರುಕ್ಮಿಣಿ ಪಾಡುರಂಗ ಕಲ್ಯಾಣ ಮಂಟಪದಲ್ಲಿ ಇಲ್ಲಿನ ಗ್ರಾಮೀಣ ಕೂಟ ಕಿರು ಹಣಕಾಸು ಸಂಸ್ಥೆ ಮತ್ತು ನವ್ಯದಿಶಾ ಸೇವಾ ಸಂಸ್ಥೆ ಇವರ ಸಹಯೋಗದೊಂದಿಗೆ ನಡೆದ  ನೀರು, ನೆ?ರ್ಮಲ್ಯ ಮತ್ತು ಸ್ವಚ್ಚತೆ  ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಚ್ಚತೆ ಕಾಪಾಡಲು ಪ್ರತಿ ಮನೆಯಲ್ಲಿ ಶೌಚಾಲಯ ಬಳಕೆ ಮಾಡಬೇಕು. ಹಣ್ಣು, ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆದು ಬಳಕೆ ಮಾಡುವುದು ಸೂಕ್ತ. ಊಟದ ಮೊದಲು ಮತ್ತು ಶೌಚಾಲಯ ಬಳಸಿದ ನಂತರ ಕೈಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ಕಾಯಿಲೆ ಬಾರದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಆಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಆರೋಗ್ಯ ಮತ್ತು ಸ್ವಚ್ಛತೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಬಳಕೆ ಮೊದಲಾದ ಮೂಲ ವಿಷಯಗಳ ಕುರಿತು ಗ್ರಾಮೀಣ ಕೂಟದ ಸದಸ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆ ಮನೆಗೂ ತೆರಳಿ ಕುಡಿಯುವ ನೀರಿನ ಬಳಕೆ ಮತ್ತು ಶೌಚಾಲಯದ ನಿರ್ಮಾಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಾಮಾಜಿಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ನವ್ಯ ದಿಶಾ ಸಂಸ್ಥೆಯ ಬಸವರಜ ಅರಬಾಂವಿ ಹೇಳಿದರು. 

ಪಟ್ಟಣ ಪಂಚಾಯತಿ ಕಿರಿಯ ಆರೋಗ್ಯ ನಿರೀಕ್ಷಕರು ಪೂಜಾ ಇಚ್ಚಂಗಿ ಮಾತನಾಡಿ, ಮಹಿಳೆಯರು ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಕಸವನ್ನು ಬೇಕಾಬಿಟ್ಟಿಯಾಗಿ ಎಸೆಯುವದನ್ನು ಬಿಟ್ಟು  ಪಟ್ಟಣ ಪಂಚಾಯತಿ ವಾಹನಗಳಲ್ಲಿ ಕಸ ನೀಡಬೇಕು.  ಎಲ್ಲಾ ವರ್ಗದ ಜನರು ಶೌಚಾಲಯ ಬಳಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ಎಂದು ಹೇಳಿದರು. 

ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕ ಮಂಜಪ್ಪ ಮಾತನಾಡಿ, ಗ್ರಾಮೀಣ ಕೂಟದ ಸದಸ್ಯರಿಗೆ ಸ್ವಚ್ಛತೆ ಮತ್ತು ಆರೋಗ್ಯದ ಅರಿವು ಮೂಡಿಸುವ ಸಲುವಾಗಿ ಗ್ರಾಮೀಣ ಕೂಟದ ವತಿಯಿಂದ ಶೌಚಾಲಯ ನಿರ್ಮಾಣಕ್ಕೆ ಸಾಲ ಸೌಲಭ್ಯ ಹಾಗೂ ಕುಡಿಯುವ ನೀರಿಗಾಗಿ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಸುರಕ್ಷಿತ ಕುಡಿಯುವ ನೀರು, ನೈರ್ಮಲ್ಯ, ಹಣಕಾಸು ನಿರ್ವಹಣೆ ಹಾಗೂ ಆಂತರಿಕ ವಾಯು ಮಾಲಿನ್ಯ ನಿಯಂತ್ರಣದ ಕುರಿತು ಕಿರು ಹೊತ್ತಗೆಗಳನ್ನು ವಿತರಿಸುವ ಮೂಲಕ ಅವುಗಳ ಪ್ರಾಮುಖ್ಯತೆಯನ್ನು ತಿಳಿಸಲಾಗುತ್ತಿದೆ ಎಂದು ಹೇಳಿದರು. 

ಬ್ರಾಂಚ್ ವ್ಯವಸ್ಥಾಪಕ ಮಾರುತಿ, ನವದೀಶಾ ಸಂಸ್ಥೆಯ ಅರುಣಕುಮಾರ, ಕಂದಾಯ ಇಲಾಖೆ ಅಧಿಕಾರಿ ಎಸ್.ಬಿ.ಪಾಟೀಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.