ಹೊಸಪೇಟೆಯಲ್ಲಿ 12.5 ಕೋಟಿ ವೆಚ್ಚದ ವಿವೇಕಾನಂದರ ಪ್ರತಿಮೆ: ಸಚಿವ ಆನಂದ್ ಸಿಂಗ್‌

ಬಳ್ಳಾರಿ/ಹೊಸಪೇಟೆ, ಮೇ 31,ಹುಡಾ ಅಧ್ಯಕ್ಷ ಹುದ್ದೆಯು ಸವಾಲಿನದ್ದಾಗಿದ್ದು, ಪ್ರಾಧಿಕಾರಕ್ಕೆ  ಅಧ್ಯಕ್ಷರಾಗಿ ಆಯ್ಕೆಯಾದವರು ತಮ್ಮ ಬುದ್ಧಿವಂತಿಕೆ ಹಾಗೂ ಸರ್ಕಾರದ ಕಾನೂನು  ಯೋಜನೆಗಳನ್ನು ಅರ್ಥೈಸಿಕೊಂಡು ಸಾರ್ವಜನಿಕರಿಗೆ ಅದರ ಮಾಹಿತಿ ನೀಡಿ ಅಭಿವೃದ್ಧಿ  ಕಾರ್ಯನಿರ್ವಹಿಸಬೇಕು ಎಂದು ಅರಣ್ಯ ಸಚಿವರು ಆಗಿರುವ‌ ಬಳ್ಳಾರಿ ಜಿಲ್ಲಾ ಉಸ್ತುವಾರಿ  ಸಚಿವ ಆನಂದ್ ಸಿಂಗ್ ಹೇಳಿದರು.ಹೊಸಪೇಟೆ ನಗರದ ಹುಡಾ  ಕಚೇರಿ ಸಭಾಂಗಣದಲ್ಲಿ ಭಾನುವಾರ ನೂತನವಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಸ್ಥಾನಕ್ಕೆ ಆಯ್ಕೆಯಾದ ಅಶೋಕ್ ಜೀರೆ ಅವರ ಪದಗ್ರಹಣ ಸಮಾಂಭವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರವು ಜಿಲ್ಲಾಡಳಿತ  ಹಾಗೂ ಜಿಲ್ಲಾಧಿಕಾರಿಗಳ ನಿಯಮಾವಳಿಗಳ ನಡುವೆ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಗಮನ  ಹಾಗೂ ಸಹಕಾರ ಅಧ್ಯಕ್ಷರ ಮೇಲಿರುತ್ತದೆ. ಆದ್ದರಿಂದ ನಗರದ ಏಳಿಗೆಗೆ ಶ್ರಮವಹಿಸಿ  ಅಭಿವೃದ್ಧಿಯತ್ತ ಕೊಂಡ್ಯೊಯ್ಯಬೇಕು. ಹೊಸಪೇಟೆ ನಗರದ ನಕ್ಷೆಯನ್ನೇ ಬದಲಿಸುವ  ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರಲು  ಪ್ರಯತ್ನಿಸುತ್ತೇನೆ ಎಂದರು.ನಗರದ ಮುಖ್ಯಭಾಗದಲ್ಲಿ 12.5 ಕೋಟಿ ವೆಚ್ಚದ ವಿವೇಕಾನಂದರ ಪ್ರತಿಮೆ ನಿರ್ಮಿಸಲು ಇಚ್ಛಿಸಿರುವುದಾಗಿ ಸಚಿವರು ತಿಳಿಸಿದರು.

