ಸೌದಿಯಿಂದ ಹಿಂದಿರುಗಿದ ಮಹಿಳೆಗೆ ಜ್ವರ: ಹಿಮ್ಸ್ ಆಸ್ಪತ್ರೆಗೆ ದಾಖಲು

ಹಾಸನ,ಮಾ.11, ಸೌದಿ ಅರೇಬಿಯಾದ ಮಕ್ಕಾ ಪಟ್ಟಣದಿಂದ ನಗರಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಅದು ಕೊರೋನಾ ಸೋಂಕು ಇರಬಹುದೇ ಎಂಬ ಆತಂಕದಿಂದ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಹಿಳೆ ಕಳೆದ ವಾರ ಮಕ್ಕಾದಿಂದ ನಗರಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷಿಸಿ ಕಳುಹಿಸಲಾಗಿತ್ತು. ಆದರೆ ಮನೆಗೆ ಬಂದ ಬಳಿಕ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಿಮ್ಸ್ ಆಸ್ಪತ್ರೆಗೆ ತಪಾಸಣೆಗೆ ಬಂದಾಗ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಪ್ರತ್ಯೇಕ ವಾರ್ಡ್ನಲ್ಲಿ ದಾಖಲಿಸಿ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಪ್ರಯೋಗಾಲಯದಿಂದ ವರದಿ ಬಂದ ನಂತರವಷ್ಟೇ ಅವರ ಸೋಂಕಿನ ಬಗ್ಗೆ ಗೊತ್ತಾಗಲಿದೆ. ವಾರದ ಹಿಂದೆಯೂ ಇದೇ ಆಸ್ಪತ್ರೆಗೆ ಶಂಕಿತ ಕೊರೋನಾ ಸೋಂಕಿನ ವ್ಯಕ್ತಿಯೊಬ್ಬರು ದಾಖಲಾಗಿದ್ದರು. ಆದರೆ ಅವರ ರಕ್ತ ಪರೀಕ್ಷೆಯ ವರದಿಯಲ್ಲಿ ಯಾವುದೇ ಸೋಂಕು ಕಂಡುಬಾರದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು.