ನವದೆಹಲಿ, ಫೆ 17 ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡರ್ ಹುದ್ದೆ ನೀಡಬೇಕೆಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಮಹಿಳಾ ಅಧಿಕಾರಿಗಳನ್ನು ಕಮಾಂಡರ್ ಹುದ್ದೆಗೆ ನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಜಾರಿಗೊಳಿಸದ ಕೇಂದ್ರದ ಕ್ರಮದ ಬಗ್ಗೆ ನ್ಯಾಯಾಲಯ ಅಸಮಾಧಾನ ಹೊರಹಾಕಿದೆ. ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಕಮೀಷನ್ ಹುದ್ದೆ ಹುದ್ದೆ ನೀಡಬೇಕು.
ಈ ಬಗ್ಗೆ ಕೇಂದ್ರ ಸರ್ಕಾರ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಮಹಿಳಾ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ಪುರುಷರ ನೇಮಕಾತಿಯ ನೀತಿ, ನಿಬಂಧನೆಗಳ ಪ್ರಕಾರವೇ ಮಾಡಬೇಕು ಎಂದೂ ಸ್ಪಷ್ಟಪಡಿಸಿದೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ಅನ್ವಯವಾಗಲಿದೆ ಎಂದೂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಸೇನೆಯಲ್ಲಿ ಮಹಿಳೆಯರಿಗೆ ಕಮಾಂಡರ್ ಹುದ್ದೆ ನೀಡಬೇಕೆಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.ದೈಹಿಕ ರಚನೆ ಆಧಾರದ ಮೇಲೆ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡರ್ ಹುದ್ದೆ ವಿರೋಧಿಸುವ ಕೇಂದ್ರದ ನಿಲುವನ್ನು ಕೋರ್ಟ್ ತಿರಸ್ಕರಿಸಿದೆ.