ವಕ್ಫ್ ಬೋರ್ಡ್ ವಿಚಾರ: ಕಾನೂನು ಸುವ್ಯವಸ್ಥೆಗೆ ಸರ್ಕಾರ ಹೊಣೆ: ಆರ್. ಅಶೋಕ್‌

Waqf Board issue: Government responsible for law and order

ಮೈಸೂರು 2: ‘ರಾಜ್ಯದಲ್ಲಿ ವಕ್ಫ್ ಬೋರ್ಡ್ ಕ್ಯಾನ್ಸರ್ ನಂತೆ ಬಡವರ ಜಮೀನು ನುಂಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತ ಬಹುಸಂಖ್ಯಾತರನ್ನು ನಿರ್ಲಕ್ಷ್ಯ ಮಾಡಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟರೇ ಸರ್ಕಾರವೇ ಹೊಣೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಎಚ್ಚರಿಸಿದರು.

ವಕ್ಫ್‌ ಹೆಸರಿಗೆ ದಾಖಲೆ ಬದಲಾವಣೆ ಆಗಿರುವ ಜಮೀನುಗಳ ಸಂತ್ರಸ್ಥರ ಸಮಸ್ಯೆ ಆಲಿಸಲು ಬಿಜೆಪಿ ತಂಡವು ಮೈಸೂರಿಗೆ ಸೋಮವಾರ ಭೇಟಿ ನೀಡಿದ್ದು, ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಮೈಸೂರಿನ ಮುನೇಶ್ವರ ನಗರ ಮುಲ್ಲಾ ನಗರವಾಗಿ ಬದಲಾಗಿದ್ದು, ಇಲ್ಲಿನ ಬಸವಣ್ಣನ ಮಠದ ಆಸ್ತಿಯನ್ನೂ ವಕ್ಫ್‌ ನುಂಗುತ್ತಿದೆ. ದೇಗುಲ– ಮಠ, ಶ್ರೀಸಾಮಾನ್ಯರ ಆಸ್ತಿಗೆ ಕಿಂಚಿತ್ತು ಧಕ್ಕೆಯಾದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದರು.

‘ಮನಮೋಹನ್ ಸಿಂಗ್‌ ಕಾಲದಲ್ಲಿ ಜಾರಿಗೊಂಡ ವಕ್ಫ್‌ ಕಾಯ್ದೆಗೆ ಕೇಂದ್ರ ಎನ್‌ಡಿಎ ಸರ್ಕಾರ ತಿದ್ದುಪಡಿ ತರುತ್ತಿದ್ದು, ಆದಷ್ಟು ಶೀಘ್ರ ಇದನ್ನು ಜಾರಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕೆಲವು ಅಧಿಕಾರಿಗಳು ನೋಟಿಸ್ ಕೊಟ್ಟಿರಬಹುದು. ಆದರೆ ರೈತರಿಗೆ ಬೆದರಿಸುವ ಧೈರ್ಯ ಮಾಡಿರಲಿಲ್ಲ. ಜಮೀರ್ ಸಿದ್ದರಾಮಯ್ಯ ಹೆಸರು ಹೇಳಿಕೊಂಡು ಅಧಿಕಾರಿಗಳನ್ನು ಬೆದರಿಸಿ, ಜಿಲ್ಲೆಗೊಂದು ಸಭೆ ನಡೆಸಿ ವಕ್ಫ್‌ ಆಸ್ತಿ ಎಂದು ದಾಖಲೆ ಬದಲಿಸಿದ್ದಾರೆ. ರೈತರಿಗೆ ನೋಟಿಸ್‌ ಕೊಟ್ಟ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು’ ಎಂದರು.

ಚಂದ್ರಶೇಖರ ಸ್ವಾಮೀಜಿಗೆ ಪೊಲೀಸ್ ನೋಟಿಸ್ ಕುರಿತು ಪ್ರತಿಕ್ರಿಯಿಸಿ ‘ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರಿಗೆ ಬಿರಿಯಾನಿ ಕೊಟ್ಟು ಕಳುಹಿಸಿದವರಿಗೆ ಸ್ವಾಮೀಜಿಗೆ ಕನಿಷ್ಠ ನೀರು ಕೊಡಲು ಆಗಿಲ್ಲ‌. ಡಿ.ಜೆ.ಹಳ್ಳಿ ಗಲಭೆ, ಹುಬ್ಬಳ್ಳಿ ಗಲಭೆಯಲ್ಲಿ ಪಾಲ್ಗೊಂಡವರಿಗೆ ಸರ್ಕಾರ ಕ್ಲೀನ್ ಚಿಟ್‌ ನೀಡಿದೆ. ಸ್ವಾಮೀಜಿ ಅವರನ್ನು ಮುಟ್ಟಿದರೆ ಇಡೀ ಸಮುದಾಯ ಅವರ ಪರ ನಿಲ್ಲಲಿದೆ’ ಎಂದರು.

‘ಯತ್ನಾಳ ಅವರಿಗೆ ಪಕ್ಷ ನೋಟಿಸ್ ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿ ರಾಷ್ಟ್ರೀಯ ನಾಯಕರು ಒಂದು ವಾರದಲ್ಲಿ ಈ ಪ್ರಕರಣವನ್ನು ಸುಖ್ಯಾಂತ ಮಾಡಲಿದ್ದಾರೆ’ ಎಂದರು.

ಬಿಜೆಪಿ ಮುಖಂಡ ಸಿ.ಟಿ. ರವಿ ‘ಸಿದ್ದರಾಮಯ್ಯ ಸ್ವತಃ ವಕೀಲರು. ವಕ್ಫ್‌ ಕಾಯ್ದೆ ಸಂವಿಧಾನಬಾಹಿರ ಹೌದೋ, ಅಲ್ಲವೋ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಕೇಂದ್ರದ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಸಿದ್ದರಾಮಯ್ಯ ಅವರಿಗೆ ತನ್ನ ಸ್ವಂತ ಜಿಲ್ಲೆಯ ಜನರ ನೋವನ್ನೇ ಆಲಿಸಲು ಅಗದೇ? ಜಿಲ್ಲೆಯಲ್ಲಿ ವಕ್ಫ್ ಭೂತ ಬಿಟ್ಟು ಹೋಗುತ್ತಿರ?’ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಟಿ.ಎಸ್. ಶ್ರೀವತ್ಸ, ಪರಿಷತ್‌ ಸದಸ್ಯ ರವಿಕುಮಾರ್, ಮುಖಂಡರಾದ ಹಾಲಪ್ಪ ಆಚಾರ್, ಎಲ್. ನಾಗೇಂದ್ರ, ಪ್ರೀತಂ ಗೌಡ, ರಾಜೇಂದ್ರ, ಎಲ್.ಆರ್.‌ ಮಹದೇವಸ್ವಾಮಿ ಇದ್ದರು.