ನವದೆಹಲಿ, ಜ 12 : ಸ್ವಾಮಿ ವಿವೇಕಾನಂದರ ವಿಚಾರ ಧಾರೆಗಳು ಸಾಗರದಷ್ಟಿದ್ದವು, ಅವರು ತಮ್ಮ ವಿಚಾರಧಾರೆಗಳ ಮೂಲಕ ಕೋಟ್ಯಂತರ ಭಾರತೀಯರ ಹೃದಯ ಮತ್ತು ಮನಸ್ಸಿನಲ್ಲಿ ನೆಲೆಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇಂದು ವಿವೇಕಾನಂದರ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕುರಿತು ಮಾತನಾಡಿದ ಅವರು,
ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಬೇಲೂರು ಮಠದ ಗಂಭೀರವಾದ ಧ್ಯಾನ ಸ್ಥಳಕ್ಕೆ ತಾವು ಭೇಟಿ ನೀಡಿದ್ದಾಗಿ, ಎರಡು ದಿನಗಳ ಕೋಲ್ಕತ್ತಾ ಪ್ರವಾಸದಲ್ಲಿರುವ ಅವರು ತಮ್ಮ ಛಾಯಾಚಿತ್ರಗಳೊಂದಿಗೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
"ಶ್ರೀ ರಾಮಕೃಷ್ಣರ ಆಲೋಚನೆಗಳು ಸಾಮರಸ್ಯ ಮತ್ತು ಸಹಾನುಭೂತಿಯನ್ನು ಹೆಚ್ಚಿಸುವುದರ ಬಗ್ಗೆ ಪ್ರತಿಪಾದಿಸುತ್ತವೆ. ದೇವರ ಸೇವೆ ಮಾಡುವ ಒಂದು ಉತ್ತಮ ಮಾರ್ಗವೆಂದರೆ ಜನರಿಗೆ, ಅದರಲ್ಲೂ ವಿಶೇಷವಾಗಿ ಬಡವರು ಮತ್ತು ದೀನ ದಲಿತರಿಗೆ ಸೇವೆ ಮಾಡುವುದು ಎಂದೇ ಅವರು ನಂಬಿದ್ದರು ಎಂದು ಪರಮಹಂಸರನ್ನು ಪ್ರಧಾನಿ ಸ್ಮರಿಸಿದರು.
ಭಾನುವಾರ ಬೆಳಗ್ಗೆ ಬೇಲೂರು ಮಠದಲ್ಲಿ ತಾವು ರಾಮಕೃಷ್ಣ ಪರಮಹಂಸ ಅವರಿಗೆ ಗೌರವ ಸಲ್ಲಿಸಿರುವುದಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿ ಬರೆದುಕೊಂಡಿದ್ದಾರೆ.
19ನೇ ಶತಮಾನದಲ್ಲಿದ್ದ ಅತೀಂದ್ರಿಯ ಶಕ್ತಿ ಉಳ್ಳವರಾಗಿದ್ದ ಭಾರತೀಯರಾದ ರಾಮಕೃಷ್ಣ ಪರಮಹಂಸರ ಪ್ರಮುಖ ಶಿಷ್ಯವೃಂದದ ಪೈಕಿ ಸ್ವಾಮಿ ವಿವೇಕಾನಂದರು ವೇದಾಂತ ಮತ್ತು ಯೋಗದ ಭಾರತೀಯ ತತ್ತ್ವಚಿಂತನೆಗಳನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು.
19ನೇ ಶತಮಾನದ ಉತ್ತರಾರ್ಧದಲ್ಲಿ ಅಂತರ್ ಧರ್ಮದ ಜಾಗೃತಿ ಸಮಾವೇಶದಲ್ಲಿ, ಹಿಂದೂ ಧರ್ಮವನ್ನು ಪ್ರಮುಖ ವಿಶ್ವ ಧರ್ಮದ ಸ್ಥಾನಕ್ಕೇರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಇಂತಹ ಮೇರು ವ್ಯಕ್ತಿತ್ವದ ವ್ಯಕ್ತಿ 1863 ಡಿ ಜನವರಿ 12 ರಂದು ಜನಿಸಿದರು. ನರೇಂದ್ರನಾಥ ದತ್ತರಾಗಿದ್ದ ಅವರು ತಮ್ಮ ವ್ಯಕ್ತಿತ್ವದಿಂದಲೇ ಸ್ವಾಮಿ ವಿವೇಕಾನಂದರಾದರು.
1902 ರ ಜುಲೈ 4 ರಂದು ವಿವೇಕಾನಂದರು ಕೊನೆಯುಸಿರೆಳೆದರು. ಅವರ ತತ್ವಚಿಂತನೆಗಳು ಯುವಕರಿಗೆ ಪ್ರೇರಕ ಶಕ್ತಿಯಾಗಿವೆ.