ಮೊರಾದಾಬಾದ್, ಉತ್ತರ ಪ್ರದೇಶ ಜ 18, ಸ್ಫೂರ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಭಾರತವನ್ನು ‘ವಿಶ್ವಗುರು’ ವನ್ನಾಗಿಸುವತ್ತ ಸ್ವಯಂ ಸೇವಕರು ಶ್ರಮಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಶನಿವಾರ ಇಲ್ಲಿನ ಎಂಐಟಿ ಮೈದಾನದಲ್ಲಿ ಸುಮಾರು 5,000 ಸ್ವಯಂ ಸೇವಕರೊಂದಿಗೆ ‘ಮಕರ ಸಂಕ್ರಾಂತಿ ಮಹೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿನ ತಾರತಮ್ಯ ತೊಡೆದುಹಾಕಲು ಹಾಗೂ ದೇಶದ ಪ್ರಗತಿಗೆ ಸಂಘ ಶ್ರಮಿಸುತ್ತಿದೆ. ದೇಶೀಯ ಜನರ ನಡುವೆ ಸಮನ್ವಯತೆ ಅಗತ್ಯವಾಗಿದೆ. ‘ನಾನು ಸರಿಯಾಗಿದ್ದೇನೆ, ನೀನೂ ಸರಿಯಾಗಿರಬೇಕು’ ಎಂಬ ಭಾವನೆ ನಮ್ಮಲ್ಲಿ ಇರಬೇಕು. ದೇಶದಲ್ಲಿ ಎಲ್ಲೂ ತಾರತಮ್ಯ ಇರಬಾರದು ಎಂದು ಹೇಳಿದರು. ಭಾರತದ ಧರ್ಮ ಅತಿ ವಿಶಿಷ್ಟವಾಗಿದ್ದು, ಇದು ಆಧ್ಯಾತ್ಮಿಕತೆಯನ್ನು ಆಧರಿಸಿದೆ. ಭಾರತದಲ್ಲಿ ಧರ್ಮಗಳು ಭಿನ್ನವಾಗಿ ಕಂಡರೂ ಎಲ್ಲವೂ ಒಂದೇ ಎಂದು ಅವರು ಹೇಳಿದರು.ಯುಗಾದಿ ಸಂದರ್ಭದಲ್ಲಿ ಆಚರಿಸುವಂತೆ ಸಂಕ್ರಾಂತಿ ಹಬ್ಬದ ವೇಳೆಯೂ ಆರೆಸ್ಸೆಸ್ ಇಂತಹ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.