ಅಶೋಕ್ ಜೀರೆ 9ನೇ ಅಧ್ಯಕ್ಷ:

ನಗರಾಭಿವೃದ್ಧಿ  ಪ್ರಾಧಿಕಾರವು ಈ ಹಿಂದೆ ಎಂಟು ಅಧ್ಯಕ್ಷರನ್ನು ಕಂಡಿದ್ದು, 9ನೇ ಅಧ್ಯಕ್ಷರಾಗಿ ಅಶೋಕ್  ಜೀರೆ ಅವರು ಅಧಿಕಾರ ವಹಿಸಿದ್ದು 9 ಶುಭಸಂಖ್ಯೆಯಾಗಿದ್ದು ಕೇವಲ ಬಡಾವಣೆಗಳ ನಿರ್ಮಾಣ  ಮಾರಾಟ ಮಾತ್ರವಲ್ಲದೇ ನಗರದ ನೈರ್ಮಲ್ಯ ಹಾಗೂ ಉದ್ಯಾನವನ ಅಭಿವೃದ್ಧಿಗೂ ಶ್ರಮವಹಿಸಿ  ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ನೂತನ ಅಧ್ಯಕ್ಷರಾಗಿ  ಅಧಿಕಾರ ಸ್ವೀಕರಿಸಿದ ಅಶೋಕ್ ಜೀರೆ ಮಾತನಾಡಿ, ತುರ್ತುಪರಿಸ್ಥಿತಿ ಸಮಯದಲ್ಲಿ  ಸಂಪರ್ಕ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುವ ಜೊತೆಗೆ ಹಲವು ವರ್ಷಗಳಿಂದ ಯಾವುದೇ ಹುದ್ದೆ  ಆಕಾಂಕ್ಷಿಯಾಗದೇ ದುಡಿದಿದ್ದೇನೆ ನನ್ನ ಸೇವೆ ಗುರುತಿಸಿ ಈ ಅಧಿಕಾರವನ್ನು ನೀಡಿದ್ದು  ಪಾರದರ್ಶಕವಾಗಿ ಆಡಳಿತ ನಿರ್ವಹಿಸುವುದರ ಜೊತೆಗೆ ಸಾರ್ವಜನಿಕರ ಕುಂದುಕೊರತೆಗಳನ್ನು  ನೀಗಿಸುವ ಭರವಸೆ ನೀಡುತ್ತೇನೆ. ನಗರದ ನಿವಾಸಿಗಳಿಗೆ ನೈರ್ಮಲ್ಯ ನಗರ ವ್ಯವಸ್ಥೆ ನಿರ್ಮಾಣ  ಮಾಡುವ ಯೋಜನೆಯನ್ನು ಪ್ರಾಧಿಕಾರದ ಮೂಲಕ ನಿರ್ವಹಿಸುವೆ ಎಂದರು.ಮುಂಬರುವ ದಿನಗಳಲ್ಲಿ ಶಿಕ್ಷಣ ಇಲಾಖೆ ಜತೆಗೂಡಿ ಶಾಲಾ ಆವರಣಗಳಲ್ಲಿ ಒಂದು ಲಕ್ಷ ಸಸಿ ನೆಡುವ ಯೋಜನೆ ಹಮ್ಮಿಕೊಳ್ಳಲಿದ್ದೇನೆ ಎಂದು ಹೇಳಿದರು.ನೂತನ ಅಧ್ಯಕ್ಷರಿಗೆ ಸಚಿವರಾದ ಆನಂದ್ ಸಿಂಗ್ ಅವರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ಈ  ಸಂದರ್ಭದಲ್ಲಿ ನಿಕಟಪೂರ್ವ ಹುಡಾ ಅಧ್ಯಕ್ಷರಾದ ಕೊಟ್ರೇಶ್, ಹುಡಾ ಆಯುಕ್ತರಾದ  ಗುರುಪ್ರಸಾದ್, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ನಾಗವೇಣಿ, ಹುಡಾ ಕಚೇರಿ ಮೊದಲ ಅಧ್ಯಕ್ಷ  ಅಯ್ಯಾಳಿ ತಿಮ್ಮಪ್ಪ ಸೇರಿದಂತೆ ಬಾಬುಲಾಲ್ ಜೈನ್, ಕವಿತಾ ಸಿಂಗ್, ಬಸವರಾಜ ನಾಲ್ವತವಾಡ,  ಕೃಷ್ಣದೇವರಾಯ ಸೇರಿದಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಗಣ್ಯರು ಇದ್ದರು.