ಕಾರವಾರ: ಮತದಾರರ ಜಾಗೃತಿ ರಥ ಸಂಚಾರ ಆರಂಭ

ಕಾರವಾರ 10; ಉತ್ತರ ಕನ್ನಡ ಜಿಲ್ಲೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ರೂಪಿಸಿರುವ ಮತದಾರರ ಜಾಗೃತಿ ರಥ ಬುಧವಾರದಿಂದ ಜಿಲ್ಲೆಯಲ್ಲಿ ಸಂಚಾರ ಆರಂಭಿಸಿದೆ.

ಕಾರವಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿತ್ತಾಕುಲ ಗ್ರಾಮ ಪಂಚಾಯ್ತಿಯಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ವಿ.ಎಂ.ಹೆಗಡೆ ಹಾಗೂ ಯೋಜನಾ ಅಧಿಕಾರಿ ಶ್ಯಾಮಲಾ   ಜಂಟಿಯಾಗಿ ಜಾಗೃತಿ ರಥಕ್ಕೆ ಚಾಲನೆ ನೀಡಿದರು.

ಜಾಗೃತಿ ರಥ ಬುಧುವಾರದಿಂದ   ಎ. 20 ರವರೆಗೆ ಜಿಲ್ಲೆಯ ವಿವಿಧ ಪ್ರಮುಖ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲಿದೆ.

ಮತದಾರರ ಜಾಗೃತಿ ಅಂಗವಾಗಿ ವಿಶೇಷವಾಗಿ ಅಲಂಕರಿಸಿರುವ ಈ ವಾಹನದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತದಾರರಿಗೆ ಇರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿರುವ ಸಂದೇಶದ ವಿಡಿಯೋ ಪ್ರದರ್ಶನ ಇದ್ದು ಜಿಲ್ಲೆಯ ಸುಮಾರು 10ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳ, ಪ್ರಮುಖ ಗ್ರಾಮಗಳಿಗೆ ಭೇಟಿನೀಡಿ ಪ್ರದರ್ಶನ ನೀಡಲಿದೆ.

ಪ್ರತಿ ಗ್ರಾಮ ಪಂಚಾಯ್ತಿಗೂ ಜಾಗೃತಿ ರಥ ತೆರಳಿದಾಗ ಆ ಗ್ರಾಮದ ಜನರನ್ನು ಒಂದೆಡೆ ಸೇರಿಸಿ ಜಾಗೃತಿ ಚಿತ್ರೀಕರಣವನ್ನು ಪ್ರದರ್ಶಸಲು ವ್ಯವಸ್ಥೆ ಮಾಡಲು ಆಯಾ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿಯಿಂದ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ವಿ.ಎಂ.ಹೆಗಡೆ ತಿಳಿಸಿದ್ದಾರೆ